More

    ಗೃಹ ಪ್ರವೇಶಕ್ಕಿಲ್ಲ ಮುಹೂರ್ತ!

    ಓರ್ವೆಲ್ ಫರ್ನಾಂಡೀಸ್ ಹಳಿಯಾಳ

    ಹಳಿಯಾಳ ಪಟ್ಟಣದಲ್ಲಿ ಪುರಸಭೆಯಿಂದ ನಿರ್ಮಾಣ ಹಂತದಲ್ಲಿರುವ ಜಿ+2 (ನೆಲಮಾಳಿಗೆ +ಎರಡಂತಸ್ತು)ಮನೆಗಳಿಗೆ ಈ ವರ್ಷವೂ ಫಲಾನುಭವಿಗಳು ಪ್ರವೇಶಿಸುವುದು ಅಸಾಧ್ಯ.

    ಸರ್ವರಿಗೂ ಸೂರು ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ವಸತಿ ರಹಿತರಿಗಾಗಿ ಸೂರು ಕಲ್ಪಿಸುವ ಉದ್ದೇಶದಿಂದ ಪಟ್ಟಣದ ನೂತನ ಸಾರಿಗೆ ಡಿಪೋ ಪಕ್ಕದಲ್ಲಿ ಜಿ+2 ಮಾದರಿಯ 240 ಮನೆಗಳನ್ನು ಪುರಸಭೆ ನಿರ್ವಿುಸುತ್ತಿದೆ. ಮೂರು ವರ್ಷಗಳ ಹಿಂದೆಯೇ ಕೆಲಸ ಆರಂಭಿಸಿದ್ದರೂ ಸದ್ಯಕ್ಕೆ ಮುಕ್ತಾಯಗೊಳ್ಳುವ ಲಕ್ಷಣ ಕಂಡು ಬರುತ್ತಿಲ್ಲ.

    ವಸತಿ ಯೋಜನೆ: ಯೋಜನೆಯಡಿ ಮನೆ ನಿರ್ವಣಕ್ಕೆ 4.30 ಲಕ್ಷ ರೂ. ವೆಚ್ಚ ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗದವರಿಗೆ ಕೇಂದ್ರ ಸರ್ಕಾರ 1.50 ಲಕ್ಷ ರೂ. ರಾಜ್ಯ ಸರ್ಕಾರ 1.20 ಲಕ್ಷ ಸಹಾಯ ಧನ ನೀಡುತ್ತಿದೆ. ಬ್ಯಾಂಕ್​ನಿಂದ 1ಲಕ್ಷ ಸಾಲ, ಫಲಾನುಭವಿಗಳು 60 ಸಾವಿರ ವಂತಿಗೆ ನೀಡಬೇಕು. ಇನ್ನೂ ಪ. ಜಾತಿ/ಪ.ಪಂಗಡಕ್ಕೆ ಕೇಂದ್ರ ಸರ್ಕಾರ 1.50 ಲಕ್ಷ ರೂ., ರಾಜ್ಯ ಸರ್ಕಾರ 1.80 ಲಕ್ಷ ರೂ., ಸಹಾಯ ಧನವನ್ನು ನೀಡುತ್ತಿದ್ದು, ಬ್ಯಾಂಕ್​ನಿಂದ 50 ಸಾವಿರ ರೂ. ಸಾಲ, ಫಲಾನುಭವಿಗಳು 50 ಸಾವಿರ ವಂತಿಗೆ ನೀಡಬೇಕು.

    ಬ್ಯಾಂಕ್ ಸಾಲದ ಸಮಸ್ಯೆ: ಈ ಯೋಜನೆಯಡಿ ಫಲಾನುಭವಿಗಳಿಗೆ ಸಾಲವನ್ನು ನೀಡಲು ಮೊದಲಿಗೆ ರಾಷ್ಟ್ರೀಕೃತ ಬ್ಯಾಂಕ್​ಗಳಾದ ಸಿಂಡಿಕೇಟ್ ಮತ್ತು ಕಾರ್ಪೇರೇಷನ್ ಬ್ಯಾಂಕುಗಳು ಮುಂದೆ ಬಂದಿದ್ದವು. ಆದರೆ, ಪುರಸಭೆ ಮತ್ತು ಬ್ಯಾಂಕ್​ಗಳ ನಡುವಿನ ಸಂವಹನ ಕೊರತೆಯಿಂದಾಗಿ ಸಾಲ ಸೌಲಭ್ಯ ನೀಡುವ ಪ್ರಕ್ರಿಯೆ ನಿಂತು ಹೋಯಿತು ಎಂದು ಫಲಾನುಭವಿಗಳು ಆರೋಪಿಸುತ್ತಿರುವುದು ಕೇಳಿ ಬರುತ್ತಿದೆ.

    240 ಫಲಾನುಭವಿಗಳಲ್ಲಿ 56 ಅರ್ಜಿದಾರರು ವಸತಿ ಯೋಜನೆಗೆ ಬೇಕಾದ ತಮ್ಮ ಪಾಲನ್ನು ಪಾವತಿಸಿದ್ದಾರೆ. 48 ಅರ್ಜಿದಾರರು ತಮ್ಮ ವಂತಿಗೆಯನ್ನು ಈವರೆಗೆ ಪಾವತಿಸಲಿಲ್ಲ, ಇನ್ನುಳಿದ 136 ಫಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್​ಗಳ ಬದಲು ಕೆಡಿಸಿಸಿ ಬ್ಯಾಂಕ್​ನಿಂದ ಸಾಲ ಸೌಲಭ್ಯ ನೀಡುವ ವ್ಯವಸ್ಥೆಯನ್ನು ಪುರಸಭೆ ಮಾಡುತ್ತಿದೆ.

    ಕಾಮಗಾರಿ ಸ್ಥಗಿತ: ಸದ್ಯಕ್ಕೆ ವಸತಿ ಯೋಜನೆಯ ಗುತ್ತಿಗೆದಾರರು ಅನುದಾನದ ಕೊರತೆಯಿಂದಾಗಿ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಸದ್ಯ ನಿರ್ವಿುಸಿರುವ ಮನೆಗಳಿಗೆ ಬಣ್ಣ, ನೀರು ಮತ್ತು ವಿದ್ಯುತ್ ಸಂಪರ್ಕ, ರಸ್ತೆ, ಚರಂಡಿ ಇನ್ನುಳಿದ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಬಾಕಿ ಉಳಿದಿದೆ. 12 ಕೋಟಿ ರೂ. ವೆಚ್ಚದ ಈ ಯೋಜನೆಯ ಅರ್ಧ ಮೊತ್ತ ಗುತ್ತಿಗೆದಾರರಿಗೆ ಮಂಜೂರಾಗಿದೆ. ಈಗ ಫಲಾನುಭವಿಗಳು ಮತ್ತು ಪುರಸಭೆಯವರು ಯೋಜನೆಗೆ ನೀಡಬೇಕಾದ ತಮ್ಮ ಪಾಲಿನ ಹಣವನ್ನು ನೀಡಿದರೇ ಮಾತ್ರ ಕಾಮಗಾರಿ ಮುಂದುವರೆಯಲಿದೆ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಸದ್ಯ ಪುರಸಭೆಯಿಂದ ಜಿ+ ಯೋಜನೆ ಕುರಿತು ನಿಖರವಾದ ಮಾಹಿತಿ, ಭರವಸೆ ಫಲಾನುಭವಿಗಳಿಗೆ ದೊರೆಯದ ಕಾರಣ ಈ ವರ್ಷ ಮನೆ ಸಿಗುವ ಲಕ್ಷಣ ಕಾಣದಾಗಿದೆ.

    ಪುರಸಭೆಯು ಫಲಾನುಭವಿಗಳಿಗೆ ಗೃಹ ಸಾಲದ ಬದಲು ಸ್ವ ಉದ್ಯೋಗ ಆಧಾರದ ಮೇಲೆ ಬ್ಯಾಂಕ್​ವೊಂದರಿಂದ ಸಾಲ ಸೌಲಭ್ಯ ಒದಗಿಸಿದ್ದು, ಅದಕ್ಕೆ ಶೇ. 13.5 ಬಡ್ಡಿ ಆಕರಿಸಲಾಗುತ್ತಿರುವುದರಿಂದ ಈ ಸಾಲದ ಕಂತು ಫಲಾನುಭವಿಗಳಿಗೆ ಹೊರೆಯಾಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗೃಹ ಸಾಲದ ಬಡ್ಡಿ ದರ ಅತ್ಯಂತ ಕಡಿಮೆಯಿದೆ. ಹೀಗಿರುವಾಗ ಜಿಲ್ಲಾಧಿಕಾರಿಗಳು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಸಾಲ ಸೌಲಭ್ಯ ನೀಡಲು ಮುಂದಾಗಬೇಕು. | ಉದಯ ಹೂಲಿ ಪುರಸಭೆ ಪ್ರತಿಪಕ್ಷ ನಾಯಕ

    ಫಲಾನು ಭವಿಗಳಿಗೆ ಎದುರಾಗಿರುವ ಬ್ಯಾಂಕ್ ಸಾಲ ಸೌಲಭ್ಯದ ಸಮಸ್ಯೆಯನ್ನು ಶಾಸಕ ಆರ್.ವಿ. ದೇಶಪಾಂಡೆ ಅವರ ಗಮನಕ್ಕೆ ತಂದಿದ್ದು, ಆದಷ್ಟು ಬೇಗ ಫಲಾನುಭವಿಗಳಿಗೆ ಹಸ್ತಾಂತರಿಸಲು ನಾವು ಯೋಜಿಸುತ್ತಿದ್ದೇವೆ. | ಅಜರ್ ಬಸರಿಕಟ್ಟಿ ಪುರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts