More

    ಗದಗ ಜಿಲ್ಲೆ ಅಭಿವೃದ್ಧಿಗೆ ಪ್ರಭಾರ ಆಡಳಿತ ಅಡ್ಡಿ

    ಮೃತ್ಯುಂಜಯ ಕಲ್ಮಠ ಗದಗ

    ಗದಗ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಜಿಲ್ಲಾಧಿಕಾರಿ, ಮೂರು ತಿಂಗಳಿಂದ ಅಪರ ಜಿಲ್ಲಾಧಿಕಾರಿ ಸ್ಥಾನ ಖಾಲಿ ಆಗಿವೆ. ಬೇರೆ ಅಧಿಕಾರಿಗಳನ್ನು ನಿಯೋಜನೆ ಮಾಡಿದರೂ ಅವರು ಅಧಿಕಾರ ಸ್ವೀಕರಿಸದಿರುವುದರಿಂದ ಆಡಳಿತ ಕುಂಠಿತಗೊಂಡಿದೆ.

    ಜಿಪಂ ಸಿಇಒ ಡಾ. ಸುಶೀಲಾ ಬಿ. ಅವರಿಗೆ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅವರಿಗೆ ಅಪರ ಜಿಲ್ಲಾಧಿಕಾರಿ ಹುದ್ದೆಯ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಮುಖ್ಯ ಸ್ಥಾನಗಳು ಖಾಲಿ ಇರುವುದರಿಂದ ಆಡಳಿತ ನಿಧಾನಗತಿಯಲ್ಲಿದೆ. ಪ್ರಭಾರ ಅಧಿಕಾರಿಗಳು ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರಾ ದರೂ ಬಹು ಮುಖ್ಯ ವಿಷಯಗಳ ಕುರಿತು ಚರ್ಚೆ, ನಿರ್ಣಯ ತೆಗೆದುಕೊಳ್ಳಲು ಆಗದಂತಹ ಸ್ಥಿತಿ ಇದೆ.

    ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ನಿರಂತರ ಎಂಬಂತೆ ಸುರಿಯುತ್ತಿದೆ. ಬೆಳೆಗಳು ಹಾಳಾಗಿವೆ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಕಲಿ ಗೊಬ್ಬರ ಮಾರಾಟ ಹಾವಳಿ ಶುರುವಾಗಿದೆ. ಮಳೆಯಿಂದ ನಗರ ಮತ್ತು ಪಟ್ಟಣ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳ ಕುರಿತು ಜನರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುತ್ತಾರೆ. ಅವುಗಳನ್ನು ಇತ್ಯರ್ಥ ಪಡಿಸುವವರಾರು?

    ವರ್ಗಾವಣೆ ಪ್ರಹಸನ: ಗದಗ ಜಿಲ್ಲಾಧಿಕಾರಿಯಾಗಿದ್ದ ಸುಂದರೇಶಬಾಬು ಅವರ ಜಾಗಕ್ಕೆ ಚುನಾವಣೆ ಆಯೋಗದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ಹೊನ್ನಂಬಾ ಅವರನ್ನು ಗದಗ ಜಿಲ್ಲಾಧಿಕಾರಿಯನ್ನಾಗಿ (ಜು. 11) ಸರ್ಕಾರ ನಿಯೋಜನೆ ಮಾಡಿತು. ಆದರೆ, 19 ದಿನಗಳು ಕಳೆದರೂ ಹೊನ್ನಂಬಾ ಅವರು ಅಧಿಕಾರ ಸ್ವೀಕರಿಸಲಿಲ್ಲ. ಜು. 30ರಂದು 2014ರ ಬ್ಯಾಚ್​ನ ಐಎಎಸ್ ಅಧಿಕಾರಿ ಮಂಡ್ಯ ಜಿಪಂ ಸಿಇಒ ಆಗಿದ್ದ ದಿವ್ಯಾ ಪ್ರಭು ಅವರನ್ನು ಗದಗ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ ನೇಮಿಸಿ ಆದೇಶ ಹೊರಡಿಸಿತು. ಆದರೆ, ಆಗಸ್ಟ್ 7 ಕಳೆದರೂ ದಿವ್ಯಾ ಪ್ರಭು ಅವರೂ ಚಾರ್ಜ್ ತೆಗೆದುಕೊಂಡಿಲ್ಲ. ಹೀಗಾಗಿ, ಕಳೆದ ಒಂದು ತಿಂಗಳಿಂದ ಪೂರ್ಣ ಪ್ರಮಾಣದ ಜಿಲ್ಲಾಧಿಕಾರಿ ಹುದ್ದೆ ಖಾಲಿ ಇದೆ. ಅಪರ ಜಿಲ್ಲಾಧಿಕಾರಿಯಾಗಿದ್ದ ಸತೀಶಕುಮಾರ ಅವರು ವರ್ಗಾವಣೆಗೊಂಡು ಎರಡೂವರೆ ತಿಂಗಳು ಕಳೆದರೂ ಆ ಸ್ಥಾನವನ್ನು ಇಲ್ಲಿಯವರೆಗೆ ತುಂಬಿಲ್ಲ. ಉಪವಿಭಾಗಾಧಿಕಾರಿಗೆ ಹೆಚ್ಚುವರಿ ಚಾರ್ಜ್ ನೀಡಿ ಆಡಳಿತ ನಡೆಸಲಾಗುತ್ತಿದೆ. ಆದರೆ, ಪ್ರಭಾರಿಗಳು ಅನೇಕ ನಿರ್ಧಾರಗಳನ್ನು ಪೂರ್ಣಾವಧಿ ಅಧಿಕಾರಿಗಳಂತೆ ತೆಗೆದುಕೊಳ್ಳಲು ಸಾಧ್ಯವಾಗದು. ಅಲ್ಲದೆ, ತಮ್ಮ ಕಾಯಂ ಹುದ್ದೆಯ ಜವಾಬ್ದಾರಿಗಳೇ ಸಾಕಷ್ಟಿರುವುದರಿಂದ ಪ್ರಭಾರ ಹುದ್ದೆಯಲ್ಲಿ ಹೆಚ್ಚಿನ ಉಸಾಬರಿ ತೆಗೆದುಕೊಳ್ಳುವುದು ಸುಲಭವಲ್ಲ. ಇದು ಆಡಳಿತ ಯಂತ್ರದ ಮೇಲೆ ಒಂದಿಷ್ಟು ಪರಿಣಾಮ ಬೀರಿರುವುದು ಸುಳ್ಳಲ್ಲ.

    ಉಸ್ತುವಾರಿ ಮಂತ್ರಿ ಸುಳಿವಿಲ್ಲ: ಸಚಿವ ಬಿ.ಸಿ. ಪಾಟೀಲ ಗದಗ ಜಿಲ್ಲಾ ಉಸ್ತುವಾರಿ ವಹಿಸಿಕೊಂಡು ಆರು ತಿಂಗಳು ಕಳೆದರೂ ಅವರು ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿರುವುದು ಕೇವಲ ಮೂರು ಸಲ! ಅನ್ಯ ಜಿಲ್ಲೆಯವರನ್ನು ಜಿಲ್ಲಾ ಉಸ್ತುವಾರಿ ಎಂದು ಇಲ್ಲಿನ ಬಿಜೆಪಿಯವರು ಒಪ್ಪಿಕೊಳ್ಳಲಿಲ್ಲ. ಬಿ.ಸಿ. ಪಾಟೀಲ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿ ಅವರಿಗೆ ಅಪಹಾಸ್ಯ ಮಾಡಲಾಯಿತು. ಕೊನೆಗೆ ಸಚಿವ ಸಿ.ಸಿ. ಪಾಟೀಲ ಅವರೇ ಅಭಿಯಾನ ಕೈಬಿಡಬೇಕೆಂದು ಮನವಿ ಮಾಡಬೇಕಾಯಿತು. ತದನಂತರ ಅಕ್ರಮ ಮರಳುಗಾರಿಕೆ ಕುರಿತಂತೆ ಕೆಡಿಪಿ ಸಭೆಯಲ್ಲಿ ಶಾಸಕ ಕಳಕಪ್ಪ ಬಂಡಿ ಅವರು ಸಚಿವ ಬಿ.ಸಿ. ಪಾಟೀಲ ಅವರನ್ನು ಟೀಕಿಸಿ ಮಾತನಾಡಿದರು. ಆಗ ಶಾಸಕ ಮತ್ತು ಸಚಿವರ ಮಧ್ಯೆ ಕೊಂಚ ಬಿರುಸಾದ ಮಾತಿನ ಚಕಮಕಿ ನಡೆಯಿತು. ಈ ಎಲ್ಲ ಬೆಳವಣಿಗೆಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಗದಗ ಕಡೆಗೆ ಸುಳಿಯುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

    ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಸ್ಥಾನಗಳು ಖಾಲಿ ಇರುವುದರಿಂದ ಸಮರ್ಥ ಆಡಳಿತ ನೀಡುವುದು ಅಸಾಧ್ಯ. ಪ್ರಮುಖ ಅಧಿಕಾರಿಗಳು ಇಲ್ಲದ್ದರಿಂದ ಆಡಳಿತ ಯಂತ್ರ ಸರಿಯಾಗಿ ಕಾಯನಿರ್ವಹಿಸುವ ಬಗ್ಗೆ ಅನುಮಾನವಿದೆ. ಮಳೆ ಸುರಿದು ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾದರೂ ಅದರ ಜವಾಬ್ದಾರಿಯನ್ನು ಯಾರೂ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ, ಸರ್ಕಾರ ಕೂಡಲೆ ಡಿಸಿ, ಅಪರ ಡಿಸಿ ಸ್ಥಾನಗಳನ್ನು ಭರ್ತಿ ಮಾಡಬೇಕು.
    ರಮೇಶ ಚಲವಾದಿ ಸಾಮಾಜಿಕ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts