More

    ಗರ್ಭಗುಡಿ ಬಾಡಿಗೆಗೆ!; ಕರುಳ ಬಳ್ಳಿ ಕತ್ತರಿಸಿ ಕೊಳ್ಳಿ..

    ಸತ್ವವಿಲ್ಲದ ಆಹಾರ, ದೈಹಿಕ ಶ್ರಮವಿಲ್ಲದ ಜೀವನಶೈಲಿ ಭಾರತದ ಪುರುಷ, ಮಹಿಳೆಯರಲ್ಲಿ ಬಂಜೆತನ ಹೆಚ್ಚಿಸುತ್ತಿದೆ. 30 ವರ್ಷದವರೆಗೆ ಉದ್ಯೋಗ, ಜವಾಬ್ದಾರಿ ಎಂದು ಆರಾಮವಾಗಿದ್ದು ಆ ಮೇಲೆ ಮಕ್ಕಳನ್ನು ಮಾಡಿಕೊಳ್ಳುವ ಪ್ರವೃತ್ತಿಯೇ ಇದಕ್ಕೆ ಕಾರಣ. ಮನಸ್ಸು ಬೇಕೆಂದಾಗ ದೇಹ ಸಹಕರಿಸುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಬಹುತೇಕ ದಂಪತಿ ಬಾಡಿಗೆ ತಾಯಿಯ ಮೊರೆ ಹೋಗುತ್ತಿದ್ದಾರೆ. ಈ ಪ್ರಕ್ರಿಯೆ ಒಂದು ದಂಧೆಯಾಗಿ ಮಾರ್ಪಟ್ಟಿದೆ. ಸಾವಿರಾರು ಅಮಾಯಕ, ನಿಸ್ಸಹಾಯಕ ತಾಯಂದಿರ ಗರ್ಭಗಳು ಮುಕ್ತ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವುದು ವಿಪರ್ಯಾಸ.

    | ಬಿ.ಎಸ್. ಮಂಜುನಾಥ್

    ತಾಯ್ತನ ಬೇಡ, ತಾಯಿಯಾಗಬೇಕು, ಪ್ರಸವದ ನೋವು ಬೇಡ, ಮಗುವಿನ ನಲಿವು ಬೇಕು, ಹಾಲುಣಿಸುವುದು ಬೇಡ, ಮುತ್ತಿಡಲು ಹಾಲ್ಗೆನ್ನೆ ಬೇಕು. ಪತ್ನಿ ಮಗುವನ್ನು ಹೆರದೆಯೇ ಆರೋಗ್ಯವಾಗಿರಬೇಕು, ಆದರೂ ಅಮ್ಮನಾಗಬೇಕು….ಬದಲಾಗುತ್ತಿರುವ ಭಾರತ ಹಾಗೂ ಭಾರತೀಯ ಪತಿ, ಪತ್ನಿಯರ ತುಡಿತವಿದು, ಮನದ ಮಿಡಿತವಿದು. ಯಾರದ್ದೋ ಗರ್ಭ, ಯಾರದ್ದೋ ಕರುಳು, ಹಣ ಕೊಟ್ಟರೆ ಕತ್ತರಿಸಿದ ಬಳ್ಳಿ ಸಿಗುವಾಗ ಕೆಲಸ, ಕಾರ್ಯ ಬಿಟ್ಟು, ದೇಹಾರೋಗ್ಯ ಮರೆತು ಮಗು ಹೆರುವುದು ಯಾರಿಗೆ ಬೇಕು ಎಂಬ ಅನಿಸಿಕೆ. ಒಂದೆರಡು ಮನೆಯ ಕತೆಯಲ್ಲ ಇದು. ಆಗಷ್ಟೇ ಮದುವೆ ಆದವರು, ಎರಡನೇ ಮಗು ಬೇಕಾದವರು, ಸದಾ ಸುದ್ದಿಯಲ್ಲಿರಲು ಬಯಸುವವರು, ಹೆತ್ತರೆ ಸೌಂದರ್ಯ ಕೆಡುತ್ತದೆ ಎಂದು ಕೊರಗುವವರ ಮನೆಯ ನಾಲ್ಕು ಗೋಡೆಗಳ ನಡುವೆ ಈ ‘ಗರ್ಭಗುಡಿ’ಯ ಕಥೆ, ವ್ಯಥೆಯೀಗ ನಿತ್ಯ ಮಾಮೂಲು. ಎದೆ ಹಾಲಷ್ಟೇ ಅಲ್ಲ, ತಾಯಿಯ ಒಡಲೂ ಈಗ ಮಾರಾಟಕ್ಕಿದೆ. ಮಗು ಹೆತ್ತುಕೊಡುವ ಬಾಡಿಗೆ ತಾಯಂದಿರಿಗೆ ಮಮಕಾರ ಮಾರಿಕೊಳ್ಳುವ ಅಧಿಕಾರವೂ ಇದೆ. ರಕ್ತ ಸಂಬಂಧದ ಬೆಸುಗೆಯಲ್ಲಿ ಜನ್ಮತಾಳುವ ಕಂದಮ್ಮಗಳನ್ನು ರೆಡಿಮೇಡ್ ಗೊಂಬೆಗಳಂತೆ ತಂದು ಸಾಕುವವರು ಹೆಚ್ಚುತ್ತಿದ್ದಾರೆ. ಬಂಜೆ ಎಂದು ಕರೆಸಿಕೊಳ್ಳುವ ತಾಯಿ ಮಡಿಲಿಗೆ ಕಂದನನ್ನಿಡುವ ಆಶಯದ ಬಾಡಿಗೆ ತಾಯ್ತನ ಈಗ ತನ್ನ ಆಶಯವನ್ನೇ ಮರೆತು ವ್ಯವಹಾರಕ್ಕೆ ದಾರಿ ಮಾಡಿಕೊಟ್ಟಿದೆ.

    ಮಸೂದೆಗೆ ಕಾರಣವೇನು?: ಭಾರತದಲ್ಲಿ ಬಾಡಿಗೆ ತಾಯ್ತನ ದಂಧೆಯಾಗಿದೆ. ಹಲವು ನಗರಗಳಲ್ಲಿ ಇದೇ ಉದ್ಯಮವಾಗಿದೆ. ಬಡ, ನಿರ್ಗತಿಕ, ಅಮಾಯಕ ಮಹಿಳೆಯರ ಕೈಗೆ ಅಷ್ಟೋ ಇಷ್ಟೋ ಹಣ ನೀಡಿ ಆಮಿಷವೊಡ್ಡಿ ಬಳಸಿಕೊಳ್ಳಲಾಗುತ್ತಿದೆ. ಮಗು ಸಿಕ್ಕ ಬಳಿಕ ತಾಯಿಯ ಆರೋಗ್ಯವನ್ನೂ ವಿಚಾರಿಸದೆ ಸಂಕಷ್ಟದ ಸ್ಥಿತಿಯಲ್ಲಿ ಕೈಕೊಟ್ಟು ಓಡಿ ಹೋಗುವ ಪ್ರಕರಣ ಹೆಚ್ಚಾಗಿದೆ. ಈ ದೌರ್ಜನ್ಯ ತಡೆದು ಮಹಿಳೆಯರಿಗೆ ಕಾನೂನಿನ ರಕ್ಷಣೆ ನೀಡಲು ಬಾಡಿಗೆ ತಾಯ್ತನ (ನಿಯಂತ್ರಣ ವಿಧೇಯಕ) ರೂಪಿಸಲಾಗಿದೆ.

    ಏನಿದು ಬಾಡಿಗೆ ತಾಯ್ತನ?: ದಂಪತಿ ಸಮ್ಮತಿಯೊಂದಿಗೆ ಪುರುಷನೊಬ್ಬನ ವೀರ್ಯವನ್ನು ಜೈವಿಕ ತಾಯಿಯ (ಮಗು ಹೆರಲು ಒಪ್ಪಿದ ಮಹಿಳೆ) ಅಂಡಾಣುವಿನಲ್ಲಿ ಬೆಳೆಸಿ ಮಗು ಪಡೆಯುವ ವಿಧಾನ. ಕೆಲ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಕಾರಣಕ್ಕೆ ಪುರುಷ ದಾನಿಯಿಂದ ವೀರ್ಯ ಪಡೆದು ಮಗು ಪಡೆಯಲಾಗುತ್ತದೆ. ಅಂಕಿ-ಅಂಶದ ಪ್ರಕಾರ ಪ್ರತಿ ಬಾಡಿಗೆ ತಾಯಿಗೆ 8ರಿಂದ 17 ಲಕ್ಷ ರೂ.ವರೆಗೆ ಬೇಡಿಕೆ ಇದೆ.

    ಭಾರತದಲ್ಲೇನಿದೆ?: ಕೆಲವೇ ವರ್ಷಗಳ ಹಿಂದೆ ವಿದೇಶಗಳಿಗೆ ಸೀಮಿತವಾಗಿದ್ದ ಬಾಡಿಗೆ ತಾಯ್ತನ ಈಗ ಭಾರತದಲ್ಲೂ ಸಹಜ ಪ್ರಕ್ರಿಯೆಯಾಗಿದೆ. ಈ ಪದ್ಧತಿಯನ್ನು 2002ರಲ್ಲಿ ಕಾನೂನುಬದ್ಧ ಮಾಡಲಾಗಿದೆ. 2011ರ ವೇಳೆಗೆ ಬಾಡಿಗೆ ತಾಯ್ತನದ ಪ್ರಕರಣ ದೇಶದಲ್ಲಿ 133 ಪಟ್ಟು ಏರಿಕೆ ಕಂಡಿರುವುದು ಇದರ ಪ್ರಾಬಲ್ಯಕ್ಕೆ ಸಾಕ್ಷಿ.

    ಹೆಣ್ತನ ಗೌರವಿಸಿ: ಇದೊಂದು ವೈದ್ಯಕೀಯ ಪದ್ಧತಿಯಾದರೂ ಆರೋಗ್ಯ ವಲಯದಲ್ಲೇ ಬಾಡಿಗೆ ತಾಯ್ತನಕ್ಕೆ ವಿರೋಧವಿದೆ. ಋತುಮತಿ, ಗರ್ಭವತಿ ಆಗುವುದು ಹೆಣ್ತನದ ಲಕ್ಷಣ. ದೇಹ ಸೌಂದರ್ಯ, ಸ್ವಾತಂತ್ರ್ಯ, ಸ್ವೇಚ್ಛಾಚಾರ, ಪುರುಷರಿಗೆ ಸಮಾನರಾಗಬೇಕೆಂಬ ಕಾರಣ ಮುಂದಿಟ್ಟು ಇದನ್ನು ಕಡೆಗಣಿಸುವುದು ಆರೋಗ್ಯಕ್ಕೂ ಹಾನಿಕರ ಎಂದು ವೈದ್ಯರೇ ಬೇಸರ ವ್ಯಕ್ತಪಡಿಸಿದ್ದಾರೆ.

    ವೈದ್ಯರಿಗೂ ಹೊಣೆಗಾರಿಕೆ

    • ವೈದ್ಯರು ಬಾಡಿಗೆ ತಾಯಿಗೆ, ಮಗುವಿನ ದೈಹಿಕ, ಮಾನಸಿಕ ಆರೋಗ್ಯಕ್ಕೆ ತೊಂದರೆ ಉಂಟು ಮಾಡುವ ಪ್ರಕ್ರಿಯೆ ನಡೆಸುವಂತಿಲ್ಲ.
    • ಸರೋಗಸಿ ಕ್ಲಿನಿಕ್​ಗಳು ತಮ್ಮಲ್ಲಿ ಹುಟ್ಟಿದ ಮಗುವಿಗೆ 25 ವರ್ಷ ಆಗುವವರೆಗೆ ದಾಖಲೆ ಕಾದಿಡಬೇಕು, ಕಾನೂನು ಉಲ್ಲಂಘಿಸುವ ಕ್ಲಿನಿಕ್​ಗಳ ಮಾಲೀಕರಿಗೆ 10 ವರ್ಷ ಜೈಲು ಶಿಕ್ಷೆ
    • ಬಾಡಿಗೆ ತಾಯಂದಿರ ದೈಹಿಕ, ಮಾನಸಿಕ ಸ್ಥಿತಿಗತಿ ಮಗು ಹೆರಲು ಪೂರಕವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು

    ನಿರ್ಬಂಧಗಳು

    • ಪರಿಚಯವಿಲ್ಲದ, ಬಾಡಿಗೆ ತಾಯಿಯಾಗಲು ಸಿದ್ಧಳಿರುವ ಬೇರಾವುದೋ ಮಹಿಳೆ ಮೂಲಕ ಮಗು ಪಡೆಯುವಂತಿಲ್ಲ
    • ಗಂಡ-ಹೆಂಡತಿ ಸಂಬಂಧಿಕರೊಬ್ಬರಲ್ಲಿ ಯಾರಾದರೂ ಬಾಡಿಗೆ ತಾಯಿಯಾಗಲು ಮುಂದೆ ಬಂದರೆ ಮಗು ಪಡೆಯಲು ಅವಕಾಶ
    • ಕಾನೂನುಬದ್ಧವಾಗಿ 5 ವರ್ಷ ಕಳೆದ ನಂತರವೂ ಮಗು ಆಗದಿದ್ದರೆ ದಂಪತಿ ಹತ್ತಿರದ ಸಂಬಂಧಿಯನ್ನು ಆಯ್ಕೆ ಮಾಡಿಕೊಂಡು ಮಗು ಹೊಂದಬಹುದು
    • ಮಗು ಬಯಸುವ ಮಹಿಳೆಗೆ 25-50, ಪುರುಷರಿಗೆ 26-55 ವರ್ಷ ವಯಸ್ಸಾಗಿರಬೇಕು
    • ವಿವಾಹಿತ ದಂಪತಿಗಷ್ಟೇ ಬಾಡಿಗೆ ತಾಯಿ ಮೂಲಕ ಮಕ್ಕಳ ಪಡೆಯಲು ಅನುಮತಿ
    • ದಂಪತಿ ಮಕ್ಕಳ ಪಡೆಯಲು ಸಾಧ್ಯವೇ ಇಲ್ಲ ಎಂಬ ವೈದ್ಯ ಪ್ರಮಾಣ ಪತ್ರ ಹೊಂದಿರಬೇಕು
    • ಸಲಿಂಗಿಗಳು, ಅವಿವಾಹಿತ ಒಂಟಿ ಮಹಿಳೆಯರು/ಪುರುಷರು/ ಸಾಂಗತ್ಯದಲ್ಲಿರುವ ಜೋಡಿಗೆ ಅವಕಾಶವಿಲ್ಲ
    • ಸ್ವಂತ ಮಕ್ಕಳನ್ನು ಹೊಂದಿರುವವರು, ದತ್ತು ಪಡೆದವರು ಬಾಡಿಗೆ ತಾಯಿ ಮೂಲಕ ಮಗು ಪಡೆಯುವಂತಿಲ್ಲ
    • ಒಬ್ಬ ಮಹಿಳೆ ಒಂದು ಬಾರಿ ಮಾತ್ರ ಬಾಡಿಗೆ ತಾಯಿಯಾಗಬಹುದು
    • ಬಾಡಿಗೆ ತಾಯಿಯಿಂದ ಪಡೆದ ಮಗುವಿಗೆ ಜೈವಿಕ ಮಗುವಿಗಿರುವಷ್ಟೇ ಹಕ್ಕಿದೆ (ಆಸ್ತಿಸೇರಿ)
    • ಹೊಸ ವಿಧೇಯಕದಡಿ, ಮಕ್ಕಳನ್ನು ಬಿಟ್ಟು ಹೋಗುವ ದಂಪತಿಗೆ 10 ವರ್ಷ ಜೈಲು, 10 ಲಕ್ಷ ರೂ. ಅಥವಾ ಎರಡೂ ವಿಧಿಸಬಹುದು

    ಬೇಡವಾದ ಮಕ್ಕಳು

    • 2004: ದೆಹಲಿಯಲ್ಲಿ ಬಾಡಿಗೆ ತಾಯಿಯಿಂದ ಅವಳಿ ಮಕ್ಕಳ ಪಡೆದಿದ್ದ ವಿದೇಶಿ ದಂಪತಿ ಹೆಣ್ಣು ಸಾಕೆಂದು ಗಂಡು ಮಗುವನ್ನು ಇಲ್ಲಿಯೇ ಬಿಟ್ಟು ಹೋಗಿದ್ದರು.
    • 2014: ಆಸ್ಟ್ರೇಲಿಯಾ ದಂಪತಿ ಥಾಯ್ಲೆಂಡ್ ಮಹಿಳೆ ಮೂಲಕ 3 ಮಕ್ಕಳ ಪಡೆದಿದ್ದರು. ಆದರೆ ಮಕ್ಕಳು ಡೌನ್ ಸಿಂಡ್ರೋಮ್ ಸಮಸ್ಯೆಯಿಂದ ಬಳಲುತ್ತಿದ್ದುದರಿಂದ ಮಕ್ಕಳನ್ನು ತ್ಯಜಿಸಿದ್ದರು.

    ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: [email protected]

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts