More

    ಗೊಬ್ಬರಕ್ಕಾಗಿ ಬೆಳ್ಳಟ್ಟಿಯಲ್ಲಿ ಮಹಿಳೆಯರ ಸಾಲು

    ಶಿರಹಟ್ಟಿ: ಯೂರಿಯಾ ಗೊಬ್ಬರಕ್ಕಾಗಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಯಾರ್ಡ್​ನಲ್ಲಿ ರೈತ ಮಹಿಳೆಯರು ಸಾಲುಗಟ್ಟಿ ನಿಂತಿದ್ದರು.

    ಗುರುವಾರ ರಾತ್ರಿ ಗೊಬ್ಬರ ಬಂದ ಸುದ್ದಿ ತಿಳಿದು ಸಾವಿರಾರು ರೈತರು ಶುಕ್ರವಾರ ಬೆಳಗ್ಗೆ ಎಪಿಎಂಸಿ, ಜನತಾ ಬಜಾರ ಪ್ರಾಂಗಣಕ್ಕೆ ಆಗಮಿಸಿದ್ದರು. ನೂಕುನುಗ್ಗಲು ಉಂಟಾದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಂಡು ಎಲ್ಲರನ್ನೂ ಸರತಿಯಲ್ಲಿ ನಿಲ್ಲಿಸಿ ಒಬ್ಬ ರೈತರಿಗೆ ಎರಡು ಚೀಲದಂತೆ ಮಾರಾಟ ಮಾಡಲಾಯಿತು.

    ಅತಿಯಾದ ಮಳೆಯಿಂದ ಬೆಳೆಗಳ ರಕ್ಷಣೆಗೆ ಯೂರಿಯಾ ಗೊಬ್ಬರದ ಅಗತ್ಯತೆ ಹಿನ್ನೆಲೆಯಲ್ಲಿ ಒಬ್ಬ ರೈತನಿಗೆ ಕೇವಲ ಎರಡು ಚೀಲ ಗೊಬ್ಬರ ನೀಡಲಾಗುತ್ತದೆ ಎಂದು ಸೂಚನೆ ನೀಡಿದ್ದರಿಂದ ಹೆಚ್ಚಿನ ಪ್ರಮಾಣದ ಗೊಬ್ಬರ ಪಡೆಯಲು ತಮ್ಮ ತಮ್ಮ ಕುಟುಂಬದ ಮಹಿಳೆಯರನ್ನು ರೈತರು ಕರೆತಂದಿದ್ದರು.

    ಕೃಷಿ ಇಲಾಖೆ ಮಾಹಿತಿ ಪ್ರಕಾರ, ತಾಲೂಕಿನ 32,673 ಹೆಕ್ಟೇರ್ ಪೈಕಿ 29,375 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆಗಾಲ ಆರಂಭದಿಂದ ಇದುವರೆಗೆ 285 ಮಿ.ಮೀ. ಮಳೆ ಆಗಬೇಕಿತ್ತು. ಆದರೆ 288 ಮಿ.ಮೀ.ಮಳೆಯಾಗಿದೆ.

    ಸದ್ಯದ ಸ್ಥಿತಿಯಲ್ಲಿ ಶಿರಹಟ್ಟಿ, ಬೆಳ್ಳಟ್ಟಿ ಹೋಬಳಿ ಪ್ರದೇಶಕ್ಕೆ 200 ರಿಂದ 300 ಮೆಟ್ರಿಕ್ ಟನ್ ಗೊಬ್ಬರದ ಅಗತ್ಯವಿದ್ದು, ಶಿರಹಟ್ಟಿಗೆ 33 ಮೆಟ್ರಿಕ್ ಟನ್, ಬೆಳ್ಳಟ್ಟಿಗೆ 26 ಮೆಟ್ರಿಕ್ ಟನ್ ಗೊಬ್ಬರ ಪೂರೈಸಲಾಗಿದೆ. ಇನ್ನೆರಡು ದಿನದಲ್ಲಿ ಮತ್ತೆ ಗೊಬ್ಬರ ಬರುವ ಸಾಧ್ಯತೆಯಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನೇತ್ರಾವತಿ ಪಟ್ಟೇದ ಪ್ರತಿಕ್ರಿಯಿಸಿದರು.

    ಅರ್ಧ ತಾಸಲ್ಲಿ ಗೊಬ್ಬರ ಖಾಲಿ

    ನರಗುಂದ: ತಾಲೂಕಿನ ವಿವಿಧ ಮಾರಾಟ ಮಳಿಗೆಗಳಿಗೆ ಹೆಚ್ಚುವರಿಯಾಗಿ ಶುಕ್ರವಾರ 60 ಟನ್ ಯೂರಿಯಾ ರಸಗೊಬ್ಬರವನ್ನು ಪೂರೈಕೆಯಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಖಾಲಿಯಾಗಿದೆ. ಗೊಬ್ಬರ ಸಿಗದೇ ಆಕ್ರೋಶಗೊಂಡ ಕೆಲ ರೈತರನ್ನು ನಿಯಂತ್ರಿಸಲು ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಮುಂಜಾಗ್ರತೆ ಕ್ರಮವಾಗಿ ಪಟ್ಟಣದ ವಿವಿಧ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ, ಡಿವೈಎಸ್ಪಿ ಶಿವಾನಂದ ಕಟಗಿ ಮಾತನಾಡಿ, ಈಗಾಗಲೇ ಗೊಬ್ಬರ ಪಡೆದ ರೈತರು ವಿನಾಕಾರಣ ಗೊಂದಲ ಸೃಷ್ಟಿಸಬಾರದು. ಅರ್ಹ ರೈತರಿಗೆ ಬೇಕಾಗಿರುವ ಹೆಚ್ಚುವರಿ 200 ಟನ್ ಎಚ್​ಸಿಎಫ್ ಕಂಪನಿಯ ಯೂರಿಯಾ ಗೊಬ್ಬರ ಎರಡ್ಮೂರು ದಿನಗಳಲ್ಲಿ ತಾಲೂಕಿಗೆ ಬರಲಿದೆ ಎಂದು ತಿಳಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts