More

    ಗೋಕಾಕದಲ್ಲಿ ಶೀಘ್ರ ಉನ್ನತ ಶಿಕ್ಷಣ ಕೇಂದ್ರ ಆರಂಭ


    ಬೆಳಗಾವಿ: ಮುದಿನ ವರ್ಷದಿಂದ ಗೋಕಾಕದಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣದೊಂದಿಗೆ ಕೆಎಲ್‌ಇ ಸಂಸ್ಥೆಯ ಬೃಹತ್ ಆಸ್ಪತ್ರೆ ಹಾಗೂ ಉನ್ನತ ಶಿಕ್ಷಣ ಕೇಂದ್ರ ತಲೆ ಎತ್ತಲಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಕ್ರಿಯೆಗಳು ನಡೆದಿವೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

    ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಬುಧವಾರ ಕೆಎಲ್‌ಇ ನರ್ಸಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ನರ್ಸಿಂಗ್ ಸೇವಾ ವೃತ್ತಿಗೆ ಸ್ವಾಗತಿಸಿ, ಅವರು ಮಾತನಾಡಿದರು.

    ಗೋಕಾಕದಲ್ಲಿ ಬಿಎಸ್ಸಿ ನರ್ಸಿಂಗ್, ಬಿಬಿಎ, ಬಿಸಿಎ ಸೇರಿ ಪದವಿ ಶಿಕ್ಷಣ ಕೇಂದ್ರ ಪ್ರಾರಂಭಿಸಲಾಗುವುದು. ಈಗಿರುವ ಆಸ್ಪತ್ರೆಯ ಜತೆಗೆ ಸಕಲ ವಿಭಾಗಗಳನ್ನೊಳಗೊಂಡ ದೊಡ್ಡ ಆಸ್ಪತ್ರೆ ಪ್ರಾರಂಭಿಸಲಾಗುವುದು. ಕೆಎಲ್‌ಇ ಹುಟ್ಟಿದ್ದೇ ಹಳ್ಳಿಯ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲ್ಪಿಸಲು. 34 ವರ್ಷದ ಹಿಂದೆ ನರ್ಸಿಂಗ್ ಕಾಲೇಜ್ ಪ್ರಾರಂಭಿಸಿದಾಗ ಈ ಭಾಗದ ವಿದ್ಯಾರ್ಥಿಗಳು ನರ್ಸಿಂಗ್ ಕಲಿಯಲು ಮುಂದೆ ಬರಲಿಲ್ಲ. ಇದರ ಅನುಕೂಲ ಪಡೆದವರು ಕೇರಳಿಗರು. ಇದು ಕೀಳು ಸೇವೆ ಅಲ್ಲ, ವೈದ್ಯರ ನಂತರ ಅತಿ ಹೆಚ್ಚು ಬೇಡಿಕೆಯುಳ್ಳವರು ನರ್ಸಿಂಗ್ ವಿದ್ಯಾರ್ಥಿಗಳು. ಈಗ ಅದರ ಮಹತ್ವ ಎಲ್ಲರಿಗೆ ತಿಳಿದಿದೆ. ಇಲ್ಲಿ ಕಲಿತು ಸೇವೆ ಸಲ್ಲಿಸಿದವರು ಜಗತ್ತಿನ ಯಾವುದೇ ದೇಶದಲ್ಲಿ ಸೇವೆ ಸಲ್ಲಿಸಬಹುದು. ಇಂಗ್ಲಿಷ್ ಭಾಷೆ ಬರಲ್ಲ ಎಂಬ ಕೀಳರಿಮೆ ಬೇಡ. ನಮ್ಮ ಮಾತೃಭಾಷೆ ಬಂದರೆ ಸಾಕು. ಅದರಿಂದಲೇ ರೋಗಿಯೊಂದಿಗೆ ಸಂವಹನ ನಡೆಸಬಹುದು ಎಂದರು.

    ಕೆಎಲ್‌ಇ ಸಂಸ್ಥೆ ನಿರ್ದೇಶಕ ಜಯಣ್ಣ ಮುನವಳ್ಳಿ ಮಾತನಾಡಿ, ಗೋಕಾಕ್‌ನಲ್ಲಿ ನರ್ಸಿಂಗ್ ಕಾಲೇಜ್ ಸ್ಥಾಪನೆಯೊಂದಿಗೆ ಗ್ರಾಮೀಣ ಭಾಗದ ಮಕ್ಕಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ದೊರೆಯುವಂತೆ ಪ್ರಯತ್ನಿಸಲಾಗುತ್ತಿದೆ. ಪ್ರತಿವರ್ಷ ಈ ಭಾಗದ 200 ವಿದ್ಯಾರ್ಥಿಗಳಿಗೆ ಶಿಕ್ಷಣ ಉದ್ಯೋಗ ನೀಡಲು ಉದ್ದೇಶಿಸಲಾಗಿದೆ ಎಂದರು.

    ಕೆಎಲ್‌ಇ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಮಾತನಾಡಿ, ರೋಗಿಗಳೊಂದಿಗೆ ಒಳ್ಳೆಯ ಸಂವಹನದಿಂದ ಸೇವೆ ನೀಡಬೇಕು. ರೋಗಿಗಳ ಸೇವೆ ಅತ್ಯಂತ ಶ್ರೇಷ್ಠವಾದದ್ದು ಎಂದರು. ಗೋಕಾಕ ಕೆಎಲ್‌ಇ ನರ್ಸಿಂಗ್ ಮಹಾವಿದ್ಯಾಲದ ಪ್ರಾಚಾರ್ಯ ಆನಂದ ಎಚ್. ಸ್ವಾಗತಿಸಿದರು. ಡಾ. ಸುಧಾ ರೆಡ್ಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts