More

    ಗೃಹಲಕ್ಷ್ಮಿಗೆ ಕಾಡಿದ ಸರ್ವರ್ ಕಾಟ -ಮೊದಲ ದಿನ ವೆಬ್‌ನಲ್ಲಿ 2738 ನೋಂದಣಿ – ಮೆಸೇಜ್ ಬಂದರೂ ಬಾರದ ಕೆಲ ಗೃಹಿಣಿಯರು

    ದಾವಣಗೆರೆ: ಮನೆ ಯಜಮಾನಿ ಖಾತೆಗೆ ಮಾಸಿಕ 2 ಸಾವಿರ ರೂ. ಜಮೆ ಮಾಡುವ ಸರ್ಕಾರದ ಗೃಹಲಕ್ಷ್ಮೀ ಯೋಜನೆ ನೋಂದಣಿ ಗುರುವಾರ ಜಿಲ್ಲಾದ್ಯಂತ ಶುರುವಾಗಿದ್ದು, ಜಿಟಿಜಿಟಿ ಮಳೆ ಜತೆಗೆ ಸರ್ವರ್ ಕಾಟ ಎದುರಾಯಿತು.
    ಮೊದಲ ದಿನ ವೆಬ್ ಮೂಲಕ 2738 ಜನರು ನೋಂದಣಿಯಾದರು. ಬೆಳಗ್ಗೆ ಅಲ್ಲಲ್ಲಿ ಸರ್ವರ್ ಮತ್ತಿತರೆ ತಾಂತ್ರಿಕ ಸಮಸ್ಯೆ ಕಾಡಿತು. ನೋಂದಣಿ ತುಸು ತಡವಾಗುತ್ತಿದ್ದ ಅರಿವಾಗುತ್ತಿದ್ದಂತೆಯೇ ಮಧ್ಯಾಹ್ನದ ನಂತರ ಮೊಬೈಲ್ ಆ್ಯಪ್ ಮೂಲಕವೇ ನೋಂದಣಿಗೆ ಚಾಲನೆ ನೀಡಲಾಯಿತು.
    ಜಿಲ್ಲೆಯ ಎಲ್ಲ ನಗರ ಪ್ರದೇಶದ 33 ಹಾಗೂ ಗ್ರಾಮೀಣ ಪ್ರದೇಶದಲ್ಲಿನ ನಿಗದಿತ 195 ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು ಹಾಗೂ ನಿಗದಿಪಡಿಸಿದ ಸರ್ಕಾರಿ ಕಚೇರಿ ಕೇಂದ್ರಗಳಲ್ಲಿ ದಾಖಲಾತಿಗಳನ್ನು ಪಡೆಯುವ ಕಾರ್ಯ ಆರಂಭವಾಯಿತು.
    ಬೆಳಗ್ಗೆಯಿಂದಲೇ ಪಡಿತರ ಚೀಟಿ, ಆಧಾರ್ ಕಾರ್ಡ್‌ನೊಂದಿಗೆ ಸಾರ್ವಜನಿಕರು ಕೇಂದ್ರಗಳತ್ತ ದಾವಿಸಿದರು. ಕೆಲವೆಡೆ ಮೊಬೈಲ್ ಮೆಸೇಜ್ ತಲುಪಿದ್ದವರು ಕೇಂದ್ರಗಳತ್ತ ಬರಲಿಲ್ಲ. ಮತ್ತೆ ಕೆಲವರು ಸಮಯ ಮೀರಿದ ನಂತರ ಎಚ್ಚೆತ್ತು ದಾಂಗುಡಿ ಇಟ್ಟರು. ಕೆಲವರು ಅನೇಕ ಮೊಬೈಲ್ ಹೊಂದಿದ್ದರಿಂದ ಯಾವ ಖಾತೆಗೆ ಆಧಾರ್ ಸೀಡಿಂಗ್ ಆಗಿದೆ ಎಂಬ ಮಾಹಿತಿ ಕೊರತೆ ಎದುರಿಸುತ್ತಿದ್ದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಿಯೋಜಿಸಲಾದ ನೋಡಲ್ ಅಧಿಕಾರಿಗಳು ಬಂದ ಜನರಿಗೆ ಮಾಹಿತಿ ನೀಡುತ್ತಿದ್ದರು. ಕೆಲವರು ಕುತೂಹಲಕ್ಕೆ ಬಂದಿದ್ದರಿಂದ ಕೆಲವೆಡೆ ಜನಸಂದಣಿ ಇತ್ತು.
    ಮೊಬೈಲ್ ಸಂದೇಶ ಬಂದವರು ಮಾತ್ರವೇ ದಾಖಲಾತಿಗಳೊಂದಿಗೆ ಬನ್ನಿ. ಇತರರು ಬರಬೇಡಿ ಎಂದು ಕೇಂದ್ರದ ಸಿಬ್ಬಂದಿ ಹೇಳುತ್ತಿದ್ದುದು ಕಂಡುಬಂತು. ಸಾರ್ವಜನಿಕರ ಮಾಹಿತಿಗೆ ಮಾಹಿತಿಪತ್ರವನ್ನು ಅಂಟಿಸಲಾಗಿತ್ತು. ಉಚಿತ ಸಹಾಯವಾಣಿ ಸಂಖ್ಯೆ 1902ಕ್ಕೆ ಕರೆ ಮಾಡುವಂತೆ ಅಥವಾ 8147500500 ಈ ನಂಬರ್‌ಗೆ ಪಡಿತರ ಚೀಟಿ ಸಂಖ್ಯೆಯನ್ನು ಎಸ್‌ಎಂಎಸ್ ಮಾಡುವಂತೆ ಸೂಚಿಸಲಾಗುತ್ತಿತ್ತು. ಜನರು ಮೊಬೈಲ್‌ಗಳಲ್ಲಿ ಮೆಸೇಜ್ ಮಾಡುವಲ್ಲಿ ನಿರತರಾಗಿದ್ದರು.
    ಈ ಕೇಂದ್ರಗಳಲ್ಲಿ ಗೃಹಜ್ಯೋತಿಗಾಗಿ ಅರ್ಜಿ ಹಿಡಿದು ಬರುತ್ತಿದ್ದರು. ಕೆಲವರು ವಯೋವೃದ್ಧರು ಆಧಾರ್‌ಕಾರ್ಡ್ ತಿದ್ದುಪಡಿ ಮತ್ತಿತರೆ ಸೇವೆಗೆ ಬರುತ್ತಿದ್ದುದೂ ಕಂಡುಬಂತು. ಕೆಲವೇ ದಿನದಲ್ಲಿ ಪ್ರಜಾಪ್ರತಿನಿಧಿಗಳ ಆಯ್ಕೆಯಾದಲ್ಲಿ ನೋಂದಣಿ ಚುರುಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts