More

    ‘ಗೃಹಲಕ್ಷ್ಮಿ’ಯರಿಗೆ ಅಧಿಕ ಮಾಸ! -ದಾವಣಗೆರೆ ಜಿಲ್ಲೆಯ 4.5 ಲಕ್ಷ ಮಂದಿಗೆ ಲಾಭ ನಿರೀಕ್ಷೆ -ನಾಳೆಯಿಂದ ಅರ್ಜಿ ಸ್ವೀಕಾರ 

    ಡಿ.ಎಂ.ಮಹೇಶ್, ದಾವಣಗೆರೆ
    ಸರ್ಕಾರದ ಬಹುನಿರೀಕ್ಷಿತ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ ಶುರುವಾಗಿದೆ. ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು ಜಿಲ್ಲೆಯ ಮಹಿಳೆಯರಲ್ಲೂ ಕಾತರದ ಗಳಿಗೆ ಎದುರು ನೋಡುತ್ತಿದ್ದಾರೆ.
    ಜಿಲ್ಲೆಯಲ್ಲಿ 3,33,041 ಬಿಪಿಎಲ್, 45,723 ಅಂತ್ಯೋದಯ ಅನ್ನ ಪಡಿತರ ಚೀಟಿದಾರರಿದ್ದಾರೆ. ಬಡತನ ರೇಖೆಗಿಂತ ಮೇಲ್ಪಟ್ಟು ಸುಮಾರು 45 ಸಾವಿರದಷ್ಟು ಕುಟುಂಬಗಳಿವೆ. ಈ ಲೆಕ್ಕಾಚಾರ ಆಧರಿಸಿ 4.5 ಲಕ್ಷ ನಾರಿಯರು ಇದರ ಲಾಭ ಪಡೆಯಲಿದ್ದು, ತಿಂಗಳೊಂದಕ್ಕೆ 90 ಕೋಟಿ ರೂ. ಜಮೆಯಾಗುವ ಅಂದಾಜಿದೆ.
    ಯೋಜನೆ ಜಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದೆ. ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು ಸೇರಿ 228 ಕೇಂದ್ರಗಳಲ್ಲಿ ನೋಂದಣಿಗೆ ಅರ್ಜಿ ಸ್ವೀಕೃತಿ ಕಾರ್ಯ ಗುರುವಾರದಿಂದ ಶುರುವಾಗಲಿದೆ. ಕೆಲವೆಡೆ ಆಯ್ದ ಕಚೇರಿ, ಹಾಸ್ಟೆಲ್, ಸಮುದಾಯಭವನ, ಗುರುಭವನ, ಕ್ಯಾಂಟೀನ್ ಮಳಿಗೆಗಳನ್ನೂ ಸಹ ಹೆಚ್ಚುವರಿ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ.
    ನೋಂದಣಿ ಮೇಲ್ವಿಚಾರಣೆಗಾಗಿ ಗ್ರಾಮಾಂತರ ಭಾಗದಲ್ಲಿ 195 ಪಿಡಿಒಗಳು, ಆರೂ ತಾಲೂಕು ಕೇಂದ್ರದಲ್ಲಿ 33 ಮಂದಿ ಅಧಿಕಾರಿ-ಸಿಬ್ಬಂದಿಯನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನಿಯೋಜಿತ ಅಧಿಕಾರಿ-ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಗುರುತಿಸಿದ ಸೇವಾ ಕೇಂದ್ರಗಳಲ್ಲಿ ಮಾತ್ರ ಸೇವಾಸಿಂಧು ಪೋರ್ಟಲ್‌ನಲ್ಲಿ ದಾಖಲಾತಿ ಸಹಿತ ನೋಂದಾವಣೆ ಆಗಬಹುದು. ಇದಕ್ಕೆ ಶುಲ್ಕ ಭರಿಸಬೇಕಿಲ್ಲ.
    ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ಗುರುತಿಸಲ್ಪಟ್ಟ ಮಹಿಳೆಗೆ ಈ ಹಣ ತಲುಪಲಿದೆ. ಪಡಿತರ ಚೀಟಿ, ಯಜಮಾನಿ ಮತ್ತು ಪತಿಯ ಆಧಾರ್‌ಕಾರ್ಡ್ ಸಂಖ್ಯೆ, ಮನೆಯೊಡತಿಯ ಆಧಾರ್‌ಗೆ ಜೋಡಣೆಯಾದ ಬ್ಯಾಂಕ್ ಖಾತೆಯ ಪಾಸ್‌ಪುಸ್ತಕ ಅಥವಾ ಫಲಾನುಭವಿ ಬಯಸುವ ಪ್ರತ್ಯೇಕ ಬ್ಯಾಂಕ್ ಖಾತೆಯ ದಾಖಲಾತಿಗಳನ್ನು ಗುರುತಿಸಿದ ಕೇಂದ್ರಗಳಿಗೆ ನೀಡಿ ನೋಂದಣಿ ಆಗಬಹುದು.
    ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರಗಳಲ್ಲಿ ದಿನವೊಂದಕ್ಕೆ ತಲಾ 60 ಫಲಾನುಭವಿಗಳ ಅರ್ಜಿ ಪಡೆಯಲಾಗುತ್ತದೆ. ಮುನ್ನಾ ದಿನವೇ ಮೊಬೈಲ್ ಸಂಖ್ಯೆಗಳಿಗೆ ರವಾನೆಯಾಗುವ ಸಂದೇಶದನ್ವಯ ನಿಗದಿತ ದಿನದಂದು ಫಲಾನುಭವಿಗಳು ಗುರುತಿಸಿದ ಕೇಂದ್ರಗಳಿಗೆ ದಾಖಲಾತಿ ನೀಡಿ ನೋಂದಣಿ ಆಗಬಹುದು. ಜನದಟ್ಟಣೆ ತಪ್ಪಿಸಲು ಈ ಕ್ರಮ ಅನುಸರಿಸಲಾಗಿದೆ. ಸಂದೇಶ ಬಾರದವರು ಅನಗತ್ಯವಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಆಯ್ಕೆ ಆಗಬೇಕಿದೆ ಪ್ರಜಾಪ್ರತಿನಿಧಿಗಳು:
    ಯೋಜನೆ ಸುಸೂತ್ರ ಜಾರಿ ಸಂಬಂಧ ಪ್ರತಿ 1 ಸಾವಿರ ಜನಸಂಖ್ಯೆಗೆ ಒಬ್ಬರಂತೆ ಆಯ್ಕೆ ಮಾಡಲಾದ ಪ್ರಜಾಪ್ರತಿನಿಧಿಗಳು ಮನೆ ಮನೆಗೆ ಭೇಟಿ ನೀಡಿಯೂ ಫಲಾನುಭವಿಗಳನ್ನು ನೋಂದಣಿ ಮಾಡಿಕೊಳ್ಳಲಿದ್ದಾರೆ. ಜಿಲ್ಲಾ ಸಚಿವರು ಆಯ್ಕೆ ಮಾಡಿ ಅನುಮೋದಿಸಬೇಕಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಜಾಪ್ರತಿನಿಧಿಗಳ ಸೇವೆ ಸದ್ಯಕ್ಕಿಲ್ಲ ಎನ್ನಲಾಗುತ್ತಿದೆ.
    ಆಧಾರ್‌ಗೆ ಜೋಡಣೆಯಾದ ಫಲಾನುಭವಿಗಳಿಗೆ ನೇರ ವರ್ಗಾವಣೆ ಮೂಲಕ ಪ್ರತಿ ಮಾಹೆ 2 ಸಾವಿರ ರೂ. ಖಾತೆಗೆ ಜಮೆ ಆಗಲಿದೆ. ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗದವರಿಗೆ ಪ್ರತ್ಯೇಕ ವ್ಯವಸ್ಥೆ ಮೂಲಕ ಅರ್ಹತೆ ಪರಿಶೀಲಿಸಿದ ನಂತರವೇ ಹಣ ಬರಲಿದೆ. ಸಮಸ್ಯೆಗಳಿದ್ದಲ್ಲಿ ಅಥವಾ ಮಾಹಿತಿ ಬಾರದಿದ್ದಲ್ಲಿ ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆ 1902ಕ್ಕೆ ಕರೆ ಮಾಡಬಹುದು. ಅಥವಾ 8147500500 ಈ ನಂಬರ್‌ಗೆ ಎಸ್‌ಎಂ ಎಸ್ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದು.

    ಕೋಟ್
    ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಗೆ ಯಾವುದೇ ಗಡುವಿಲ್ಲ. ಸಂದೇಶ ಬಂದ ನಂತರದಲ್ಲಿ ನಿಗದಿತ ಕೇಂದ್ರಗಳಲ್ಲಿ ಗುರುವಾರದಿಂದ ಅರ್ಜಿ ಸಲ್ಲಿಸಬಹುದು. ಫಲಾನುಭವಿಗಳು ಆತುರ ಮತ್ತು ಆತಂಕಕ್ಕೆ ಒಳಗಾಗಬೇಕಿಲ್ಲ.
    ವಾಸಂತಿ ಉಪ್ಪಾರ್
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts