More

    ಗ್ರಂಥಗಳಿಂದ ಸಮಾಜದ ಬದಲಾವಣೆ ಸಾಧ್ಯ, ವಿವಿಧ ಲೇಖಕರ ಎಂಟು ಕೃತಿ ಲೋಕಾರ್ಪಣೆಗೊಳಿಸಿದ ಸತೀಶಕುಮಾರ ಅಭಿಮತ, ಮ. ಅನಂತಮೂರ್ತಿ 24ನೇ ಪುಣ್ಯತಿಥಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಪುಸ್ತಕಗಳು ಬದುಕಿನ ದಾರಿದೀಪ, ಸಮಾಜ ಬದಲಾವಣೆಯಾಗಬೇಕಾದರೆ ಗ್ರಂಥಗಳಿಂದ ಸಾಧ್ಯ, ಈ ದಿಸೆಯಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿ ಸಾಹಿತ್ಯ ಪ್ರಕಾಶನವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ್ ಹೊಸಮನಿ ಹೇಳಿದರು.

    ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಡಾ. ಡಿ.ಎಸ್. ರ್ಕ ಸಾಹಿತ್ಯ ವೇದಿಕೆ, ಸಾಹಿತ್ಯ ಪ್ರಕಾಶನದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿ ಅವರ 24ನೇ ಪುಣ್ಯತಿಥಿ, ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಎಂಟು ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

    ಅಂಗೈಯಲ್ಲೇ ಅರಮನೆ ಎನ್ನುವ ಕಲ್ಪನೆಯೊಂದಿಗೆ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ ನೀಡಲಾಗಿದೆ. ಈವರೆಗೆ ರಾಜ್ಯದಲ್ಲಿ ಸುಮಾರು 3 ಕೋಟಿ ಜನರು ಸದಸ್ಯರಾಗಿದ್ದಾರೆ. ಡಿಜಿಟಲ್ ಗ್ರಂಥಾಲಯ ವ್ಯಾಪ್ತಿಗೆ ರಾಜ್ಯದ ಬೆಂಗಳೂರಿನ ನೂರು ಹಾಗೂ ವಿವಿಧೆಡೆಯ 272 ಸೇರಿ ಒಟ್ಟು 372 ಗ್ರಂಥಾಲಯಗಳನ್ನು ಸೇರಿಸಲಾಗಿದೆ ಎಂದರು.

    ಡಿಜಿಟಲ್ ಗ್ರಂಥಾಲಯಕ್ಕೆ ಧಾರವಾಡ ಜಿಲ್ಲೆಯಲ್ಲಿ ಕಡಿಮೆ ಸದಸ್ಯರಿದ್ದು, ಈ ದಿಸೆಯಲ್ಲಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯಲು ಪ್ರೇರಣೆ ನೀಡಬೇಕು. ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರರಿ ಮೊಬೈಲ್ ಆಪ್ ಮೂಲಕ ಯಾರಾದರೂ ಸದಸ್ಯತ್ವ ಪಡೆಯಬಹುದು. ಇದರಲ್ಲಿ ಸಾವಿರಾರು ಪುಸ್ತಕಗಳನ್ನು ಓದಬಹುದಾಗಿದೆ ಎಂದು ಸಲಹೆ ನೀಡಿದರು.

    ಗೌರವಾರ್ಪಣೆ ಸ್ವೀಕರಿಸಿದ ಲೇಖಕರು, ಖ್ಯಾತ ಭಾಷಣಕಾರರು ಆದ ವ್ಯಾಸ ಪ್ರಕಾಶನದ ಗುರುರಾಜ ಕರಜಗಿ ಅವರು ಮಾತನಾಡಿ, ಪುಸ್ತಕ ಬರೆಯುವುದು ಎಷ್ಟು ಕಷ್ಟದ ಕೆಲಸವೋ ಅಷ್ಟೇ ಪ್ರಕಾಶನ ಮಾಡುವುದು ಕಷ್ಟದ ಕಾರ್ಯ. ಆದರೆ, ಅನೇಕ ಲೇಖಕರ ತೊಂದರೆಗಳನ್ನು ಸಾಹಿತ್ಯ ಪ್ರಕಾಶನವು ನೀಗಿದೆ. ಲೇಖಕನಿಗೆ ಸಿಕ್ಕ ಗೌರವ ಪ್ರಕಾಶಕರಿಗೂ ಸಿಗಬೇಕು ಎಂದರು.

    ಪುಸ್ತಕ ಬಿಡುಗಡೆ:

    ಸಾಹಿತ್ಯ ಪ್ರಕಾಶನ ಹೊರತಂದ ಸುದರ್ಶನ ಮೊಗಸಾಲೆ ಅವರ ವೈರಸ್ ಕಾದಂಬರಿ, ಡಾ. ಈಶ್ವರ ದೈತೋಟ ಅವರ ಪ್ರಕೃತಿ- ಸಂಸ್ಕೃತಿ ಕೂಕಿಲು, ಪ್ರೇಮಶೇಖರ ಅವರ ನಾಲ್ಕನೆಯ ತಲೆಮಾರಿನ ಸಮರ ಹಾಗೂ ಯಾದವೀ ಕಲಹಗಳ ಕುದಿಯುವ ಹಂಡೆ, ಮಧುಕರ ಯಕ್ಕುಂಡಿ ಅವರ ಕುಮಾರವ್ಯಾಸನ ನುಡಿಮುತ್ತುಗಳು, ಡಾ. ಪಿ.ಎಸ್. ಶಂಕರ್ ಅವರ ಆರೋಗ್ಯ: ಸುಖ- ಸಂತೋಷಕ್ಕೆ ಅಡಿಪಾಯ ಮತ್ತು ವಚನಗಳಲ್ಲಿ ದೇಹ- ಮನಸ್ಸು ಹಾಗೂ ಡಾ. ರಾಜನ್ ದೇಶಪಾಂಡೆ ಅವರ ಬಾಳೊಂದು ವಿಸ್ಮಯ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

    ತಮ್ಮ ಕೃತಿಗಳ ಕುರಿತು ಸುದರ್ಶನ ಮೊಗಸಾಲೆ, ಡಾ. ರಾಜನ್ ದೇಶಪಾಂಡೆ, ಮಧುಕರ ಯಕ್ಕುಂಡಿ, ಡಾ. ಈಶ್ವರ ದೈತೋಟ ಅವರು ಅನಿಸಿಕೆ ಹಂಚಿಕೊಂಡರು.

    ಡಾ. ನಾ. ಮೊಗಸಾಲೆ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

    ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮುಣ್ಯ ಪ್ರಾಸ್ತಾವಿಕ ಮಾತನಾಡಿದರು. ಡಾ. ಜಿ.ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಡಾ. ಬಿ.ಎಸ್. ಮಾಳವಾಡ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts