More

    ಗುಂಪು ಮನೆಗಳ ಹಂಚಿಕೆ ಸದ್ಯ ಸ್ಥಗಿತ

    ವಿಜಯವಾಣಿ ವಿಶೇಷ ಗದಗ

    ನಗರದ ಗಂಗಿಮಡಿ ಪ್ರದೇಶದ ಬಳಿ 75 ಎಕರೆ ಜಾಗದಲ್ಲಿ ಸರ್ವರಿಗೂ ಸೂರು ಯೋಜನೆಯಡಿ ನಿರ್ವಿುಸಿರುವ 3630 ಗುಂಪು ಮನೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮನೆಗಳ ಹಂಚಿಕೆ ವಿಷಯದಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ, ಹಂಚಿಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.

    ಮನೆಗಳಿಗೆ ಖರ್ಚಾಗಿರುವ ಒಟ್ಟು ಹಣದಲ್ಲಿ ಅರ್ಧದಷ್ಟು ಹಣವನ್ನು ಫಲಾನುಭವಿಗಳು ಪಾವತಿಸಬೇಕು ಎಂಬ ಕಾನೂನು ಇದೆ. ಹೀಗಾಗಿ, ನಿರ್ವಣವಾಗಿರುವ ಮನೆಗಳನ್ನು ಹಂಚಿಕೆ ಮಾಡಲು ನಗರಸಭೆ ಪೌರಾಯುಕ್ತ ಮನ್ಸೂರ ಅಲಿ ಅವರು ವಾರದೊಳಗೆ 50 ಸಾವಿರ ರೂ. ಪಾವತಿಸಬೇಕು ಎಂದು ಫಲಾನುಭವಿಗಳಿಗೆ ನೋಟಿಸ್ ಜಾರಿಗೊಳಿಸಿ 20 ದಿನಗಳು ಕಳೆದಿವೆ. ಆದರೆ, ಅನೇಕ ಫಲಾನುಭವಿಗಳು ಹಣ ಪಾವತಿ ಮಾಡುವುದಕ್ಕೆ ವಿರೋಧಿಸುತ್ತಿದ್ದಾರೆ. ನೋಟಿಸ್ ಜಾರಿಗೊಳಿಸಿರುವ ನಗರಸಭೆ ಕ್ರಮವನ್ನು ವಿರೋಧಿಸಿ ಅನೇಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಬಡವರಿಗೆ ಉಚಿತವಾಗಿ ಮನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

    ಗುಂಪು ಮನೆಗಳ ಭೂಮಿ ಪೂಜೆ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಸ್ಥಳೀಯ ಜನಪ್ರತಿನಿಧಿಗಳು ಭರವಸೆ ನೀಡಿದ್ದರು ಎಂಬ ಮಾತಿದೆ. ಹೀಗಾಗಿ, ಮನೆ ಹಂಚಿಕೆ ವಿಷಯ ಗೊಂದಲದ ಗೂಡಾಗಿದೆ.

    ನಗರಸಭೆ ನೋಟಿಸ್ ಬಂದ ಹಿನ್ನೆಲೆ ಈಗಾಗಲೇ *** ಫಲಾನುಭವಿಗಳು ತಲಾ 50 ಸಾವಿರ ರೂ. ಪಾವತಿಸಿದ್ದಾರೆ. ಆದರೆ, ಉಳಿದ ಫಲಾನುಭವಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ಹಣ ಕೊಟ್ಟು ಮನೆಗಳಿಗಾಗಿ ಕಾಯುತ್ತಿರುವವರಿಗೆ ನಿರಾಸೆಯುಂಟಾಗಿದೆ. ಒಟ್ಟಾರೆ, ಸಮಸ್ಯೆಯನ್ನು ಶೀಘ್ರ ಸರಿಪಡಿಸಿ ಮನೆ ಹಂಚಿಕೆ ಮಾಡಬೇಕು ಎಂಬುದು ಫಲಾನುಭವಿಗಳ ಒತ್ತಾಯ.

    ರೂ. 243.68 ಕೋಟಿ ಯೋಜನೆ: ನಗರದ ಗಂಗಿಮಡಿ ಪ್ರದೇಶದ ಬಳಿಯ 75 ಎಕರೆ ಜಾಗೆಯಲ್ಲಿ 3630 ಗುಂಪು ಮನೆಗಳಿಗೆ 243.68 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಬೆಂಗಳೂರು ಮೂಲದ ಜಂಪಾನಾ ಕನ್​ಸ್ಟ್ರಕ್ಷನ್ ಎಂಬ ಕಂಪನಿ ಗುತ್ತಿಗೆ ಪಡೆದುಕೊಂಡಿದೆ. 2018ರ ಮಾರ್ಚ್​ನಲ್ಲಿ ಕಾಮಗಾರಿ ಆರಂಭವಾಗಿದ್ದು, 2020ರ ಮಾರ್ಚ್​ನಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಲಾಗಿದೆ. ರಾಜೀವ ಗಾಂಧಿ ವಸತಿ ನಿಗಮದಿಂದ ಮನೆಗಳ ನಿರ್ಮಾಣ ಮಾಡಲಾಗಿದ್ದು, ನಗರಸಭೆ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಈ ಕುರಿತು ನಗರಸಭೆಯಿಂದ ಅರ್ಜಿ ಆಹ್ವಾನಿಸಲಾಗಿತ್ತು. 5 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು. 3630 ಜನರನ್ನು ಆಯ್ಕೆ ಮಾಡಿ ತಿಳಿವಳಿಕೆ ಪತ್ರವನ್ನೂ ನೀಡಲಾಗಿದೆ. ಸದ್ಯ 1008 ಮನೆಗಳು ಪೂರ್ಣಗೊಂಡಿವೆ. ಈ ಮನೆಗಳಿಗೆ ರಸ್ತೆ, ವಿದ್ಯುತ್, ಚರಂಡಿ, ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಕಾರ್ಯ ನಡೆದಿದೆ.

    ಒಂದು ಮನೆಗೆ 6.75 ಲಕ್ಷ ರೂಪಾಯಿ ವ್ಯಯ: ಪ್ರತಿ ಮನೆಗೆ ಅಂದಾಜು 6.75 ಲಕ್ಷ ರೂ. ಖರ್ಚಾಗಿದೆ. ಸರ್ಕಾರದಿಂದ ಎಸ್.ಸಿ., ಎಸ್.ಟಿ. ಫಲಾನುಭವಿಗಳಿಗೆ (ಕೇಂದ್ರ, ರಾಜ್ಯ ಸರ್ಕಾರ ಮತ್ತು ನಗರಸಭೆ ವಂತಿಕೆ ಸೇರಿ) 3.55 ಲಕ್ಷ ರೂ. ಸಹಾಯ ಧನ ಇರುತ್ತದೆ. ಉಳಿದ 3 ಲಕ್ಷ ರೂಪಾಯಿ ಸ್ವಂತ ಹಣ ಅಥವಾ ಬ್ಯಾಂಕ್ ಸಾಲ ಪಾವತಿಸಬೇಕು. ಸಾಮಾನ್ಯ ವರ್ಗದವರಿಗೆ 2.25 ಲಕ್ಷ ರೂ. ಸಹಾಯ ಧನ ನೀಡಲಿದ್ದು, ಉಳಿದ 4.50 ಲಕ್ಷ ರೂ. ಫಲಾನುಭವಿಗಳು ತುಂಬಬೇಕು. ಎಸ್ಸಿ, ಎಸ್ಟಿ ಸಮುದಾಯದ ಫಲಾನುಭವಿಗಳ ಮೇಲೆ ಬೀಳುವ ಹೊರೆಯನ್ನು ಕಡಿಮೆ ಮಾಡಲು ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆಗಳಿಗೆ ಅನುದಾನ ನೀಡಲು ಮನವಿ ಮಾಡಲಾಗಿದೆ. ಸಾಧ್ಯವಾದಷ್ಟು ಫಲಾನುಭವಿಗಳಿಗೆ ಹೊರೆ ಕಡಿಮೆಯಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

    ಗಂಗಿಮಡಿ ಬಳಿ ನಿರ್ವಿುಸಿರುವ ಗುಂಪು ಮನೆಗಳಿಗೆ ಆರಂಭಿಕ ಹಂತದ ಕಂತಿನ ಹಣ ಪಾವತಿಸಬೇಕೆಂದು ಫಲಾನುಭವಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಹಣವನ್ನು ಕಟ್ಟುತ್ತಿದ್ದಾರೆ. ಉಚಿತವಾಗಿ ಮನೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ತೀರಾ ಬಡವರಿದ್ದು ಕಟ್ಟಲು ಸಾಧ್ಯವೇ ಇಲ್ಲ ಎನ್ನುವವರಿಗೆ ಪರ್ಯಾಯ ಕ್ರಮ ಅನುಸರಿಸುವ ಕುರಿತು ಚಿಂತನೆ ನಡೆಸಲಾಗಿದೆ.

    | ಮನ್ಸೂರ ಅಲಿ, ಪೌರಾಯುಕ್ತ, ಗದಗ ಬೆಟಗೇರಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts