More

    ಗುಂಡಿಯಲ್ಲಿ ಮುಳುಗಿ 3 ಬಾಲಕರ ಸಾವು

    ಬ್ಯಾಡಗಿ: ಪಟ್ಟಣದ ಹನುಮನ ಹೊಂಡದಲ್ಲಿರುವ ಉರ್ದು ಹಿರಿಯ ಪ್ರಾಥಮಿಕ ಶಾಲೆ ನೂತನ ಶಾಲೆ ಕೊಠಡಿ ಅಡಿಪಾಯ (ಕಾಲಂ) ಗುಂಡಿಯಲ್ಲಿ ಬಿದ್ದು ಮೂವರು ಮಕ್ಕಳು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.

    ದೇವಿಹೊಸೂರು ಗ್ರಾಮದ ಸೈಯದ್ ಅಜ್ಮಲ್ ಹಾವನೂರು (6), ಸೈಯದ್ ಅಕ್ಮತ್ ಹಾವನೂರು (8), ಪಟ್ಟಣದ ಜಾಫರ್ ಮಹ್ಮದ್​ಸಾಬ್ ಅಮಾನಿ ಸವಣೂರು (10) ಮೃತಪಟ್ಟವರು.

    ಪಟ್ಟಣದ ಹನುಮನ ಹೊಂಡದಲ್ಲಿನ ಉರ್ದು ಶಾಲೆಯಲ್ಲಿ ಎರಡು ತಿಂಗಳಿಂದ ನೂತನ ಕೊಠಡಿ ನಿರ್ವಿುಸಲು ಸುಮಾರು 5 ಅಡಿ ಆಳದ ಅಡಿಪಾಯದ ಗುಂಡಿ ತೆಗೆಯಲಾಗಿದೆ. ಶನಿವಾರ 2 ಗಂಟೆ ಸುಮಾರಿಗೆ ಏಳೆಂಟು ಮಕ್ಕಳು ಶಾಲೆ ಮೈದಾನದಲ್ಲಿ ಸಂಗ್ರಹವಾದ ನೀರಿನಲ್ಲಿ ಆಟವಾಡಲು ತೆರಳಿದ್ದಾರೆ. ಆದರೆ, ಮೈದಾನದಲ್ಲಿ ದೊಡ್ಡ (ಅಡಿಪಾಯದ) ಗುಂಡಿಗಳಿರುವುದು ಮಕ್ಕಳಿಗೆ ತಿಳಿದಿಲ್ಲ. ಆಟವಾಡುತ್ತಲೆ ಮೂವರು ಮಕ್ಕಳು ಗುಂಡಿಯಲ್ಲಿ ಇಳಿದಿದ್ದು, ಮೇಲೆ ಹತ್ತಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ನೋಡಿದ ಇನ್ನುಳಿದ ಬಾಲಕರು ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಆದರೆ, ಪರಿಸ್ಥಿತಿ ಕೈಮೀರಿ ಹೋಗಿತ್ತು. ಎರಡು ಮಕ್ಕಳು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನೊಂದು ಮಗು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಕಾರಣ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದೆ.

    ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ರಸ್ತೆ ತಡೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಮಕ್ಕಳ ಶವ ಹುಡುಕಿ ತೆಗೆದರು.

    ಸಹೋದರರಾದ ಸೈಯದ್ ಅಜ್ಮಲ್, ಸೈಯದ್ ಅಕ್ಮತ್ ಪಟ್ಟಣದ ಅಜ್ಜಿ ಮನೆಗೆ ಬಂದಿದ್ದರು. ದುರ್ಘಟನೆಯಲ್ಲಿ ಮೂವರು ಮಕ್ಕಳು ಗುಂಡಿಯಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ನಿರ್ಲಕ್ಷ್ಯಂದ ದುರ್ಘಟನೆ: ಹಲವು ದಿನಗಳಿಂದ ಶಾಲೆ ಮುಚ್ಚಿವೆ. 15 ದಿನಗಳಿಂದ ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಕೊಠಡಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಶಾಲೆಯತ್ತ ಶಿಕ್ಷಕರಾಗಲಿ, ಗುತ್ತಿಗೆದಾರ ನೇಮಿಸಿದ ಕಾರ್ವಿುಕರು ಬಂದಿಲ್ಲ. ಆದರೆ, ಶಾಲೆಯ ಗೇಟ್ ಬೀಗ ತೆರೆದವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ತಪ್ಪಿತಸ್ಥರನ್ನು ಹುಡುಕಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

    ಗುಂಡಿಯ ನೀರಿನಲ್ಲಿ ಬಿದ್ದು ಮೂರು ಮಕ್ಕಳು ಸಾವನ್ನಪ್ಪಿರುವುದು ದುಃಖದ ಸಂಗತಿ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೃತ ಮಕ್ಕಳ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ.

    | ಬಸವರಾಜ ಬೊಮ್ಮಾಯಿ, ಗೃಹ ಸಚಿವ

    ಮೃತ ಬಾಲಕರ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ 25 ಸಾವಿರ ರೂ. ಪರಿಹಾರ ಹಾಗೂ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಕೊಡಿಸಲಾಗುವುದು.

    | ವಿರೂಪಾಕ್ಷಪ್ಪ ಬಳ್ಳಾರಿ, ಶಾಸಕ

    ಶಾಲೆ ಮೈದಾನದಲ್ಲಿ ಮಳೆ ನೀರು ಸಂಗ್ರಹವಾಗಿ ದುರ್ಘಟನೆ ಜರುಗಿರುವುದು ನೋವು ತಂದಿದೆ. ಹೊಂಡದ ಮೈದಾನದಲ್ಲಿ ಶಾಲೆ ಕಟ್ಟಡ ನಿರ್ವಿುಸಿದ್ದು, ಚರಂಡಿಗಿಂತ ಮೈದಾನ ತಗ್ಗು ಪ್ರದೇಶದಲ್ಲಿರುವ ಹಿನ್ನೆಲೆಯಲ್ಲಿ, ಸಂಗ್ರಹವಾದ ಮಳೆ ನೀರು ಹೊರಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಈಗ ನಡೆಯುತ್ತಿರುವ ಕಾಮಗಾರಿ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಈ ಕುರಿತು ಎಸ್​ಡಿಎಂಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಅವರೊಂದಿಗೆ ರ್ಚಚಿಸಿ ಸಮಸ್ಯೆಗೆ ಕಾಯಂ ಪರಿಹಾರ ಹುಡುಕಲಾಗುವುದು.

    | ವಿ.ಎಂ. ಪೂಜಾರ, ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts