More

    ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ನೇಗಿಲೋಣಿ ಅಂಬರೀಷ್ ಕುಟುಂಬಸ್ಥರ ಬೇಸರ

    ಹೊಸನಗರ: ನಮ್ಮ ಮನೆಯಲ್ಲಿ ಸಾವು ನಡೆದಿದೆ. ಮನೆಮಗ ಗುಂಡಿಗೆ ಬಲಿಯಾಗಿದ್ದಾನೆ. ಊರಲ್ಲೇ ಇದ್ದ ಗೃಹ ಸಚಿವರು ವಿಷಯ ತಿಳಿದರೂ ಮನೆಗೆ ಬರಲಿಲ್ಲ. ಒಂದು ಸಾಂತ್ವನದ ಮಾತು ಹೇಳುವ ಸೌಜನ್ಯವನ್ನೂ ತೋರಲಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ತಾಲೂಕಿನ ನೇಗಿಲೋಣಿಯ ದುಖಃತಪ್ತ ಕುಟುಂಬ ಬೇಸರ ವ್ಯಕ್ತಪಡಿಸಿದೆ.
    ತಾಲೂಕಿನ ನೇಗಿಲೋಣಿ ಕಾಡಿನಲ್ಲಿ ಶಿಕಾರಿಗೆ ಹೋದ ವೇಳೆ ಬಂದೂಕಿನ ಗುಂಡು ಹಾರಿ ಮೃತಪಟ್ಟ ಅಂಬರೀಷ್ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿದ ವೇಳೆ ಕುಟುಂಬಸ್ಥರು ಸಚಿವರ ವಿರುದ್ಧ ಮುನಿಸು ಹೊರಹಾಕಿದರು.
    ಅಂಬರೀಷ್ ಸಾವಿನಿಂದ ಇಡೀ ಊರೇ ದುಃಖದಲ್ಲಿತ್ತು. ಅಂದೆ ನಮ್ಮ ಊರು ಅಂಡಗದೋದೂರಿಗೆ ಬಂದಿದ್ದ ಗೃಹ ಸಚಿವರು ವಿಷಯ ತಿಳಿದಿದ್ದರೂ ನಮ್ಮ ಮನೆಗೆ ಬರಲಿಲ್ಲ. ಮಂತ್ರಿಯಾಗಿರುವ ಜ್ಞಾನೇಂದ್ರ ಮನೆಗೆ ಬಂದು ಏನಾಯಿತು ಎಂದು ಕೇಳುವ ಮಾನವೀಯತೆ ತೋರಲಿಲ್ಲ. ಒಂದು ಮಾತಿನ ಸಾಂತ್ವನವನ್ನೂ ಹೇಳದೆ ಹೋದರು. ಇದು ನಮಗೆ ಬೇಸರ ತರಿಸಿದೆ ಎಂದು ಅಂಬರೀಷನ ಅಕ್ಕ ಅಮಿತಾ ನೋವು ತೋಡಿಕೊಂಡರು.
    ಕಾಡಿಗೆ ಬೇಟೆಗೆಂದು ಅಣ್ಣನ ಜತೆ ಹೋಗಿದ್ದ ಆತನ ಗೆಳೆಯನ ನಡವಳಿಕೆ ಬಗ್ಗೆ ನಮಗೆ ಅನುಮಾನವಿದೆ. ಘಟನೆ ನಂತರ ಅಣ್ಣನ ಗೆಳೆಯ ನಮ್ಮ ಸಂಪರ್ಕದಲ್ಲಿ ಇರದೆ ಪಲಾಯನ ಮಾಡಿದ್ದು, ನಮಗೆ ಬಲವಾದ ಸಂಶಯ ಮೂಡಿಸಿದೆ. ಕೀರ್ತಿ ಮತ್ತು ಅವರ ಮನೆಯವರು ಯಾರೂ ನಮ್ಮ ಮನೆಗೆ ಬರಲಿಲ್ಲ. ಶವ ಸಂಸ್ಕಾರಕ್ಕೂ ಬರಲಿಲ್ಲ. ನಮಗೆ ಹಣದ ಆಮಿಷ ತೋರಲಾಯಿತು. ಸಾವಿಗೆ ಕಾರಣ ತಿಳಿಯಬೇಕಾಗಿದೆ. ಸಾವಿಗೆ ನ್ಯಾಯ ಒದಗಿಸಬೇಕಾಗಿದೆ ಎಂದು ನೊಂದ ಕುಟುಂಬ ಆಗ್ರಹಿಸಿದೆ.
    ಸಾಂತ್ವನ ಹೇಳಲು ಏನಾಗಿತ್ತು?: ನೇಗಿಲೋಣಿ ಸಿದ್ದನಾಯ್ಕ ಕುಟುಂಬದಲ್ಲಿ ಗುಂಡಿನೇಟಿಗೆ ಅಂಬರೀಷ ಮೃತಪಟ್ಟಿದ್ದಾರೆ. ಅಂದು ಗೃಹ ಸಚಿವರು ಅಂಡಗದೋದೂರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೃಹ ಸಚಿವರಾದ ಅವರಿಗೆ ಮಾಹಿತಿ ಇರಲೇಬೇಕು. ಆದರೂ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಏನು ಸಮಸ್ಯೆ ಇತ್ತು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ.
    ಮೃತ ವ್ಯಕ್ತಿಯ ಕುಟುಂಬ ಅನೇಕ ಆರೋಪಗಳನ್ನು ಮಾಡುತ್ತಿದೆ. ಈ ಬಗ್ಗೆ ತನಿಖೆಯಾಗಲಿ. ಈ ಬಗ್ಗೆ ಮೃತ ಕುಟುಂಬದವರ ಯಾವುದೇ ನಿರ್ಧಾರ ಕೈಗೊಂಡರು ನಮ್ಮ ಸಹಮತವಿದೆ. ಇದರಲ್ಲಿ ರಾಜಕೀಯ ಬೇಡ. ನಾನು ಸಾಂತ್ವನ ಹೇಳಲು ಬಂದಿದ್ದೇನೆ. ಆದರೆ ಗೃಹ ಸಚಿವರಾದಿಯಾಗಿ ಜಿಪಂ, ತಾಪಂನಲ್ಲಿ ಆರಿಸಿ ಹೋದ ಜನಪ್ರತಿನಿಧಿಗಳು ಯಾರೂ ಮೃತನ ಮನೆಗೆ ಭೇಟಿ ನೀಡದೆ ಅವರೇ ಅನುಮಾನ ಹುಟ್ಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts