More

    ಗಣ್ಯರಿಗೆ ವೀಳ್ಯ ನೀಡಿ ಮಾರಿ ಜಾತ್ರೆಗೆ ಆಮಂತ್ರಣ

    ವಿಜಯವಾಣಿ ಸುದ್ದಿಜಾಲ ಶಿರಸಿ: ಇಡೀ ಊರಿಗೆ ಊರೇ ಈ ಕಲ್ಯಾಣೋತ್ಸವದಲ್ಲಿ ನೆರೆಯುತ್ತದೆ. ಇಂಥ ಸಂಭ್ರಮೋತ್ಸವದಲ್ಲಿ ಭಾಗಿಯಾಗುವಂತೆ ಗಣ್ಯಾತಿಗಣ್ಯರಿಗೆ ಆಮಂತ್ರಣವಷ್ಟೇ ಅಲ್ಲದೆ, ಸಾಂಪ್ರದಾಯಿಕ ವೀಳ್ಯ ನೀಡುವ ಮೂಲಕವೂ ಆಮಂತ್ರಿಸಲಾಗುತ್ತಿದೆ!!

    ನಾಡ ಅಧಿದೇವತೆ ಮಾರಿಕಾಂಬಾ ದೇವಿ ಜಾತ್ರೆಯ ಸಡಗರದ ಪರಿಯಿದು. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಮುಖ್ಯ ವಿಧಿ ಕಲ್ಯಾಣ ಮಹೋತ್ಸವ. ಮಾ.2ರ ರಾತ್ರಿ ಕಲ್ಯಾಣಿಯಾಗುವ ದೇವಿ, ಮಾನೆಯ ದಿನ ಸರ್ವಾಭರಣ ಭೂಷಿತೆಯಾಗಿ ಸಾಲಂಕೃತ ರಥದಲ್ಲಿ ಶೋಭಾ ಯಾತ್ರೆಯಲ್ಲಿ ಸಾಗಿ ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನಳಾಗುತ್ತಾಳೆ. ಈ ಸಂಭ್ರಮ ಕಣ್ತುಂಬಿಕೊಳ್ಳಲು ಸಾವಿರಾರು ಜನರಿಗೆ ದೇವಾಲಯದ ವತಿಯಿಂದ ಆಮಂತ್ರಣ ನೀಡಲಾಗುತ್ತದೆ. ಇದರ ಜತೆ ಮಠಾಧೀಶರು, ದೇವಾಲಯದ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ನ್ಯಾಯಾಧೀಶರು, ಸಚಿವರು, ಶಾಸಕರು, ಉನ್ನತ ಅಧಿಕಾರಿಗಳು, ನ್ಯಾಯಾಧೀಶರು, ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಸಾಂಪ್ರದಾಯಿಕ ವೀಳ್ಯ ನೀಡಿ ಆಮಂತ್ರಿಸುವ ಪದ್ಧತಿ ಕಳೆದ ಜಾತ್ರೆಯಿಂದ ಆಚರಣೆಗೆ ಬಂದಿದ್ದು, ಈ ಬಾರಿಯೂ ವೀಳ್ಯ ನೀಡುವ ಕಾರ್ಯ ಆರಂಭವಾಗಿದೆ.

    ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಮಂಡಳಿ ಸದಸ್ಯರಾದ ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ, ಶಶಿಕಲಾ ಚಂದ್ರಾಪಟ್ಟಣ ಮುಂತಾದವರು ಈ ಕಾರ್ಯ ಮಾಡುತ್ತಿದ್ದಾರೆ. ಕಳೆದ ಜಾತ್ರೆಯಲ್ಲಿ ಆರಂಭಗೊಂಡ ಈ ವಿಶೇಷ ಆಮಂತ್ರಣ ಪದ್ಧತಿ ಈ ಬಾರಿಯೂ ಮುಂದುವರಿದಿದೆ. ಈಗಾಗಲೇ ಧರ್ಮದರ್ಶಿ ಮಂಡಳಿಯವರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಧಿಕಾರಿ ಡಾ.ಹರೀಶಕುಮಾರ, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಎನ್​ಡಬ್ಲು್ಯಕೆಆರ್​ಟಿಸಿ ಅಧ್ಯಕ್ಷ ವಿ.ಎಸ್. ಪಾಟೀಲ, ಜಿಲ್ಲಾನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಆಮಂತ್ರಣ ನೀಡಲಾಗುತ್ತಿದೆ.

    80 ಸಾವಿರ ಆಹ್ವಾನ ಪತ್ರಿಕೆ ಮುದ್ರಣ: ವೈದಿಕರು ಜಾತ್ರೆಯ ಮುಹೂರ್ತ ಘೊಷಿಸಿದ ಮೇಲೆ ದೇವಾಲಯದ ಆಡಳಿತ ಮಂಡಳಿಯವರು ಆಮಂತ್ರಣ ಪತ್ರಿಕೆ ಮುದ್ರಿಸುತ್ತಾರೆ. ಈ ಬಾರಿಯ ಜಾತ್ರೆಗೆ 80 ಸಾವಿರ ಆಹ್ವಾನ ಪತ್ರಿಕೆ ಸಿದ್ಧವಾಗಿ, ಹಂಚಿಕೆಯಾಗುತ್ತಿದೆ. ನಗರದ ಪ್ರತಿ ಮನೆಗೆ ಮಾರಿಪಟ್ಟಿ ಕೊಡುವ ಉಗ್ರಾಣಿಗಳು ಅದರ ಜೊತೆಯಲ್ಲಿ ಜಾತ್ರಾ ಮಹೋತ್ಸವದ ಕರೆಯೋಲೆ ಕೊಡುತ್ತಾರೆ. ಸುತ್ತಲಿನ 48 ಸೀಮೆಗಳ ರೈತರು, ಭಕ್ತರ ಮನೆಗಳಿಗೆ ಕರೆ ತಲುಪುತ್ತದೆ. ಒಂದು ಊರಿಗೆ 200-300 ಆಮಂತ್ರಣ ಕಳುಹಿಸಿದರೆ, ಆ ಊರಿನ ಜನರೇ ಅದನ್ನು ಮನೆ ಮನೆಗೆ ತಲುಪಿಸುತ್ತಾರೆ. ಹೀಗೆ ಜನಸಾಮಾನ್ಯರಿಗೆ ಆಮಂತ್ರಣ ನೀಡುವ ಜತೆಗೆ ಗಣ್ಯರಿಗೆ ವೀಳ್ಯದ ಆಮಂತ್ರಣವನ್ನು ಆಡಳಿತ ಮಂಡಳಿ ಮಾಡುತ್ತಿದೆ.

    ಮಾ.3 ರಿಂದ 11ರವರೆಗೆ ವಿಶೇಷ ಸಾರಿಗೆ ವ್ಯವಸ್ಥೆ: ಮಾರಿಕಾಂಬಾ ದೇವಿ ಜಾತ್ರಾ ನಿಮಿತ್ತ ಮಾ.3 ರಿಂದ ಮಾ.11ರವರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷವಾಗಿ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಾ.1ರಿಂದ ಹಳೇ ಬಸ್ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ತಿಳಿಸಿದ್ದಾರೆ.

    ಶಿರಸಿ ಹಳೇ ಬಸ್ ನಿಲ್ದಾಣದ ಸುತ್ತಮುತ್ತ ಜಾತ್ರಾ ಅಂಗಡಿ-ಮುಂಗಟ್ಟು ಹಾಕುವುದರಿಂದ ಬಸ್ ಸಂಚಾರಕ್ಕೆ ತೊಂದರೆಯಾಗುವುದರಿಂದ ಮಾ.1ರ ಬೆಳಗ್ಗೆಯಿಂದ ಹಳೇ ಬಸ್ ನಿಲ್ದಾಣದ ಸಾರಿಗೆ ಕಾರ್ಯಾಚರಣೆಗಳನ್ನು ಹೊಸ ಬಸ್ ನಿಲ್ದಾಣದಿಂದ ಮಾಡಲಾಗುವುದು. ಶಿರಸಿಯಿಂದ ಹಾನಗಲ್, ಹಾವೇರಿ, ಹುಬ್ಬಳ್ಳಿ, ಗದಗ, ಲಕ್ಷ್ಮೇಶ್ವರ, ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ, ಯಲ್ಲಾಪುರ, ದಾಂಡೇಲಿ, ಅಂಕೋಲಾ, ಕಾರವಾರ ಮತ್ತು ಪ್ರಮುಖ ಊರುಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಜಾತ್ರೆಯ ದಿನಗಳಲ್ಲಿ ಹಾನಗಲ್, ಹಾವೇರಿ, ಹುಬ್ಬಳ್ಳಿ ಕಡೆಗೆ ಹೋಗುವ ಬಸ್​ಗಳನ್ನು ಹೊಸ ಬಸ್ ನಿಲ್ದಾಣದಿಂದ- ಅಶ್ವಿನಿ ಸರ್ಕಲ್- ಎಪಿಎಂಸಿ- ಶಿರಸಿ ಘಟಕ- ವಿವೇಕಾನಂದ ಕ್ರಾಸ್- ಚಿಪಗಿ ಸರ್ಕಲ್ ಮಾರ್ಗವಾಗಿ, ಬನವಾಸಿ ಮಾರ್ಗದ ಬಸ್​ಗಳನ್ನು ರಾಮನಬೈಲ್ ಕ್ರಾಸ್​ನಿಂದ ಹಾಗೂ ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಬಸ್​ಗಳನ್ನು ಹೊಸ ಬಸ್ ನಿಲ್ದಾಣದಿಂದ ಪದ್ಮಶ್ರೀ ಸರ್ಕಲ್, ಹನುಮಾನ ವ್ಯಾಯಾಮ ಶಾಲೆ, ಐದು ರಸ್ತೆ ಸರ್ಕಲ್ ಮುಖಾಂತರ ಸಂಚರಿಸಲು ಅವಕಾಶ ಮಾಡಲಾಗಿದೆ.

    ಶಿರಸಿಯಿಂದ ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಭಾಗಕ್ಕೆ ಹೋಗುವ ಪ್ರಯಾಣಿಕರು ಹೊಸ ಬಸ್ ನಿಲ್ದಾಣ ಅಥವಾ ಹನುಮಾನ ವ್ಯಾಯಾಮ ಶಾಲೆ ಆವರಣ ಬಸ್ ತಂಗುದಾಣದಿಂದ ಪ್ರಯಾಣಿಸಬಹುದಾಗಿದೆ. ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಭಾಗದಿಂದ ಶಿರಸಿಗೆ ಬರುವ ಪ್ರಯಾಣಿಕರು ರಾಯಪ್ಪಾ ಹುಲೇಕಲ್ ಶಾಲಾ ತಂಗುದಾಣ ಞದಲ್ಲಿ ಇಳಿಯಬಹುದಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅಶ್ವಿನಿ ಸರ್ಕಲ್, ರಾಮನಬೈಲ್ ಕ್ರಾಸ್, ಎಪಿಎಂಸಿ ಕ್ರಾಸ್, ಹನುಮಾನ್ ವ್ಯಾಯಾಮ ಶಾಲೆ ಆವರಣ ಮತ್ತು ರಾಯಪ್ಪಾ ಹುಲೇಕಲ್ ಶಾಲಾ ಆವರಣದಲ್ಲಿ ತಾತ್ಕಾಲಿಕ ಬಸ್ ತಂದುದಾಣಗಳನ್ನು ನಿರ್ವಿುಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾ.1ರಂದು ಬೆಳಗ್ಗೆಯಿಂದ ಹಳೇ ಬಸ್ ನಿಲ್ದಾಣದಲ್ಲಿಯ ಪಾಸ್ ಕೌಂಟರ್ ಅನ್ನು ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು. ಮಾಹಿತಿಗೆ (7760991725, 7760991702, 7760991713, 7760991712, 08344-229952) ಸಂರ್ಪಸಬಹುದಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts