More

    ಗೋಕರ್ಣ ಮಂದಿರ ಆಡಳಿತ ಹಸ್ತಾಂತರ ಪ್ರಕ್ರಿಯೆ ಆರಂಭ

    ಗೋಕರ್ಣ: ಇಲ್ಲಿನ ಪುರಾಣ ಖ್ಯಾತ ಮಹಾಬಲೇಶ್ವರ ಮಂದಿರದ ಆಡಳಿತ ಹಸ್ತಾಂತರ ಕುರಿತಾದ ಅಧಿಕೃತ ನೋಟಿಸ್ ಮಂದಿರದ ಆಡಳಿತ ಮಂಡಳಿಗೆ ನೀಡುವ ಮೂಲಕ ಕುಮಟಾ ವಿಭಾಗೀಯ ಅಧಿಕಾರಿ ಅಜಿತ ಎಂ. ಬುಧವಾರ ಪ್ರಕ್ರಿಯೆ ಪ್ರಾರಂಭಿಸಿದರು.

    ಈ ವೇಳೆ ಮಂದಿರದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ, ಸಿಪಿಐ ಶಿವಪ್ರಕಾಶ ನಾಯ್ಕ, ಪಿಎಸ್​ಐ ನವೀನ ನಾಯ್ಕ ಮುಂತಾದವರಿದ್ದರು. ಹಸ್ತಾಂತರ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಮಂದಿರಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮಂದಿರದಲ್ಲಿ ಅಗತ್ಯವಿರುವ ಕೆಲವೇ ಕೆಲವು ವ್ಯಕ್ತಿಗಳನ್ನು ಬಿಟ್ಟರೆ ಸಾರ್ವಜನಿಕರು ಹಾಜರಿರಲಿಲ್ಲ.

    ಈ ಕುರಿತು ಮಾತನಾಡಿದ ವಿಭಾಗೀಯ ಅಧಿಕಾರಿ ಅಜಿತ ಎಂ., ‘ಮಂದಿರದ ಆಡಳಿತಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಜ್ಯ ಸರ್ಕಾರ ಸಮಿತಿ ಸದಸ್ಯರನ್ನು ನಿಯುಕ್ತಿ ಮಾಡಿದೆ. ಇದನ್ನು ಅನುಸರಿಸಿ ಆಡಳಿತ ಹಸ್ತಾಂತರದ ಮುಂದಿನ ಕ್ರಮಗಳನ್ನು ಪ್ರಾರಂಭಿಸಲು ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳಲು ಮಂದಿರ ಆಡಳಿತಕ್ಕೆ ಇಂದು ಸೂಚಿಸಲಾಗಿದೆ. ಹಸ್ತಾಂತರಕ್ಕೆ ಮುಖ್ಯವಿರುವ ಮಂದಿರದ ವಿವಿಧ ಕಾಗದ ಪತ್ರಗಳು, ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳ ಪಟ್ಟಿ, ಚಿನ್ನಾಭರಣ ತೂಕ ಮಾಡಿ ನಿಗದಿ ಪಡಿಸಲು ಅಕ್ಕಸಾಲಿಗರನ್ನು ಕರೆಯಿಸುವುದು ಸೇರಿದಂತೆ ಎಲ್ಲ ವಿವರಗಳನ್ನು ತಕ್ಷಣ ಒದಗಿಸಿ ಹಸ್ತಾಂತರಕ್ಕೆ ಸಹಕರಿಸಲು ಕೋರಲಾಗಿದೆ. ಈ ಸಂಬಂಧ ಮಂದಿರದ ಆಡಳಿತಾಧಿಕಾರಿಗಳು ಕೆಲವೇ ದಿನಗಳಲ್ಲಿ ಇವುಗಳನ್ನು ಸಲ್ಲಿಸುವ ಭರವಸೆ ನೀಡಿದ್ದಾರೆ. ಕಳೆದ 2018ರ ಅಕ್ಟೋಬರ್​ನಲ್ಲಿ ಒಮ್ಮೆ ಮಂದಿರದ ಆಡಳಿತವನ್ನು ಅಂದಿನ ಸರ್ಕಾರ ಆದೇಶಿಸಿದ ಆಡಳಿತಾಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು. ಹಸ್ತಾಂತರಕ್ಕೆ ಸಂಬಂಧಿಸಿದ ಆಗಿನ ಪಟ್ಟಿ ಇಂದು ಕೂಡ ಲಭ್ಯವಿದೆ. ಸೋಮವಾರದೊಳಗೆ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದರು.

    ಏ. 19ರಂದು ಸವೋಚ್ಚ ನ್ಯಾಯಾಲಯ ಮಂದಿರದ ಆಡಳಿತವನ್ನು ನ್ಯಾಯಮೂರ್ತಿ ಬಿ.ಎನ್. ಕೃಷ್ಣ ನೇತೃತ್ವದ ಸಮಿತಿಗೆ 15ದಿನಗಳೊಳಗೆ ಹಸ್ತಾಂತರಿಸುವಂತೆ ಆದೇಶಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts