More

    ಗೋಮಾಂಸ ರಫ್ತು ನಿಷೇಧಿಸಿ

    ಕಲಬುರಗಿ: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದನ್ನು ಗಮನಿಸಿದರೆ ಕೇವಲ ಗೋವುಗಳನ್ನು ರಕ್ಷಿಸಿ ಕುರಿ, ಕೋಳಿ, ಕೋಣ ಇತರ ಜಾನುವಾರುಗಳನ್ನು ಕೊಲ್ಲಿ ಎಂಬಂತಿದೆ. ಉಳಿದವುಗಳ ಜೀವವಲ್ಲವೇನು ಎಂದು ಖಾರವಾಗಿ ಪ್ರಶ್ನಿಸಿದ ಮಾಜಿ ಉಪ ಸಭಾಪತಿ ಬಿ.ಆರ್. ಪಾಟೀಲ್, ಧಾರ್ಮಿಕತೆ ಮುಂದು ಮಾಡಿ ಜನರ ಭಾವನೆಗಳೊಂದಿಗೆ ಚೆಲ್ಲಾಟ ಆಡುವುದನ್ನು ನಿಲ್ಲಿಸಿ ಎಂದು ಖಡಕ್ ಎಚ್ಚರಿಕೆ ನೀಡಿದರು.
    ದಲಿತ ಮಾದಿಗ ಸಮನ್ವಯ ಸಮಿತಿ ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಯಕ ಯೋಗಿ ಶಿವಶರಣ ಮಾದಾರ ಚನ್ನಯ್ಯ ಅವರ 970ನೇ ಜಯಂತ್ಯುತ್ಸವ ಉದ್ಘಾಟಿಸಿದ ಅವರು, ಗೋಹತ್ಯೆ ನಿಷೇಧ ಕಾಯ್ದೆಯಿಂದ ಏನೂ ಪ್ರಯೋಜನವಾಗಲ್ಲ. ಮೊದಲು ವಿದೇಶಗಳಿಗೆ ಗೋಮಾಂಸ ರಫ್ತು ನಿಷೇಧಿಸಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೇ ಅತಿ ಹೆಚ್ಚು ಗೋಮಾಂಸ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
    ಗೋಹತ್ಯೆ ನಿಷೇಧ ಕಾಯ್ದೆ ಮೂಲಕ ಆಹಾರದ ಹಕ್ಕಿನ ಮೇಲೆ ಬಿಜೆಪಿ ಪ್ರಹಾರ ನಡೆಸಲು ಹುನ್ನಾರ ನಡೆಸಿದೆ. ಗೋರಕ್ಷಕರ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದೇಶಭಕ್ತರು, ಸುಸಂಸ್ಕೃತರು, ಸಭ್ಯರು, ಅಹಿಂಸಾವಾದಿಗಳು ಎಂದು ಹೇಳಿಕೊಳ್ಳುವ ಬಿಜೆಪಿಯವರು ಮೊದಲು ಗೋವಿನಂತೆ ಉಳಿದ ಪ್ರಾಣಿಗಳನ್ನು ರಕ್ಷಿಸಲಿ. ಗೋಮಾಂಸದ ಹೈಟೆಕ್ ದಂಧೆ ಮಾಡಿಕೊಂಡವರಿಗೆ ಕಡಿವಾಣ ಹಾಕಲಿ ಎಂದು ಸವಾಲೆಸೆದರು.
    ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಮಾದಾರ ಚನ್ನಯ್ಯ ಶ್ರೇಷ್ಠ ಶರಣರು. ವಿಶ್ವಗುರು ಬಸವಣ್ಣನವಂತೆ ಎಲ್ಲ ಶರಣರು ಶ್ರೇಷ್ಠರು. ಸಮಾಜ ಸುಧಾರಣೆಗಾಗಿ ಅವರು ನೀಡಿರುವ ವಚನಗಳು ಅನುಭಾವದ ಸಾಹಿತ್ಯವಾಗಿವೆ. ಹೀಗಾಗಿ ಅವುಗಳನ್ನು ಪಾಲಿಸುವ ಮೂಲಕ ಹೊಸ ಸಮಾಜ ನಿರ್ಮಿಸಲು ಎಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.
    ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ನಿರ್ದೇಶಕಿ ಗೀತಾ ರಾಜು ವಾಡೇಕರ್, ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮಾಜಿ ಮೇಯರ್ ಚಂದ್ರಿಕಾ ಪರಮೇಶ್ವರ, ಮುಖಂಡರಾದ ಡಾ.ಕಿರಣ ದೇಶಮುಖ, ಪ್ರವೀಣ ಪಾಟೀಲ್ ಹರವಾಳ, ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್, ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ಪ್ರಮುಖರಾದ ಸುಭಾಷ ಕಾಂಬಳೆ, ಮಲ್ಲಿಕಾರ್ಜುನ ದಿನ್ನಿ, ದಿಗಂಬರ ತ್ರಿಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts