More

    ಗುತ್ತಿಗೆ ಕಾರ್ಮಿಕರಿಗೆ ಕಾಯ್ದೆಬದ್ಧ ಸೌಲಭ್ಯಗಳನ್ನು ನೀಡಿ -ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹೇಳಿಕೆ

    ದಾವಣಗೆರೆ: ಕಾರ್ಮಿಕ ಇಲಾಖೆ ಕೇವಲ ಸಂಸ್ಥೆಗಳು ಮಾತ್ರವಲ್ಲದೆ ಇಲಾಖೆಗಳ ಮೇಲೂ ಪರಿಶೀಲನೆ ನಡೆಸಲಿದೆ. ಹೀಗಾಗಿ ನೇಮಿಸಿಕೊಳ್ಳುವ ಹೊರಗುತ್ತಿಗೆ ನೌಕರರಿಗೆ ಕಾಯ್ದೆಬದ್ಧವಾದ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹೇಳಿದರು.
    ಇಲಾಖೆಗಳು, ನಿಗಮಮಂಡಳಿಗಳ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳ ಕುರಿತು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಹೊರಗುತ್ತಿಗೆ ಕಾರ್ಮಿಕರಿಗೆ ಸಕಾಲಿಕ ವೇತನ, ಇಎಸ್‌ಐ, ಪಿಎಫ್ ಇತ್ಯಾದಿ ಸೌಲಭ್ಯಗಳನ್ನು ನೀಡಬೇಕಿದೆ. ಇದರ ಜತೆಯಲ್ಲೇ ಸುರಕ್ಷಾ ಸಾಮಗ್ರಿಗಳನ್ನು ಒದಗಿಸಿ ಅವುಗಳ ಬಳಕೆ ಕುರಿತು ಅರಿವು ನೀಡಬೇಕು ಎಂದರು.
    ಮೂಲ ಮಾಲೀಕರು ಮತ್ತು ಗುತ್ತಿಗೆದಾರರು ಕಾನೂನಿನ ಎಲ್ಲಾ ನಿಯಮಾವಳಿಗಳನ್ನು ತಿಳಿದು ಕಾರ್ಮಿಕರ ಸಮಸ್ಯೆಗಳನ್ನು ಅರಿತು ಸೌಲಭ್ಯಗಳನ್ನು ಒದಗಿಸಬೇಕು. ಕೆಲಸದ ಸಮಯದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಲ್ಲಿ ಪರಿಹಾರ ಕಲ್ಪಿಸಬೇಕು ಎಂದು ತಿಳಿಸಿದರು.
    ಹೊರಗುತ್ತಿಗೆ ಕಾರ್ಮಿಕರಿಗೆ ಅಧಿಸೂಚನೆಯಂತೆ ನಿಗದಿತ ವೇತನ ನೀಡಬೇಕು. ತಪ್ಪೆಸಗಿದಾಗ ಏಕಾಏಕಿ ಕೆಲಸದಿಂದ ತೆಗೆಯಬಾರದು.ಒಂದೆರಡು ಬಾರಿ ತಿದ್ದಿಕೊಳ್ಳಲು ಅವಕಾಶ ನೀಡಬೇಕು.ತಪ್ಪುಗಳು ಮರುಕಳಿಸಿದಾಗ ನಿಯಮಾನುಸಾರ ನೋಟಿಸ್ ಜಾರಿ ಮಾಡಿ ವಿಚಾರಣೆಗೊಳಪಡಿಸಬೇಕು ಎಂದು ಹೇಳಿದರು.
    ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಅಯ್ಯಪ್ಪನ್ ಶಿಂದಿಹಟ್ಟಿ ಮಾತನಾಡಿ ಗುತ್ತಿಗೆ ಕಾರ್ಮಿಕರ ಕುರಿತಂತೆ ಗುತ್ತಿಗೆದಾರರು ಮತ್ತು ಪ್ರಧಾನ ಮಾಲೀಕರು ರಿಜಿಸ್ಟರ್ ಅನ್ನು ಕೆಲಸದ ಸ್ಥಳದಲ್ಲಿಯೇ ನಿರ್ವಹಿಸುವುದು ಕಡ್ಡಾಯ. ಕನಿಷ್ಠ 3 ವರ್ಷದವರೆಗೆ ದಾಖಲೆ ಸಂಗ್ರಹಿಸಿರಬೇಕು. ಸರ್ಕಾರ ನಿಗದಿಪಡಿಸಿದ ವೇತನಕ್ಕಿಂತ ಕಡಿಮೆ ನೀಡಬಾರದು. ನಿಗದಿತ ಅವಧಿಗೆ ವೇತನ ನೀಡಬೇಕು. ಇಲ್ಲವಾದಲ್ಲಿ ಶಿಕ್ಷಾರ್ಹ ಅಪರಾಧವಾಗಲಿದೆ ಎಂದರು.
    ಬಾಲಕಾರ್ಮಿಕರನ್ನು ನೇಮಿಸಿಕೊಳ್ಳಬಾರದು. ಗುತ್ತಿಗೆದಾರರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಗುತ್ತಿಗೆ ನೌಕರರು ಕೆಲಸಕ್ಕೆ ಸೇರಿದ ಮೂರು ದಿನದಲ್ಲಿ ಉದ್ಯೋಗ ಚೀಟಿ ನೀಡಬೇಕು. ಕೆಲಸ ಬಿಟ್ಟ ನಂತರದಲ್ಲೂ ಸೇವಾ ಪ್ರಮಾಣಪತ್ರ ನೀಡಬೇಕು. 8 ಗಂಟೆಗಿಂತ ಹೆಚ್ಚು ಅವಧಿಗೆ ಕೆಲಸ ಮಾಡಿಸಿಕೊಂಡಲ್ಲಿ ದುಪ್ಪಟ್ಟು ವೇತನ ನೀಡಬೇಕು.
    ವೇತನ ನೀಡುವ ಮುನ್ನಾ ದಿನದೊಳಗೆ ವೇತನಚೀಟಿ ವಿತರಿಸಬೇಕು. ಕುಡಿವ ನೀರು, ಶೌಚಗೃಹ ಹಾಗೂ ರಾತ್ರಿ ವೇಳೆ ಕೆಲಸ ನಿರ್ವಹಿಸುವ ಗುತ್ತಿಗೆ ಕಾರ್ಮಿಕರಿಗೆ ವಿಶ್ರಾಂತಿಗೃಹ ವ್ಯವಸ್ಥೆ ಕಲ್ಪಿಸಬೇಕು. ಹೆರಿಗೆ ಭತ್ಯೆ ಕಾಯ್ದೆಯನ್ವಯ ವಾರ್ಷಿಕ 80 ದಿನ ಕೆಲಸ ನಿರ್ವಹಿಸಿದ ಮಹಿಳಾ ಕಾರ್ಮಿಕರಿಗೆ 6 ವಾರದ ಹೆರಿಗೆ ರಜೆ ನೀಡಬೇಕು. ಕೆಲಸ ಬಿಟ್ಟ 48 ದಿನದೊಳಗೆ ವೇತನ ಪಾವತಿಸಬೇಕು ಎಂದು ಕಿವಿಮಾತು ಹೇಳಿದರು.
    ಶಿವಮೊಗ್ಗದ ಭವಿಷ್ಯನಿಧಿ ಅನುಷ್ಠಾನಾಧಿಕಾರಿ ಅರ್ಸಲನ್ ಚಿತ್ತೂರು ಮಾತನಾಡಿ ಪಿಎಫ್ ಬಗ್ಗೆ ಕೆಲವು ಇಲಾಖಾಧಿಕಾರಿಗಳು ಮಾಹಿತಿ ಇರಲಿಲ್ಲ ಎಂದು ಹೇಳುತ್ತಿರುವುದು ಕಂಡುಬಂದಿದೆ. ಕಾನೂನಿನ ತಿಳಿವಳಿಕೆ ಇಲ್ಲದಿರುವುದು ಅಥವಾ ನಿರ್ಲಕ್ಷೆೃ ಕೂಡ ಅಪರಾಧ. ಈ ಕಾರಣಕ್ಕೆ ಅಧಿಕಾರಿಯೊಬ್ಬರ ಮೇಲೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಆರ್.ವೀಣಾ, ಜಿಲ್ಲಾ ಕಾರ್ಮಿಕಾಧಿಕಾರಿ ಜಿ. ಇಬ್ರಾಹಿಂಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts