More

    ಗುಂಡಿ ತೋಡುವಲ್ಲಿ ಭ್ರಷ್ಟಾಚಾರ ನಡೆದಿದ್ದು ನಿಜ

    ರೋಣ: ಸಾಮಾಜಿಕ ಅರಣ್ಯ ಇಲಾಖೆಯಿಂದ ಗುಂಡಿ ತೋಡುವ ಹಾಗೂ ಸಸಿ ನೆಡುವ ಯೋಜನೆಯಲ್ಲಿ ತಾಲೂಕಿನಾದ್ಯಂತ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಪ್ರಭು ಮೇಟಿ ಅವರು ಮಾಡಿದ ಆರೋಪ ನಿಜವಾಗಿದೆ.

    ಸಾಮಾಜಿಕ ಅರಣ್ಯ ಇಲಾಖೆಯಿಂದ ತಾಲೂಕಿನ ಇಟಗಿ-ಮುಗಳಿ ರಸ್ತೆಯಲ್ಲಿ ಸಸಿ ನೆಡಲು ತೋಡಲಾಗಿರುವ ಗುಂಡಿಯಲ್ಲಿ ಲಕ್ಷಾಂತರ ರೂ. ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡಿರುವ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಪ್ರಕಾಶ ಪವಾಡಿಗೌಡ್ರ ಜೆಸಿಬಿಯಿಂದ ತೋಡಲಾಗಿರುವ ಗುಂಡಿಗಳನ್ನು 50 ರೈತ ಕಾರ್ವಿುಕರ ಮೂಲಕ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

    ಇಟಗಿ-ಮುಗಳಿ ರಸ್ತೆಯಲ್ಲಿ 900 ಗುಂಡಿ ತೋಡಿ, 1,46,700 ರೂ.ಗಳ ಬಿಲ್ ತೆಗೆಯಲಾಗಿತ್ತು. ಇದ್ಯಾವುದು ಸರ್ಕಾರದ ನಿಯಮಾವಳಿ ಪ್ರಕಾರವಿರಲಿಲ್ಲ. ಎರಡೂವರೆ ಚದರ ಅಡಿಯ ಒಂದು ಗುಂಡಿ ತೋಡಲು ಸರ್ಕಾರ 167 ರೂ. ನೀಡುತ್ತದೆ. ಆದರೆ, ಅರಣ್ಯಾಧಿಕಾರಿಗಳು ಜೆಸಿಬಿ ಮೂಲಕ 35 ರೂಪಾಯಿಗೆ ಒಂದರಂತೆ ಯಾವುದೇ ಅಳತೆ ಇಲ್ಲದ ಗುಂಡಿ ತೋಡುವ ಮೂಲಕ ಲಕ್ಷಾಂತರ ರೂ.ಗಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವುದು ತಾಪಂ ಸದಸ್ಯ ಮೇಟಿ ಅವರ ಆರೋಪವಾಗಿತ್ತು.

    ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಈಗ ಜೆಸಿಬಿ ಮೂಲಕ ತೆಗೆದಿರುವ 900 ಗುಂಡಿಗಳನ್ನು ಸರಿಪಡಿಸಲು ಸುಮಾರು 500 ಮಾನವ ದಿನಗಳ ಕೆಲಸ ಮಾಡಿಸಬೇಕಾಗುತ್ತದೆ. ಈಗ ಅವರಿಗೆ ಎಲ್ಲಿಂದ ಹಣ ನೀಡುತ್ತಾರೆ. ಅದರರ್ಥ, ಈ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವುದು ಸಾಬೀತಾದಂತಾಗಿದೆ. ಭ್ರಷ್ಟಾಚಾರದಿಂದ ಪಡೆದ ಹಣ ಇಲ್ಲಿ ಕೊಡುತ್ತಾರೆಯೇ?

    | ಪ್ರಭು ಮೇಟಿ, ತಾಪಂ ಸದಸ್ಯ

    ನಮ್ಮ ಇಲಾಖೆಯ ಕೆಳ ವರ್ಗದ ನೌಕರರ ಬೇಜವಾಬ್ದಾರಿತನದಿಂದಾಗಿ ಇದು ನಡೆದಿದೆ. ಅದನ್ನು ಸರಿಪಡಿಸಲಾಗುವುದು.

    | ಪ್ರಕಾಶ ಪವಾಡಿಗೌಡ್ರ ಸಾಮಾಜಿಕ ಅರಣ್ಯ ಇಲಾಖೆ ತಾಲೂಕಾಧಿಕಾರಿ

    ತಾಲೂಕಿನಾದ್ಯಂತ ಗುಂಡಿ ತೋಡುವುದು, ಗಿಡ ನೆಡುವ ನೆಪದಲ್ಲಿ ಲಕ್ಷಾಂತರ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಈ ಕುರಿತಂತೆ ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು.

    | ಲೋಕನಗೌಡ ಗೌಡರ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts