More

    ಗೊಂದಲದ ಗೂಡಾದ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ

    ಯಾವ ದಿಕ್ಕಿನಲ್ಲಿ ನಿರ್ಮಾಣ ಮಾಡಬೇಕೆಂಬ ಬಗ್ಗೆ ಮೂಡದ ಒಮ್ಮತ

    ಕೊಳ್ಳೇಗಾಲ: ಪಟ್ಟಣದ ಎಸ್.ವಿ.ಕೆ. ಬಾಲಕಿಯರ ಕಾಲೇಜು ವೃತ್ತದಲ್ಲಿ ಗುತ್ತಿಗೆದಾರ ವಾಲೆ ಮಹದೇವ ಎಂಬುವರು ಸ್ವಂತ ಖರ್ಚಿನಲ್ಲಿ ಪೂರ್ವಾಭಿಮುಖವಾಗಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸಿದ್ಧತೆ ಕೈಗೊಂಡಿರುವುದು ಕುತೂಹಲ ಕೆರಳಿಸಿದೆ.


    ಈ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ-209 ಹಾದು ಹೋಗಿದ್ದು, ಇಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಡುವುದಾಗಿ ದಲಿತ ಮುಖಂಡ, ಸಿವಿಲ್ ಕಂಟ್ರಾಕ್ಟರ್ ವಾಲೆ ಮಹದೇವ ಘೋಷಣೆ ಮಾಡಿದ್ದರು. ಅದರಂತೆ ನ.26 ರಂದು ಅಂಬೇಡ್ಕರ್ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಸ್ಥಾಪಿಸುವ ಸಂಬಂಧ ಸಿದ್ಧತೆ ಕೈಗೊಂಡಿದ್ದಾರೆ.


    ಇದನ್ನು ಗಮನಿಸಿರುವ ಪಟ್ಟಣದ ಭೀಮನಗರದ ಕೆಲವು ದಲಿತ ಮುಖಂಡರು, ಗೋಪುರ ನಿರ್ಮಿಸುವ ಹಂತದಲ್ಲಿ ವಾಲೆ ಮಹದೇವ ಅವರು ಅಂಬೇಡ್ಕರ್ ಪ್ರತಿಮೆಯನ್ನು ಉತ್ತಾರಭಿಮುಖವಾಗಿ ಅಂದರೆ ಬೆಂಗಳೂರು ಮಾರ್ಗದ ಕಡೆಗೆ ಪ್ರತಿಷ್ಠಾಪಿಸುವುದಾಗಿ ಹೇಳಿದ್ದರು. ಆದರೀಗ, ಏಕಾಏಕಿ ಪೂರ್ವ ದಿಕ್ಕಿನ ಅಂದರೆ ಮಹದೇಶ್ವರ ಬೆಟ್ಟ ಮಾರ್ಗಕ್ಕೆ ಮುಖ ಮಾಡಿ ಪ್ರತಿಮೆ ಪ್ರತಿಷ್ಠಾಪಿಸಲು ಮುಂದಾಗಿರುವುದು ಸರಿಯಲ್ಲ. ಪ್ರತಿಮೆಯನ್ನು ಉತ್ತರಾಭಿಮುಖವಾಗಿಯೇ ಪ್ರತಿಷ್ಠಾಪಿಸಿದರೆ ವೃತ್ತಕ್ಕೆ ಸೇರುವ ಮೂರು ರಸ್ತೆಗಳಿಗೂ ಪ್ರತಿಮೆ ಕಾಣುತ್ತದೆ ಎಂದು ಆಕ್ಷೇಪ ಎತ್ತಿದ್ದಾರೆ.


    ಈ ನಡುವೆ ವಾಲೆ ಮಹದೇವ ಅವರನ್ನು ಸ್ಥಳಕ್ಕೆ ಕರೆಯಿಸಿ ಚರ್ಚಿಸಿದರು. ಮುಖಂಡರಾದ ಕೆ.ಕೆ.ಮೂರ್ತಿ, ಸಿದ್ದಾರ್ಥ, ಶಿವರಾಳ, ಎಸ್.ರಾಜಶೇಖರಮೂರ್ತಿ, ಕೆ.ಜೆ.ಜವರಪ್ಪ, ಚಿಕ್ಕಮಾಳಿಗೆ, ಶಿವಸ್ವಾಮಿ, ಪ್ರಭು, ನಿಂಗರಾಜು ಸೇರಿದಂತೆ ಇತರರು ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸಲು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಾಲೆ ಮಹದೇವು, ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಿದರೆ ಪ್ರತಿಮೆ ನೋಡಲು ಚೆನ್ನಾಗಿ ಕಾಣುತ್ತದೆ. ಬೆಳಗಿನ ಜಾವ ಸೂರ್ಯನ ಬೆಳಕಿಗೆ ಪ್ರತಿಮೆ ಆಕರ್ಷಕವಾಗಿ ಕಂಗೊಳಿಸುತ್ತದೆ ಎಂದು ಸಲಹೆ ನೀಡಿದರು.


    ಉಭಯ ಮುಖಂಡರಲ್ಲಿ ಒಮ್ಮತದ ಅಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ಆ.28 ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಮಾಲೋಚನ ಸಭೆ ನಡೆಸಲು ತೀರ್ಮಾನಿಸಲಾಯಿತು. ಸದ್ಯಕ್ಕೆ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಗೊಂದಲದ ಗೂಡಾಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts