More

    ಗೌಡನ ಕೆರೆಯಲ್ಲಿ ಮೀನುಗಳ ಸಾವು

    ಆಯನೂರು: ಸಮೀಪದ ಗೌಡನಕೆರೆಯಲ್ಲಿ ಕೆಲ ದಿನಗಳಿಂದ ಮೀನುಗಳು ಸಾಯುತ್ತಿದ್ದು ನಿಖರ ಕಾರಣ ತಿಳಿದಿಲ್ಲ. ಬಿಸಿಲಿನ ಧಗೆ ಅಥವಾ ಕೆರೆ ಇಕ್ಕೆಲಗಳಲ್ಲಿ ಶುಂಠಿ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಕೆರೆಗೆ ಸೇರಿ ಮೀನುಗಳು ಸತ್ತಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಕೆರೆ ನೀರು ಮತ್ತು ಸತ್ತಿರುವ ಮೀನಿನ ಮಾದರಿಯನ್ನು ಲ್ಯಾಬ್​ಗೆ ಕಳಿಸಿದರು. ಕೆರೆಯ ಸುತ್ತಲೂ ಸತ್ತು ಬಿದ್ದಿರುವ ಮೀನುಗಳನ್ನು ಗುಂಡಿಯಲ್ಲಿ ಹಾಕಿ ಮುಚ್ಚಲಾಯಿತು. ಮೀನುಗಳ ಸಾವಿನಿಂದ ದುರ್ನಾತ ಬೀರುತ್ತಿದೆ. ಕೆರೆಯನ್ನು ಶಿವಮೊಗ್ಗ ಗುರುಪುರದ ಮಹಿಳಾ ಮೀನುಗಾರರ ಸಂಘಕ್ಕೆ 5 ವರ್ಷದ ಅವಧಿಗೆ ಗುತ್ತಿಗೆ ನೀಡಲಾಗಿದೆ.

    ಭಾನುವಾರ ಲಾಕ್​ಡೌನ್ ಇದ್ದರೂ ಗೌಡನ ಕೆರೆಯಲ್ಲಿ ಮೀನು ಹಿಡಿಯಲಾಗಿದೆ. ಸುತ್ತಲಿನ ಗ್ರಾಮಗಳ ಜನರು ಮೀನು ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಜನರನ್ನು ಚದುರಿಸಿದರು. ಆಗ ಬಲೆಯಲ್ಲಿದ್ದ ಮೀನುಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿತ್ತು. ಯಾರು ಕ್ರಿಮಿನಾಶಕ ಸಿಂಪಡಿಸಿಲ್ಲ. ಕ್ರಿಮಿನಾಶಕ ಸಿಂಪಡಿಸಿದ್ದರೆ ಮೀನುಗಳ ಜತೆಗೆ ಪಕ್ಷಿಗಳು ಹಾಗೂ ಪಶುಗಳು ಸಾಯಬೇಕಿತ್ತು ಎಂಬುದ ಸ್ಥಳೀಯರ ವಾದ.

    ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೊಳಪಡುವ ಗೌಡನ ಕೆರೆ ನೂರಾರು ಎಕರೆ ವಿಸ್ತೀರ್ಣ ಹೊಂದಿದ್ದು ಕಾಟ್ಲಾ, ಕ್ಲಾಸ್​ಕರ್, ರಘು, ಗೌರಿ, ಗೊಜುಳೆ, ಕೊರವ, ಮುರುಗೋಡು ಸೇರಿ ವಿವಿಧ ಜಾತಿಯ ಲಕ್ಷಾಂತರ ಮೀನುಗಳಿವೆ.

    ಮೀನುಗಾರ ಶಿವಮೊಗ್ಗ ಮಂಜುನಾಥ್ ಮಾತನಾಡಿ, ಪ್ರತಿವರ್ಷ ಬಿಸಿಲಿನ ತಾಪಕ್ಕೆ ಮೀನುಗಳು ಸಾಯುವುದು ಸಹಜ. ಪ್ರತಿದಿನ ರೈತರು ಇದೇ ಕೆರೆಯಲ್ಲಿ ತಮ್ಮ ದನಕರುಗಳಿಗೆ ನೀರು ಕುಡಿಸುತ್ತಾರೆ. ಕೊಕ್ಕರೆ, ನೀರು ಕೋಳಿ, ಕಾಗೆ ಇದೇ ಕೆರೆಯ ನೀರನ್ನು ಕುಡಿಯುತ್ತವೆ. ಕ್ರಿಮಿನಾಶಕ ಸಿಂಪಡಿಸಿದ್ದರೆ ಅವು ಕೂಡ ಸಾಯಬೇಕಿತ್ತು. ಆದರೆ ಅಂತಹ ಅನಾಹುತ ಸಂಭವಿಸಿಲ್ಲ ಎಂದರು.

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕ್ರಿಮಿನಾಶಕ ಸಿಂಪಡಿಸಿರುವುದು ಕಂಡುಬಂದಿಲ್ಲ. ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದು ಆಮ್ಲಜನಕ ಕೊರತೆಯಿಂದ ಮೀನುಗಳು ಸಾಯುತ್ತಿವೆ. ಗಾಳಿಯೂ ಅಧಿಕವಾಗಿದ್ದು ಇನ್ನೊಂದೆರಡು ದಿನಗಳಲ್ಲಿ ಕಡಿಮೆ ಆಗಲಿದೆ. ಕೆರೆಗೆ ಔಷಧ ಸಿಂಪಡಿಸಲು ಸೂಚಿಸಲಾಗಿದೆ ಎಂದು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts