More

    ಗರ್ಭಿಣಿಗೆ ಚಿಕಿತ್ಸೆ ನೀಡದವರ ಮೇಲೆ ಕ್ರಮ ಕೈಗೊಳ್ಳಿ


    ಹಾಸನ : ಬೇಲೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆಂದು ಬರುವವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳದೆ ಕಾಯಿಸಿ ವಾಪಸ್ ಕಳುಹಿಸಿದ್ದರಿಂದ ಅವರು ಚಿಕ್ಕಮಗಳೂರು ಆಸ್ಪತ್ರೆಗೆ ತೆರಳಿ ಹೆರಿಗೆ ಮಾಡಿಸಿದ್ದಾರೆ. ಆದರೆ ಹೆಚ್ಚು ಕಮ್ಮಿಯಾಗಿದ್ದರೆ ಯಾರು ಹೊಣೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


    ಬೇಲೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಆಡಳಿತಾಧಿಕಾರಿ ಹಾಗೂ ಐಎಫ್‌ಎಸ್ ಅಧಿಕಾರಿ ಡಾ.ಬಸವರಾಜು ಅಧ್ಯಕ್ಷತೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗರ್ಭಿಣಿಯರು ಹೆರಿಗೆಗೆಂದು ಬಂದ ಸಂದರ್ಭ ಅವರನ್ನು ಸಮಾಧಾನವಾಗಿ ಮಾತನಾಡಿಸಿ ಧೈರ್ಯ ತುಂಬಬೇಕು. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಿ ಕಾಯಿಸಿ ವಾಪಸ್ ಕಳುಹಿಸಿದರೆ ಏನು ಅರ್ಥ, ಇದಕ್ಕೆ ಯಾರು ಕಾರಣರಾಗಿದ್ದಾರೋ ಅವರ ವಿರುದ್ಧ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದರು.


    ಆಸ್ಪತ್ರೆಯಲ್ಲಿ ಡಿ ಗ್ರೂಪ್ ಸಿಬ್ಬಂದಿ ಹೊಂದಾಣಿಕೆ ಇಲ್ಲದೆ ಅವರವರೇ ಕಿತ್ತಾಡುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಗ್ರಾಮ ಒನ್ ಕೇಂದ್ರ, ಆಶಾ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ಹೊರಿಸಿ ವಾರ, ತಿಂಗಳಿಗೆ ಇಂತಿಷ್ಟು ಆಯುಷ್ಮಾನ್ ಭಾರತ್ ಕಾರ್ಡುಗಳನ್ನು ಮಾಡಿಸಲು ಮುಂದಾದರೆ ಯಶಸ್ಸು ಪಡೆಯುವ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಎಎನ್‌ಎಮ್ ಸಿಬ್ಬಂದಿ ಮನೆಗಳು ಪಾಳು ಬಿದ್ದಿವೆ. ಅವುಗಳನ್ನು ಏತಕ್ಕಾಗಿ ಕಟ್ಟಿಸಲಾಗಿದೆ. ತುರ್ತು ಸಂದರ್ಭ ರೋಗಿಗಳಿಗೆ ಅವರ ಸೇವೆ ಸಿಗಲಿ ಅಂಥ. ಆದರೆ ಅವರು ಎಲ್ಲಿ ವಾಸವಿದ್ದಾರೆ ಎಂದು ಪ್ರಶ್ನಿಸಿದರು.


    ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ನಾನು ಸದನದಲ್ಲಿಯೂ ಮಾತನಾಡಿದ್ದೇನೆ. ಅಧಿಕಾರಿಗಳು ಸರ್ಕಾರದೊಂದಿಗೆ ಚರ್ಚಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು, ಬೆಳೆ ನಷ್ಟವಾದವರಿಗೆ ಬೇಗ ಪರಿಹಾರ ಕೊಡಿಸಬೇಕು ಎಂದರು.


    ತಾಪಂ ಆಡಳಿತಾಧಿಕಾರಿ ಹಾಗೂ ಐಎಫ್‌ಎಸ್ ಅಧಿಕಾರಿ ಡಾ.ಬಸವರಾಜು ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆಗೆ ಬಳಸುವ ಆಟೋ ಟಿಪ್ಪರ್‌ಗಳ ಧ್ವನಿವರ್ಧಕ ಹಾಗೂ ಕರಪತ್ರಗಳ ಮೂಲಕ ಆಯುಷ್ಮಾನ್ ಕಾರ್ಡ್‌ಗಳ ಉಪಯೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.


    ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ತಾಲೂಕಿನಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗದ ಬಗ್ಗೆ ಹೆಚ್ಚಿನ ನಿಗಾವಹಿಸಿ ಎಲ್ಲ ಹಸುಗಳಿಗೂ ಚಿಕಿತ್ಸೆಗೆ ಮುಂದಾಗಬೇಕು, ಅಗತ್ಯವಾಗಿ ಬೇಕಿರುವ ಔಷಧಗಳನ್ನು ಸ್ಟಾಕ್ ಇಟ್ಟುಕೊಂಡು ರೈತರಿಗೆ ಸಹಕಾರ ನೀಡಬೇಕು, ಹಸುಗಳಿಗೆ ಚಿಕಿತ್ಸೆ ನೀಡಲು ಹೋಗುವ ವೈದ್ಯರು ರೈತರಿಂದ ಐನೂರು, ಸಾವಿರ ರೂ. ವಸೂಲು ಮಾಡುತಿದ್ದಾರೆ ಎಂಬ ಆರೋಪವಿದೆ. ಹಣ ಪಡೆಯದೆ ಚಿಕಿತ್ಸೆಗೆ ಮುಂದಾಗುವಂತೆ ತಿಳಿಸಿ ಎಂದು ಅಧಿಕಾರಿಗೆ ತಾಕೀತು ಮಾಡಿದರು.


    ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗಂಗಾಧರ್ ಮಾತನಾಡಿ, ತಾಲೂಕಿನಲ್ಲಿ ಎಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆಯೋ ಆ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಎಲ್ಲ ಹಸುಗಳಿಗೂ ಲಸಿಕೆ ಹಾಕಲಾಗುತ್ತಿದೆ. ಗೋಹತ್ಯೆ ಸಂಬಂಧ 4 ಪ್ರಕರಣ, ಅಕ್ರಮವಾಗಿ ಸಾಗಿಸುತ್ತಿದ್ದ ಹಸುಗಳನ್ನು ಗೋಶಾಲೆಗೆ ಬಿಟ್ಟಿದ್ದೇವೆ ಎಂದರು.


    ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಪರ್ಮನೆಂಟ್ ಬೆಳೆಗೆ ಪ್ರತಿವರ್ಷ ಸಾಫ್ಟ್‌ವೇರ್‌ನಲ್ಲಿ ಎಮಟ್ರಿ ಮಾಡಬೇಕೆಂದರೆ ರೈತರಿಗೆ ತೊಂದರೆ ಹಾಗೂ ಅಧಿಕಾರಿಗಳೇ ಜವಾಬ್ದಾರಿ ತೆಗೆದುಕೊಂಡು ನೀವೆ ದಾಖಲಿಸಬೇಕು. ಇಲಾಖೆಯಿಂದ ಸಿಗುವ ಸೌಲಭ್ಯಗಳ ವಿತರಿಸುವ ಸಂದರ್ಭ ಸ್ಥಳ ಪರಿಶೀಲಿಸಿ ಅರ್ಹರಿಗೆ ಕೊಡಬೇಕು. ಅತಿವೃಷ್ಟಿಯಿಂದ ಬೆಳೆಹಾನಿಯಾದ ರೈತರಿಗೆ ಶೀಘ್ರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೂ ಮತ್ತು ಸಾಕ್ಸ್ ವಿತರಿಸಲು ಮುಂದಾಗಬೇಕು. ಅಲ್ಲದೆ ತಾಲೂಕಿನಲ್ಲಿ ಸಾಕಷ್ಟು ಗ್ರಾಮಗಳ ರಸ್ತೆ ಕಾಮಗಾರಿಗಾಗಿ ಜಲ್ಲಿ ಹಾಕಿ ಬಿಟ್ಟಿದ್ದಾರೆ. ಇದರಿಂದ ಸಾರ್ವಜನಿಕರು ಓಡಾಡಲು ತೊಂದರೆಯಾಗುತ್ತಿದೆ. ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ 17 ಕೋಟಿ ರೂ. ಬಿಡುಗಡೆ ಮಾಡಿ ಎಂದು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದರೂ ಇದುವರೆಗೆ ಸರ್ಕಾರ ಒಂದು ರೂಪಾಯಿ ಕೊಟ್ಟಿಲ್ಲ. ಆದರೆ ಜನರು ಮಾತ್ರ ಕೆಲಸವಾಗಿಲ್ಲ ಎಂದು ಬೈಯುತ್ತಾರೆ. ಸರ್ಕಾರ ಹಣ ಕೊಡದ ಕಾರಣ ಕೆಲಸ ಮಾಡಿಸಲು ಸಾಧ್ಯವಾಗಿಲ್ಲ. ಬೇಲೂರು-ಬಿಕ್ಕೋಡು ರಸ್ತೆ ಕಾಮಗಾರಿ ಮಾಡಿಸೋಣವೆಂದರೆ ಸರ್ಕಾರ ಹಣ ಕೊಟ್ಟಿಲ್ಲ. ಈಗ ತಾತ್ಕಾಲಿಕ ರಿಪೇರಿಗಾದರೂ 2 ಕೋಟಿ ರೂ.ಕೊಡಿ ಎಂದು ಬೇಡಿಕೆ ಇಟ್ಟದ್ದೇವೆ ಎಂದರು.


    ವಸತಿ ನಿಲಯಗಳಲ್ಲಿನ ವಾರ್ಡನ್‌ಗಳು ರಾತ್ರಿ ಸಮಯದಲ್ಲಿ ಇರದ ಕಾರಣ ಮಕ್ಕಳಿಗೆ ಸರಿಯಾಗಿ ಊಟ ಸಿಗುತ್ತಿಲ್ಲ ಎಂಬ ಆರೋಪವಿದೆ. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಕೊಡಬೇಕು. ಆದರೆ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭ ಕಳಪೆ ಮಟ್ಟದ ತರಕಾರಿ ಪದಾರ್ಥಗಳನ್ನು ಬಳಸುತ್ತಿದ್ದಾರೆ. ಇದು ನಿಲ್ಲಬೇಕು ಎಂದರು.
    ಅರೇಹಳ್ಳಿಯ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಜನರು ಸಾಲುಗಟ್ಟಿ ನಿಂತಿರುತ್ತಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇನ್ನೂ ಅಂಗಡಿ ತೆರೆಯಲು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಯಾವುದೇ ಇಲಾಖೆ ಅಧಿಕಾರಿಗಳು ಸಾಮಾನ್ಯ ಸಭೆ ಅಥವಾ ಕೆಡಿಪಿಗೆ ನಿಮ್ಮ ಪರವಾಗಿ ಬೇರೆಯವರನ್ನು ಕಳುಹಿಸುವ ಮುನ್ನ ತಾಪಂ ಇಒರಿಂದ ಅನುಮತಿ ಪಡೆಯಬೇಕು, ಇಲ್ಲದಿದ್ದಲ್ಲಿ ಅಧಿಕಾರಿಯೇ ಸಭೆಗೆ ಬರಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts