More

    ಹಲ್ಲರೆ ಗ್ರಾಮಕ್ಕೆ ಚಿಕ್ಕಮಾದು, ದರ್ಶನ್ ಭೇಟಿ

    ನಂಜನಗೂಡು: ಅಂಬೇಡ್ಕರ್ ರಸ್ತೆ ನಾಮಫಲಕದ ವಿಚಾರವಾಗಿ ಗ್ರಾಮದಲ್ಲಿ ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ಶಾಸಕರಾದ ಅನಿಲ್ ಚಿಕ್ಕಮಾದು ಹಾಗೂ ದರ್ಶನ್ ಧ್ರುವನಾರಾಯಣ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಗಲಾಟೆಯಿಂದ ತೊಂದರೆಗೊಳಗಾದ ಎರಡೂ ಸಮಾಜದವರಿಗೆ ಸಾಂತ್ವನ ಹೇಳಿದರು.

    ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನ ವಾಸಿಸುವ ಬಡಾವಣೆಗಳಿಗೆ ಶಾಸಕರಾದ ಅನಿಲ್ ಚಿಕ್ಕಮಾದು ಹಾಗೂ ದರ್ಶನ್ ಧ್ರುವನಾರಾಯಣ ಭೇಟಿ ನೀಡಿ ಗಲಭೆಯಿಂದ ಹಾನಿಗೊಳಗಾದ ಮನೆ ಹಾಗೂ ವಾಹನಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
    ನಂತರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಎರಡೂ ಸಮಾಜಗಳ ಮುಖಂಡರ ಸಮ್ಮುಖ ಸಭೆ ನಡೆಸಿ, ಗ್ರಾಮದಲ್ಲಿ ನಡೆದ ಗಲಾಟೆ ಸಂಬಂಧ ಮಾಹಿತಿ ಪಡೆದರು.

    ಶಾಸಕರಾದ ಅನಿಲ್ ಚಿಕ್ಕಮಾದು ಮಾತನಾಡಿ, ಗ್ರಾಮದಲ್ಲಿ ಈ ಹಿಂದೆ ಎರಡೂ ಸಮಾಜಗಳ ಜನ ಸೌಹಾರ್ದಯುತವಾಗಿ ಬಾಳ್ವೆ ನಡೆಸುತ್ತಿದ್ದರು. ಇದೀಗ ಗಲಾಟೆಯಿಂದ ಎರಡೂ ಕಡೆಯವರು ಬಂಧನಕ್ಕೆ ಒಳಗಾಗಿರುವುದರಿಂದ ಗ್ರಾಮದ ಹಲವರು ಊರು ತೊರೆದಿದ್ದಾರೆ. ಹೀಗಾಗಿ ಗ್ರಾಮಸ್ಥರ ಬದುಕು ಕಷ್ಟಕ್ಕೆ ಸಿಲುಕಿದೆ. ಪ್ರಕರಣದ ಸಂಬಂಧ ಈಗಾಗಲೇ ಪೊಲೀಸರು ವಶಕ್ಕೆ ಪಡೆದಿರುವವರನ್ನು ಬಿಟ್ಟು ಉಳಿದವರ ಮೇಲೆ ಮೊಕದ್ದಮೆ ದಾಖಲಿಸದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಎರಡೂ ಸಮಾಜದವರಿಗೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಳ್ಳಲು ಸಹಕಾರ ನೀಡಲಾಗುವುದು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಸಿ, ಸೌಹಾರ್ದಯುತವಾಗಿ ಪ್ರಕರಣಕ್ಕೆ ತೆರೆ ಎಳೆಯಲಾಗುವುದು ಎಂದು ಹೇಳಿದರು.

    ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಗಲಾಟೆಯಿಂದ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣ-ಪುಟ್ಟ ಗಾಯಗಳಾಗಿವೆ. ಒಬ್ಬರ ಕಾಲಿಗೆ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಮತ್ತೆ ಈ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
    ಎಸ್ಟಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು ಮಾತನಾಡಿ, ಪೊಲೀಸರು ಗ್ರಾಮದ ಮತ್ಯಾರನ್ನೂ ಬಂಧಿಸುವುದು ಬೇಡ. ಈಗಾಗಲೇ ಜನ ಭಯಭೀತರಾಗಿದ್ದಾರೆ. ಹೆಂಗಸರು, ಮಕ್ಕಳು ಕೃಷಿ ಕೆಲಸ, ಕೂಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸ್ವಸಹಾಯ ಸಂಘಗಳು ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಲ ವಸೂಲಿಗೆ ಬರುವುದು ಬೇಡ. ಪರಿಸ್ಥಿತಿ ತಿಳಿಯಾಗುವವರೆಗೆ ಸಮಯ ಕೊಡಿಸಬೇಕು ಎಂದು ಹೇಳಿದರು.

    ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬೆಟ್ಟಯ್ಯ ಕೋಟೆ, ಬಿ.ಎಂ.ನಾಗೇಶ್ ರಾಜ್, ದೊರೆಸ್ವಾಮಿ ನಾಯಕ, ಬಂಗಾರು ನಾಯಕ, ಹೆಡತಲೆ ನಾಗರಾಜು, ಮಹೇಶ್, ವಕೀಲ ನಾಗರಾಜಯ್ಯ, ಶಿವಕುಮಾರ್, ಕಾಟೂರು ದೇವರಾಜ, ಅರುಣ್ ಕುಮಾರ್, ತಹಸೀಲ್ದಾರ್ ಶಿವಕುಮಾರ್ ಕಾನೂರು, ಡಿವೈಎಸ್ಪಿ ಜಿ.ಎಸ್.ರಘು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts