More

    ಗದಗ: ಕಲಿಕಾ ಹಬ್ಬದಲ್ಲಿ ಮತದಾರರ ಜಾಗೃತಿ

    ಗದಗ: ಸೋಮವಾರದಿಂದ ಮೂರು ದಿನಗಳ ಕಾಲ ಮುಳಗುಂದದಲ್ಲಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಏರ್ಪಡಿಸಿದ ಜಿಲ್ಲಾ ಮಟ್ಟದ ಕಲಿಕಾ ಹಬ್ಬದಲ್ಲಿ ಮಕ್ಕಳು ಮತದಾರರ ಜಾಗೃತಿ ಕುರಿತು ರಂಗೋಲಿ ಬಿಡಿಸುವ ಮೂಲಕ ಗಮನ ಸೆಳೆದರು. ಕಲಿಕಾ ಹಬ್ಬದಲ್ಲಿ ಮಕ್ಕಳು ವಿವಿಧ ಕಲಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಹಾಗೂ  ಆಸಕ್ತಿಯಿಂದ ಪಾಲ್ಗೊಳ್ಳುವುದು ಸಾಮಾನ್ಯವೆನಿಸಿದರೂ ಮತದಾರರ ಜಾಗೃತಿ ಕುರಿತು ಉತ್ಸಾಹದಿಂದ ರಂಗೋಲಿಯಲ್ಲಿ  ಅರಳಿದ ಕಲೆ ಮಾತ್ರ  ಅತ್ಯಂತ ವಿಶೇಷವೆನಿಸಿತು.

    ಚುನಾವಣಾ ಆಯೋಗದ ಲಾಂಛನ, ಎಲೆಕ್ಟ್ರಾನಿಕ್ಸ ಮತ ಯಂತ್ರ, ಮತದಾನದಂದು ಗುರುತಿನ ಚೀಟಿ ಮತ ಚಲಾಯಿಸುವ ದೃಶ್ಯ,  ಮತದಾನ ನಮ್ಮ ಹಕ್ಕು ಎಂದು ಸಾರುವ ರಂಗೋಲಿ, ದೇಶದ ಬಾವುಟದಲ್ಲಿ ಮತದಾರರ ಸಂದೇಶ, ದೇಶದ ನಕ್ಷೆಯಲ್ಲಿ ಐಕ್ಯತೆ ಸಾರುವ ಜಾಗೃತಿ , ನಮ್ಮ ಮತ ನಮ್ಮ ಹಕ್ಕು , ಭರವಸೆಯ ನಾಳೆಗಾಗಿ ನಮ್ಮ ಮತ , ನಮ್ಮ ಮತ ನಮ್ಮ ಶಕ್ತಿ ಎಂಬಿತ್ಯಾದಿ ಘೋಷವಾಕ್ಯಗಳನ್ನೊಳಗೊಂಡ ಮತದಾರರ ಜಾಗೃತಿಯ ರಂಗೋಲಿಗಳು ಸಾರ್ವಜನಿಕರ ಗಮನ ಕೇಂದ್ರೀಕರಿಸುವಲ್ಲಿ ಯಶಸ್ವಿಯಾದವು.    

    ಮುಳಗುಂದದ ಎಸ್.ಜೆ.ಜೆ.ಎಂ.ಪ್ರೌಢಶಾಲೆಯ ಮಕ್ಕಳು ಮತದಾರರ ಜಾಗೃತಿ ಕುರಿತು ಕಿರುನಾಟಕ ಪ್ರದರ್ಶಿಸಿದರು. ನಾಟಕವು ಮತದಾನದ ಅಗತ್ಯತೆಯ ಕುರಿತು ಮತ್ತು ಮತದಾನದಿಂದಾಗುವ ಉಪಯೋಗ , ಮತದಾರರ ಜವಾಬ್ದಾರಿ , ಕರ್ತವ್ಯಗಳ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಕಂಡಿತು.
    ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಮತದಾರರ ಜಾಗೃತಿ ಮೂಡಿಸುವ ಚಿತ್ರಕಲೆಗಳು ಮಕ್ಕಳ ಕೈಯಲ್ಲಿ ಅದ್ಭುತವಾಗಿ ಮೂಡಿಬಂದವು. ಮತ ಚಲಾಯಿಸುವ ವಿಧಾನ, ಮತಗಟ್ಟೆಯ ಚಿತ್ರಣ, ಮತದಾನದ ಮಹತ್ವ ಸಾರುವ ಸಾಂದರ್ಭಿಕ ಚಿತ್ರಗಳು ಮಕ್ಕಳ ಕಲಾಕುಂಚದಲ್ಲಿ ರಂಗುರಂಗಾಗಿ ಚಿತ್ತಾರಗೊಂಡಿದ್ದು ವಿಶೇಷವಾಗಿತ್ತು.  

     ಜಿಲ್ಲಾ  ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಸುಶೀಲಾ ಬಿ ಅವರು ಮತದಾರರ ಜಾಗೃತಿ ಮೂಡಿಸುವ  ರಂಗೋಲಿ ಚಿತ್ತಾರ, ಚಿತ್ರಕಲೆ ಹಾಗೂ ಕಿರು ನಾಟಕವನ್ನು ವೀಕ್ಷಿಸಿದರು. ನಂತರ ಮತದಾನದ ಪ್ರಕ್ರಿಯೆ ತಿಳಿಸಿ ಕೊಡುವ ಮಾದರಿ ಪ್ರಾತ್ಯಕ್ಷಿಕೆಯನ್ನು ಆಗಮಿಸಿದ ಜನಸಾಮಾನ್ಯರಿಗೆ ತಿಳಿಸಿದರು. ಈ ಮೂಲಕ ಜನಸಾಮಾನ್ಯರು ಇವಿಎಂ ಮೂಲಕ ಮತಚಲಾಯಿಸುವ ಪ್ರಕ್ರಿಯೆಯನ್ನು  ಅನುಭವಿಸಿದರು. ತಾವು ಮತ ಚಲಾಯಿಸಿದ ಮತವು ಸರಿಯಾದ ವ್ಯಕ್ತಿ ಪಕ್ಷ ಹಾಗೂ ಚಿಹ್ನೆಗೆ ತಲುಪಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮತ ಯಂತ್ರದ ಪಕ್ಕದಲ್ಲಿರುವ ವಿವಿ ಪ್ಯಾಟ್ ಯಂತ್ರವನ್ನು ನೋಡಿ ದೃಢಪಡಿಸಿಕೊಳ್ಳುತ್ತಿರುವುದು ಕಂಡುಬಂದಿತು.

    ನಂತರ ಮಾತನಾಡಿದ ಅವರು ಮತದಾನ ಮಾಡುವುದು  ಪ್ರತಿಯೊಬ್ಬರ ಜವಾಬ್ದಾರಿ.ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ಮತದಾನದ ದಿನದಂದು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಅರ್ಹ ಜನಪ್ರತಿನಿಧಿಗಳನ್ನು ಆರಿಸಬೇಕು. ಸುಭದ್ರ ಸರ್ಕಾರ ಪ್ರತಿ ಮತದಾರನ ಕರ್ತವ್ಯ ಎಂಬುದನ್ನರಿತು ಮತದಾರರೆಲ್ಲರೂ ಮತ ಚಲಾಯಿಸಬೇಕು ಹಾಗೂ ಎಲ್ಲ ಅರ್ಹ ಮತದಾರರು ಮತದಾನ ಮಾಡುವಂತೆ ಇತರರಿಗೆ  ಪ್ರೇರೇಪಿಸಬೇಕೆಂದು  ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಸುಶೀಲಾ ಬಿ ಹೇಳಿದರು.  

    ಈ ಸಂದರ್ಭದಲ್ಲಿ  ಡಿಡಿಪಿಐ ಬಸವಲಿಂಗಪ್ಪ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು , ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯಸ್ಥರು, ಸಹಶಿಕ್ಷಕರು, ಸಾರ್ವಜನಿಕರು , ಮಕ್ಕಳು ಹಾಜರಿದ್ದರು.    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts