More

    ಗದ್ದೆಗಿಳಿದು ಭತ್ತ ನಾಟಿ ಮಾಡಿದ ವಿದ್ಯಾರ್ಥಿಗಳು

    ಸೊರಬ: ತಾಲೂಕಿನ ಆನವಟ್ಟಿ ಹೋಬಳಿಯ ದ್ವಾರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗದ್ದೆಗೆ ಇಳಿದು ನಾಟಿ ಮಾಡುವ ಮೂಲಕ ಅನುಭವ ಪಡೆದುಕೊಂಡರು.
    7ನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿನ ಸೀನ ಶೆಟ್ಟರು ನಮ್ಮ ಟೀಚರು ಪಾಠಕ್ಕೆ ಸಂಬಂಧಿಸಿದಂತೆ ಗದ್ದೆಯಲ್ಲಿ ಭತ್ತದ ನಾಟಿ ಮಾಡಿಸುವ ಮೂಲಕ ಶಿಕ್ಷಕಿ ಡಿ.ವಿ.ಉಮಾದೇವಿ ಅವರು ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣ ನೀಡಿದರೆ, ವಿದ್ಯಾರ್ಥಿಗಳು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಸಂಭ್ರಮಿಸಿದರು. ಏಳನೇ ತರಗತಿಯ 19 ಮತ್ತು 6ನೇ ತರಗತಿಯ 20 ವಿದ್ಯಾಥಿಗಳನ್ನು ಗದ್ದೆಗೆ ಕರೆದುಕೊಂಡು ಹೋಗಲಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದವರರಾಗಿದ್ದು, ಉತ್ಸಾಹದಿಂದ ನಾಟಿ ಕಾರ್ಯ ನಡೆಸಿದ್ದು ವಿಶೇಷವಾಗಿತ್ತು.
    ಕೃಷಿಕರಾದ ಕೆ.ಎಸ್.ಶಿವನಗೌಡ ಮಾತನಾಡಿ, ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ನೆಲದ ಮಹಿಮೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಅಗತ್ಯ. ಪಟ್ಟಣ ಪ್ರದೇಶದ ಅನೇಕ ವಿದ್ಯಾರ್ಥಿಗಳಿಗೆ ಅಕ್ಕಿಯನ್ನು ಹೇಗೆ ತಯಾರಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತಹ ಸ್ಥಿತಿ ಇದೆ. ಈ ನಡುವೆ ಬಹುತೇಕ ಯುವಕರು ಕೃಷಿ ಚಟುವಟಿಕೆಯಿಂದ ದೂರ ಸರಿದು, ನಗರ ಪ್ರದೇಶಗಳಲ್ಲಿ ಉದ್ಯೋಗ ಕಂಡುಕೊಂಡು ನೆಲೆಸುತ್ತಿದ್ದಾರೆ. ಕರೊನಾ ವ್ಯಾಪಿಸಿದ ತರುವಾಯ ಅನೇಕರು ಪುನಃ ಗ್ರಾಮೀಣ ಪ್ರದೇಶದತ್ತ ಮುಖ ಮಾಡುತ್ತಿದ್ದು, ಕೃಷಿಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳುತ್ತಿರುವುದು ಸಂತಸ ವಿಷಯ. ಮಕ್ಕಳು ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಕೃಷಿಯ ಜ್ಞಾನವನ್ನು ಪಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
    ಶಾಲೆಯ ಮುಖ್ಯಶಿಕ್ಷಕಿ ಸರೋಜಾ ಮಾತನಾಡಿ, ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಭತ್ತದ ನಾಟಿ ಮಾಡುವ ಕುರಿತು ಮಾಹಿತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ ಎಂದರು.
    ಜಮೀನಿನ ಮಾಲಿಕರಾದ ನಾಗರಾಜ್ ಗಾಳೆ ಅವರು ಕೃಷಿ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಶಂಕರಗೌಡ, ಶಿಕ್ಷಕರಾದ ಅಬ್ದುಲ್ ಖಾದರ್, ಟಿ.ನಂದೀಶ್, ರಾಜು ಕೆಂಡೆರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts