More

    ಗಣ, ನವ, ಮೃತ್ಯುಂಜಯ ಹೋಮ ಸಂಪನ್ನ

    ಚಿತ್ರದುರ್ಗ: ಹಿಂದು ಮಹಾಗಣಪತಿ ಮಹೋತ್ಸವದ ಅಂಗವಾಗಿ ಮಂಗಳವಾರ ಗಣ, ನವ, ಮೃತ್ಯುಂಜಯ ಹೋಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು.

    ಬೆಳಗ್ಗೆ 9ಕ್ಕೆ ಆರಂಭವಾದ ಹೋಮದ ಪೂಜಾ ವಿಧಿ-ವಿಧಾನ ಮಧ್ಯಾಹ್ನ 2.30ಕ್ಕೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು. ನವಧಾನ್ಯ, ವಸ್ತ್ರ ಸೇರಿ ಇತರೆ ಪೂಜಾ ಸಾಮಗ್ರಿ ಸಮರ್ಪಿಸಲಾಯಿತು.

    ದುರ್ಗದ ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಕಾಳಿಕಾಮಠೇಶ್ವರಿ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೋಪಾಲಪುರ ರಸ್ತೆಯ ದುರ್ಗಾ ದೇವಿ, ಮಲೆನಾಡು ಚೌಡೇಶ್ವರಿ, ಸಿಗಂದೂರು ಚೌಡೇಶ್ವರಿ, ಬನಶಂಕರಿ, ಗೊಕಟ್ಟೆ ಕಣಿವೆಮಾರಮ್ಮ, ಬುಡ್ಡಾಂಬಿಕಾ, ಕನ್ಯಾಕಾ ಪರಮೇಶ್ವರಿ ದೇವಿ ಸೇರಿ 11ಕ್ಕೂ ಹೆಚ್ಚು ದೇವತೆಗಳ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು.

    ಶಕ್ತಿದೇವತೆಗಳ ದರ್ಶನವನ್ನು ಕೂಡ ಸಂಜೆಯವರೆಗೂ ಅಸಂಖ್ಯಾತ ಭಕ್ತರು ಪಡೆದುಕೊಂಡರು. ದೇಗುಲಗಳಿಗೆ ಕರೆದೊಯ್ಯುವ ಮುನ್ನ ಹೋಮಕುಂಡಕ್ಕೆ ಎಲ್ಲಾ ದೇವತೆಗಳನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು. ಇದೇ ವೇಳೆ ಕಹಳೆ, ಉರುಮೆ, ಡೊಳ್ಳು, ನಾದಸ್ವರ, ತಮಟೆ ಸೇರಿ ಇತರೆ ಜನಪದ ಕಲಾತಂಡಗಳ ಮಂಗಳವಾದ್ಯಗಳು ಮೊಳಗಿದವು.

    ಮಹಾಗಣಪ, ದೇವತೆಗಳ ಮುಂಭಾಗದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಮಹಾಗಣಪತಿ ಉತ್ಸವ ಸಮಿತಿ ಕಾರ್ಯಕರ್ತರು ಸೇರಿ ಅನೇಕ ಭಕ್ತರಿಂದ ಜಯಘೋಷ ಮೊಳಗಿತು. ಈ ದೃಶ್ಯವನ್ನು ಅನೇಕರು ಕಣ್ತುಂಬಿಕೊಂಡರು. ಗಣಪನ ಮುಂಭಾಗ ಮೊಬೈಲ್‌ಗಳ ಮೂಲಕ ಭಾವಚಿತ್ರಗಳನ್ನು ಸೆರೆಹಿಡಿಯಲು ಮುಂದಾದರು.

    ಸಮಿತಿಯ ಅಧ್ಯಕ್ಷ ಜಿ.ಎಂ.ಸುರೇಶ್, ಮಾರ್ಗದರ್ಶಕ ಬದರಿನಾಥ್, ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್ ಅರ್ಚಕರ ಮಾರ್ಗದರ್ಶನದಂತೆ ಪೂರ್ಣಾಹುತಿ ನಡೆಸಿಕೊಟ್ಟರು. ನಂತರ ಜೈ ಶ್ರೀರಾಮ ಬಳಗದಿಂದ ಸಂಜೆ 6ರವರೆಗೂ ನಡೆದ ಅನ್ನಸಂತರ್ಪಣೆ ಕಾರ್ಯದಲ್ಲೂ ಅನೇಕ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

    ವಿಎಚ್‌ಪಿ, ಬಜರಂಗದಳದ ಮುಖಂಡರಾದ ಪ್ರಭಂಜನ್, ಪಿ.ರುದ್ರೇಶ್, ಕೇಶವ್, ಅಶೋಕ್, ಶ್ರೀನಿವಾಸ್, ರಂಗಸ್ವಾಮಿ, ಶ್ರೀನಿವಾಸ್ ಡೈರಿ, ರಂಗಸ್ವಾಮಿ, ಕಿಶೋರ್, ನವೀನ್ ಚಾಲುಕ್ಯ, ಭಾನು, ಸಮಿತಿ ಸದಸ್ಯರಾದ ಪ್ರಶಾಂತ್ ಅಪ್ಪಾಜಿ ಪರಿಸರ, ವಿಫಲ್ ಜೈನ್ ಇತರರಿದ್ದರು.

    ಬೃಹತ್ ಬೈಕ್‌ರ್ಯಾಲಿ ಇಂದು: ಅ. 8ರಂದು ಮಹಾಗಣಪನ ಅದ್ದೂರಿ ಶೋಭಾಯಾತ್ರೆ ನಡೆಯಲಿದ್ದು, ಅದರ ಅಂಗವಾಗಿ ವಿಎಚ್‌ಪಿ, ಬಜರಂಗದಳದಿಂದ ಆಯೋಜಿಸಿರುವ ಬೃಹತ್ ಬೈಕ್‌ರ್ಯಾಲಿಗೆ 5ರಂದು ಬೆಳಗ್ಗೆ 10ಕ್ಕೆ ಕನಕ ವೃತ್ತದ ಮುಂಭಾಗ ಚಾಲನೆ ದೊರೆಯಲಿದೆ. ವಿವಿಧ ಮಠಾಧೀಶರು ಸಾನಿಧ್ಯ ವಹಿಸಲಿದ್ದು, ಪ್ರಭಂಜನ್ ಉದ್ಘಾಟಿಸಲಿದ್ದಾರೆ ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಸಂದೀಪ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts