More

    ಗೋಲ್ಡ್ ಸ್ಮಗ್ಲಿಂಗ್​ನಲ್ಲೂ ಭಟ್ಕಳಿಗರ ಹೆಸರು

    ಕಾರವಾರ: ವಿದೇಶಗಳಿಂದ ಅಕ್ರಮವಾಗಿ ಬಂಗಾರ ಸಾಗಣೆ ಪ್ರಕರಣಗಳಲ್ಲೂ ಭಟ್ಕಳದವರ ಹೆಸರು ಹೆಚ್ಚೆಚ್ಚು ಕೇಳಲಾರಂಭಿಸಿದೆ. ಕಳೆದ ಒಂದು ವರ್ಷದಲ್ಲಿ ದುಬೈನಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಐದಕ್ಕೂ ಅಧಿಕ ಜನರನ್ನು ಮಂಗಳೂರು, ಕೊಚ್ಚಿ ವಿಮಾ ನಿಲ್ದಾಣಗಳಲ್ಲಿ ಬಂಧಿಸಲಾಗಿದೆ.

    ದೇಶದಲ್ಲಿ ನಡೆದ ಕೆಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಟ್ಕಳ ಮೂಲದವರ ಹೆಸರು ಕೇಳಿ ಬರುತ್ತಿದೆ. ಆಗಾಗ ಎಟಿಎಸ್, ಎನ್​ಐಎ, ಸಿಸಿಬಿ ತಂಡಗಳು ಭಟ್ಕಳಕ್ಕೆ ಬಂದು ಹುಡುಕಾಟ ನಡೆಸುವುದು ಸಾಮಾನ್ಯವಾಗಿದೆ. ಅದೇ ರೀತಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಗಳಲ್ಲೂ ಭಟ್ಕಳದವರ ಹೆಸರು ಕೇಳಿ ಬರುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಟ್ಕಳದ ಹೆಸರು ಹಾಳಾಗುತ್ತಿದೆ. ಇದು ಸ್ಥಳೀಯರಿಗೆ ನುಂಗಲಾರದ ತುತ್ತಾಗಿದೆ.

    ಕೋವಿಡ್ ಸಂದರ್ಭದಲ್ಲಿ ವಿದೇಶದಲ್ಲಿ ಸಿಲುಕಿಕೊಂಡವರನ್ನು ವಾಪಸ್ ಕರೆತರಲು ಭಾರತ ಸರ್ಕಾರ ವ್ಯವಸ್ಥೆ ಮಾಡಿದ ವಂದೇ ಭಾರತ ಮಿಷನ್ ಸಂದರ್ಭದಲ್ಲೂ ಹಲವು ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಪತ್ತೆಯಾಗಿವೆ. ಕಳೆದ ಎರಡು ವರ್ಷಗಳಲ್ಲಿ ಸಣ್ಣ, ಸಣ್ಣ ಮೊತ್ತದ ಬಂಗಾರ ತರುವ ಪ್ರಕರಣ ಹೆಚ್ಚುತ್ತಿದೆ. ಇದರಿಂದ ಪ್ರಕರಣ ದಾಖಲಾದರೂ ಕಸ್ಟಮ್್ಸ ಅಧಿಕಾರಿಗಳ ಗಮನ ಸೆಳೆಯುವುದಿಲ್ಲ ಎಂದು ಸ್ಮಗ್ಲಿಂಗ್ ತಂಡ ಈ ರೀತಿ ಮಾಡುತ್ತಿದೆ ಎಂದು ರೆವೆನ್ಯೂ ಇಂಟಲಿಜೆನ್ಸಿ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಮಗ್ಲರ್​ಗಳ ತಂಡ ಮಂಗಳೂರು, ಕಣ್ಣೂರು, ಭಟ್ಕಳ ಹಾಗೂ ದುಬೈಗಳಲ್ಲಿ ಸಕ್ರಿಯವಾಗಿದೆ ಎಂದು ಕಸ್ಟಮ್್ಸ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸುತ್ತಾರೆ.

    ಹೊಸ ಹೊಸ ಮಾರ್ಗ:

    ಯುಎಇ ಅಥವಾ ದುಬೈನಿಂದ ಬಂಗಾರ ಸಾಗಿಸಲು ಪ್ರತಿ ಬಾರಿಯೂ ಹೊಸ ಮಾರ್ಗಗಳನ್ನು ಬಳಸಲಾಗುತ್ತಿದೆ. ಚಪ್ಪಲಿಯಲ್ಲಿ, ಎನ್-95 ಮಾಸ್ಕ್, ಹೇರ್ ಬ್ಯಾಂಡ್ ಒಳಗೆ, ಬಟ್ಟೆಗಳಿಗೆ ತಂತಿಯಾಗಿ ಬಳಸುವುದು. ಚಿನ್ನವನ್ನು ಪೇಸ್ಟ್ ಮಾಡಿ ಗುಳಿಗೆಗಳನ್ನಾಗಿ ಮಾಡಿಕೊಂಡು ಅದನ್ನು ಗುದ ನಾಳದಲ್ಲಿ ಇಟ್ಟುಕೊಳ್ಳುವುದು. ಹೀಗೆ ಭಿನ್ನ-ವಿಭಿನ್ನ ವಿಧಾನಗಳನ್ನು ಗೋಲ್ಡ್ ಸ್ಮಗ್ಲಿಂಗ್ ಮಾಡಲು ಬಳಸಲಾಗುತ್ತಿದೆ.

    ರೂ. 1 ಲಕ್ಷದವರೆಗೆ ಅವಕಾಶ

    ವಿದೇಶಗಳಲ್ಲಿ ಕನಿಷ್ಠ 1 ವರ್ಷ ಉಳಿದುಕೊಂಡ ಪುರುಷನಾದರೆ ಗರಿಷ್ಠ 50 ಸಾವಿರ, ಮಹಿಳೆಯಾದರೆ ಗರಿಷ್ಠ 1 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಕಸ್ಟಮ್್ಸ ಶುಲ್ಕವಿಲ್ಲದೇ ದುಬೈನಿಂದ ಭಾರತಕ್ಕೆ ತರಬಹುದು. ಅದರ ಮೇಲೆ ಪ್ರತಿ 10 ಗ್ರಾಂ ಚಿನ್ನದ ಗಟ್ಟಿಗೆ 300 ರೂಪಾಯಿ, ಆಭರಣ, ಬಿಲ್ಲೆ ರೂಪದಲ್ಲಿದ್ದರೆ ಪ್ರತಿ 10 ಗ್ರಾಂಗೆ 750 ರೂಪಾಯಿ ಕಸ್ಟಮ್್ಸ ಶುಲ್ಕ ಪಾವತಿಸಿ ಭಾರತಕ್ಕೆ ಬಂಗಾರ ತರಬಹುದು. ಕಸ್ಟಮ್್ಸ ಶುಲ್ಕ ಪಾವತಿಸದ ಹೆಚ್ಚು ಮೌಲ್ಯದ ಬಂಗಾರ ಪತ್ತೆಯಾದಲ್ಲಿ ಪ್ರಯಾಣಿಕರನ್ನು ಬಂಧಿಸುವ ಅಧಿಕಾರ ರೆವೆನ್ಯೂ ಇಂಟಲಿಜೆನ್ಸ್ ಅಧಿಕಾರಿಗಳಿಗಿದೆ.

    ಪ್ರಕರಗಳ ವಿವರ

    *2020 ಸೆಪ್ಟೆಂಬರ್ 30-ದುಬೈನಿಂದ ಕೊಜಿಕೊಡೈ ಏರ್​ಪೋರ್ಟ್​ಗೆ ಆಗಮಿಸಿದ ಭಟ್ಕಳದ ವ್ಯಕ್ತಿಯಿಂದ 40 ಗ್ರಾಂ ಅಕ್ರಮ ಬಂಗಾರ ವಶ.

    *2021 ಜನವರಿ 6 -ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರ ಬಳಿ 641 ಗ್ರಾಂ ಅಕ್ರಮ ಬಂಗಾರ ವಶ.

    *2021 ಮೇ 28 -ದುಬೈನಿಂದ ಮಂಗಳೂರಿಗೆ ಆಗಮಿಸಿದ ವ್ಯಕ್ತಿಯಿಂದ 262 ಗ್ರಾಂ ಅಕ್ರಮ ಬಂಗಾರ ವಶ.

    *2021 ಆಗಸ್ಟ್ 21-ದುಬೈನಿಂದ ಮಂಗಳೂರಿಗೆ ಆಗಮಿಸಿದ ವ್ಯಕ್ತಿಯಿಂದ 614 ಗ್ರಾಂ ಅಕ್ರಮ ಬಂಗಾರ ವಶ.

    ಏರ್​ಪೋರ್ಟ್​ಗಳಲ್ಲಿ ಪತ್ತೆಯಾಗುವ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಸ್ಥಳೀಯವಾಗಿ ಅಕ್ರಮ ವ್ಯವಹಾರಗಳು ನಡೆಯುತ್ತಿರುವ ಬಗ್ಗೆ ನಾವು ನಿಗಾ ವಹಿಸುತ್ತೇವೆ.

    | ಶಿವಪ್ರಕಾಶ ದೇವರಾಜು ಎಸ್​ಪಿ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts