More

    ಗದಗ: ಅಸಮರ್ಪಕ ನೀರುಪೂರೈಕೆ, ನೀರಾವರಿ ಇಲಾಖೆಗೆ ಬೀಗ ಜಡಿದು ಪ್ರತಿಭಟನೆ

    ಗದಗ: ಹಿಂಗಾರು ಬೆಳೆಗಳಿಗೆ ಸಮರ್ಪಕ ನೀರೋದಗಿಸಲು ವಿಫಲರಾಗಿರುವ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗದಗ ಜಿಲ್ಲೆ ನರಗುಂದ ತಾಲೂಕಿನ ವಿವಿಧ ಗ್ರಾಮಗಳ ರೈತರು ಪಟ್ಟಣದ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಮುಖ್ಯ ಕಚೇರಿಗೆ ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.

    ನರಗುಂದ ಹಾಗೂ ತಾಲೂಕಿನ ಭೈರನಹಟ್ಟಿ, ಮದಗುಣಕಿ, ಕೊಣ್ಣೂರಿನ ಟೇಲೆಂಡ್ ಪ್ರದೇಶದ ರೈತರ ಜಮೀನಿಗೆ ಸಮರ್ಪಕ ನೀರು ಪೊರೈಸುವ ಸದುದ್ದೇಶದಿಂದ ತಾಲೂಕಿನ ಹದಲಿ ಗ್ರಾಮದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದ ಜಾಕ್‌ವೆಲ್ ನಿರ್ಮಿಸಲಾಗಿದೆ. ೫೦೦ ಹೆಕ್ಟೆರ್ ಪ್ರದೇಶಕ್ಕೆ ನೀರುಣಿಸುವ ಜಾಕ್‌ವೆಲ್ ಅನ್ನು ಕಳೆದೊಂದು ತಿಂಗಳಿಂದ ಸಂಪೂರ್ಣ ಮಾಡಿದ್ದರಿಂದ ೨೦೦ಕ್ಕೂ ಅಧಿಕ ಹೆಕ್ಟೆರ್ ಪ್ರದೇಶದಲ್ಲಿ ಬೆಳೆದಿರುವ ಹತ್ತಿ, ಗೋಧಿ, ಜೋಳ, ಕಡ್ಲಿ, ಗೋವಿನಜೋಳ, ಸೂರ್ಯಕಾಂತಿ, ಶೇಂಗಾ ಮುಂತಾದ ಹಿಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಜಾಕ್‌ವೆಲ್‌ನಿಂದ ೬ ಕಿಲೋ ಮೀಟರ್ ಉದ್ದವಿರುವ ಪೈಪ್‌ಲೈನ್ ಮಧ್ಯದಲ್ಲಿ ಕೆಲ ಪ್ರಭಾವಿಗಳು ಅನಧಿಕೃತವಾಗಿ ನೀರು ಪಡೆಯುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ನೀರಾವರಿ, ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲ ನೀರಾವರಿ ಅಧಿಕಾರಿಗಳು ಹಣದಾಸೆಗೆ ಪ್ರಭಾವಿಗಳಿಗೆ ಅನಧಿಕೃತವಾಗಿ ನೀರು ಪೊರೈಕೆ ಮಾಡುತ್ತಿರುವುದರಿಂದ ಅರ್ಹ ರೈತರ ಬೆಳೆಗಳು ಸಂಪೂರ್ಣ ಒಣಗುತ್ತಿವೆ. ಮುಂದಿನ ನಾಲ್ಕೈದು ದಿನಗಳಲ್ಲಿ ನೀರೊದಗಿಸದಿದ್ದಲ್ಲಿ ಪ್ರತಿ ಎಕರೆಗೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗುತ್ತದೆ. ಈ ಎಲ್ಲ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳೇ ಭರಿಸಬೇಕು ಎಂದು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಇನ್ನೂ ೧೫ನೇ ಬ್ಲಾಕ್ ವ್ಯಾಪ್ತಿಗೊಳಪಡುವ ತಾಲೂಕಿನ ಕೊಣ್ಣೂರ, ಕಪ್ಪಲಿ, ಕಲ್ಲಾಪೂರ ಭಾಗದ ರೈತರು ಕೂಡ ತಮ್ಮ ಜಮೀನುಗಳಿಗೆ ಕಳೆದೊಂದು ತಿಂಗಳಿನಿಂದ ಸಮರ್ಪಕ ನೀರು ಪೊರೈಕೆಯಾಗಿಲ್ಲ. ಎರಡು ತಿಂಗಳಲ್ಲಿ ಎಂಟು ದಿನಗಳಾದರೂ ಸರಿಯಾಗಿ ನೀರು ಬಂದಿಲ್ಲ. ಕನಿಷ್ಟ ೧೫ ಅಥವಾ ೮ ದಿನಕ್ಕೊಮ್ಮೆಯಾದರೂ ಕಾಲುವೆಗೆ ನೀರು ಹರಿಸುವಂತೆ ಮನವಿ ಮಾಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಪ್ರತಿ ಎಕರೆಗೆ ೧೦ ರಿಂದ ೧೫ ಸಾವಿರ ರೂಪಾಯಿ ಲಾವಣೆ, ಬೀಜ, ಗೊಬ್ಬರ, ಕ್ರಿಮಿನಾಶಕ ಔಷಧಗಳ ಸಿಂಪರಣೆ ಸೇರಿದಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಕಾಲುವೆ ಮೇಲೆ ರೈತರನ್ನು ಕಳುಹಿಸಿದರೂ ಸರಿಯಾಗಿ ನೀರು ಪೊರೈಸದಿರುವುದು ಖಂಡನೀಯ. ರೈತರಿಗೆ ನೀರು ಕೊಡಲು ಸಾಧ್ಯವಾಗದಿದ್ದರೆ ನಮ್ಮೆಲ್ಲರನ್ನು ನಿಮ್ಮ ಕಚೇರಿಯಲ್ಲಿಟ್ಟುಕೊಂಡು ಊಟ, ವಸತಿ, ಸಂಬಳ ನೀಡುವಂತೆ ನೀರಾವರಿ ತಾಂತ್ರಿಕ ವಿಭಾಗದ ಅಧಿಕಾರಿ ಓಲೇಕಾರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ, ಕಾರ್ಯಪಾಲಕ ಅಭಿಯಂತರ ಅಶೋಕ ಅಲಬಾಳ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವನಗೌಡ ಶಿವನಗುತ್ತಿ ಅವರನ್ನು ಸ್ಥಳಕ್ಕೆ ಕರೆಯಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಟೆಲೆಂಡ್ ಪ್ರದೇಶದ ರೈತರಿಗೆ ಮಂಗಳವಾರದವರೆಗೆ ನೀರು ಪೊರೈಸಿ, ಅನಧಿಕೃತವಾಗಿ ನೀರು ಪಡೆಯುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts