More

    ಗೃಹಲಕ್ಷ್ಮೀಗೆ ಹಣ ಪಡೆದ ಗ್ರಾಮ ಒನ್‌ಗೆ ಬೀಗ

    ಬೈಲಹೊಂಗಲ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಬಂದ ಲಾನುಭವಿಗಳಿಂದ ಹಣ ಪಡೆಯುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಇಂಚಲ ಗ್ರಾಮದ ಕರ್ನಾಟಕ ಗ್ರಾಮ ಒನ್ ಸೇವಾ ಕೇಂದ್ರಕ್ಕೆ ನಾಗರಿಕರ ವೇಷದಲ್ಲಿ ಭೇಟಿ ನೀಡಿದ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪೂರ ಆ ಸೇವಾ ಕೇಂದ್ರಕ್ಕೆ ಬೀಗ ಹಾಕಿಸಿದ ಘಟನೆ ಮಂಗಳವಾರ ನಡೆದಿದೆ.

    ಸಮೀಪದ ಇಂಚಲ ಗ್ರಾಮದ ಗ್ರಾಪಂ ಕಾರ್ಯಾಲಯದ ಹತ್ತಿರದ ಕರ್ನಾಟಕ ಗ್ರಾಮ ಒನ್ ಸೇವಾ ಕೇಂದ್ರಕ್ಕೆ ಎಸಿ ಮಾರುವೇಷದಲ್ಲಿ ಹೋಗಿ ನಮ್ಮ ತಾಯಿಯವರದ್ದು ಗೃಹಲಕ್ಷ್ಮೀಗೆ ಅರ್ಜಿ ಹಾಕುವುದಿದೆ ದಾಖಲಾತಿ ಏನು ಬೇಕು ಎಂದು ಕೇಳಿದಾಗ, ಕಂಪ್ಯೂಟರ್ ಆಪರೇಟರ್ ರಾಜಶೇಖರ ಮಾರಿಹಾಳ ‘ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಪಡಿತರ ಚೀಟಿ ಬೇಕು’ ಎಂದು ತಿಳಿಸಿದ್ದಾನೆ.

    ಬಳಿಕ ಎಸಿ ಪ್ರಭಾವತಿ ಎಷ್ಟು ದುಡ್ಡು ತೆಗೆದುಕೊಳ್ಳುತ್ತಿರಾ? ಎಂದು ಕೇಳಿದಾಗ, ಕೆವೈಸಿ ಮಾಡಲು 50 ರೂ., ಅರ್ಜಿ ಹಾಕಲು 100 ರೂ. ಪಡೆಯುತ್ತೇವೆ ಎಂದು ಉತ್ತರಿಸಿದ್ದಾನೆ. ಪ್ರತಿ ದಿವಸ ಎಷ್ಟು ಅರ್ಜಿ ಹಾಕುತ್ತೀರಾ? ಎಂದು ಪ್ರಶ್ನಿಸಿದಾಗ, ಸೋಮವಾರ 70 ಅರ್ಜಿ ಹಾಕಿದ್ದೇವೆ. ಇಂದು ಸರ್ವರ್ ಬ್ಯೂಜಿ ಇದೆ ಎಂದು ಹೇಳಿದ್ದಾನೆ. ಸೇವಾ ಕೇಂದ್ರದಲ್ಲಿ ಮೂವರು ಕೆಲಸಗಾರರಿದ್ದು, ಅವರ ಸಂಬಳ, ವಿದ್ಯುತ್ ಬಿಲ್, ಕಂಪ್ಯೂಟರ್ ಬಾಡಿಗೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾನೆ. ಬಳಿಕ ಎಸಿ ಎಂಬುದು ಗೊತ್ತಾಗಿ ಗಾಬರಿಗೊಂಡಿದ್ದಾನೆ. ಬಳಿಕ ಎಸಿ ಪ್ರಭಾವತಿ ಅಧಿಕಾರಿಗಳನ್ನು ಕರೆದು ಕೂಡಲೇ ಸೇವಾ ಕೇಂದ್ರಕ್ಕೆ ಬೀಗ ಹಾಕಿಸಿದ್ದಾರೆ.

    ಲೈಸೆನ್ಸ್ ರದ್ದತಿಗೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಪ್ರತಿ ಗೃಹಲಕ್ಷ್ಮೀ ಅರ್ಜಿಗೆ ಸರ್ಕಾರವೇ 12 ರೂ. ನಿಗದಿಪಡಿಸಿ ಪಾವತಿಸಲಿದೆ. ಯಾವುದೇ ಸೇವಾ ಕೇಂದ್ರದಲ್ಲಿ ದುಡ್ಡು ಪಡೆಯುತ್ತಿದ್ದರೆ ನೇರವಾಗಿ ನಮ್ಮನ್ನು ಸಂಪರ್ಕಿಸಬೇಕು ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪೂರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts