More

    ಗಣಿತ ಪರೀಕ್ಷೆಗೆ 684 ವಿದ್ಯಾರ್ಥಿಗಳು ಗೈರು

    ಶಿವಮೊಗ್ಗ: ಜಿಲ್ಲೆಯ 84 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ಗಣಿತ ಪರೀಕ್ಷೆ ಸುಸೂತ್ರವಾಗಿ ನಡೆಯಿತು. 23,848 ವಿದ್ಯಾರ್ಥಿಗಳ ಪೈಕಿ 684 ಮಂದಿ ಪರೀಕ್ಷೆಗೆ ಗೈರಾಗಿದ್ದರು. 745 ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರು.

    520 ಮಂದಿ ಖಾಸಗಿಯಾಗಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 78 ಮಂದಿ ಗೈರಾಗಿದ್ದರು. ಓರ್ವ ವಿದ್ಯಾರ್ಥಿ ಅನ್ಯ ರಾಜ್ಯದಿಂದ ಬಂದು ಪರೀಕ್ಷೆ ಬರೆದರೆ, ಬೇರೆ ಜಿಲ್ಲೆಗಳಿಂದ ಬಂದ 661 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು, ಇವರಲ್ಲಿ ಇಬ್ಬರು ಗೈರಾಗಿದ್ದರು.

    ಜೂ.25ರಂದು ಮೊದಲ ಪರೀಕ್ಷೆ ನಡೆದ ಸಂದರ್ಭದಲ್ಲಿ ಪರಸ್ಪರ ಅಂತರ ಸೇರಿ ಕೆಲವು ನ್ಯೂನತೆಗಳು ಕಾಣಿಸಿಕೊಂಡಿದ್ದವು. ಆದರೆ ಶನಿವಾರದ ಪರೀಕ್ಷೆಗೆ ಶಿಕ್ಷಣ ಇಲಾಖೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಂಡಿತ್ತು. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಕರೊನಾ ನಿರ್ವಹಣೆ ಮಾನದಂಡಗಳನ್ನು ಅನುಷ್ಠಾನ ಮಾಡಲಾಗಿತ್ತು.

    73 ಮಂದಿಗೆ ಪ್ರತ್ಯೇಕ: ಕಂಟೇನ್ಮೆಂಟ್ ವಲಯದಿಂದ ಬಂದ ಹಾಗೂ ಅನಾರೋಗ್ಯ ಕಾಣಿಸಿಕೊಂಡ ವಿದ್ಯಾರ್ಥಿಗಳಿಗೆ ಈ ಬಾರಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕಂಟೇನ್ಮೆಂಟ್ ವಲಯದಿಂದ ಬಂದ 56 ಹಾಗೂ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ 17 ಮಕ್ಕಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಎದುರಿಸಿದರು.

    ಪರೀಕ್ಷಾ ಕೇಂದ್ರಕ್ಕೆ ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಶಿವಮೊಗ್ಗ ನಗರದ ಕೆಲ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿ, ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಶುಭ ಕೋರಿದರು.

    ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಅದೇರೀತಿ ಶಿವಮೊಗ್ಗ ಜಿಲ್ಲೆಯಲ್ಲಿಯೂ ಪರೀಕ್ಷೆ ಸುಗಮವಾಗಿ ನಡೆಯುತ್ತಿದೆ. ಆತಂಕವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. 198 ಬಸ್​ಗಳ ಮೂಲಕ ಯಾವೊಬ್ಬ ವಿದ್ಯಾರ್ಥಿಗೂ ತೊಂದರೆಯಾಗದಂತೆ ಪರೀಕ್ಷಾ ಕೇಂದ್ರಕ್ಕೆ ಕರೆತರಲಾಗುತ್ತಿದೆ. ಕರೊನಾ ನಡುವೆಯೂ ಸಾಮಾನ್ಯ ದಿನಗಳಲ್ಲಿ ಪರೀಕ್ಷೆಗೆ ಹಾಜರಾಗುವಂತೆಯೇ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಪಾಲಕರು ಕೂಡ ಸಹಕಾರ ನೀಡಿ ಮಕ್ಕಳನ್ನು ಕಳಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದರು.

    ನೀರು-ಬಿಸ್ಕತ್ ವಿತರಣೆ: ಶಿವಮೊಗ್ಗ ನಗರ ವ್ಯಾಪ್ತಿಯ 18 ಪರೀಕ್ಷಾ ಕೇಂದ್ರಗಳ ಪೈಕಿ 8 ಪರೀಕ್ಷಾ ಕೇಂದ್ರಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಕುಡಿಯುವ ನೀರಿನ ಬಾಟಲಿ ಹಾಗೂ ಬಿಸ್ಕತ್ ಪೊಟ್ಟಣಗಳನ್ನು ನಗರ ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ.ಯೋಗೇಶ್ ಶನಿವಾರ ಶಿವಮೊಗ್ಗ ಬಿಇಒ ಕಚೇರಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರವೀಣ್ ಕುಮಾರ್, ನಗರಾಧ್ಯಕ್ಷ ಎಚ್.ಪಿ.ಗಿರೀಶ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಟಿ.ವಿ.ರಂಜಿತ್ ಇತರರಿದ್ದರು.

    ಮರ ತೆರವಿನ ಬಳಿಕ ಪರೀಕ್ಷಾ ಕೇಂದ್ರಕ್ಕೆ: ಸಾಗರ ತಾಲೂಕು ಕೋಗಾರ್ ಭಾಗದಿಂದ ಶನಿವಾರ ಕಾರ್ಗಲ್ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಕರೆತರುವ ಸಂದರ್ಭದಲ್ಲಿ ಕೋಗಾರ್-ಭಟ್ಕಳ ರಸ್ತೆಯಲ್ಲಿ ಮರವೊಂದು ರಸ್ತೆಗೆ ಉರುಳಿ ಬಿದ್ದಿತ್ತು. ಮಕ್ಕಳನ್ನು ಕರೆತರುತ್ತಿದ್ದ ಆ ಕೆಎಸ್​ಆರ್​ಟಿಸಿ ಬಸ್ ಚಾಲಕ ಡ್ಯಾನಿ ಫರ್ನಾಂಡಿಸ್ ಸಮಯ ಪ್ರಜ್ಞೆಯಿಂದ ಕೂಡಲೇ ಮರ ತೆರವುಗೊಳಿಸಿ, ವಿದ್ಯಾರ್ಥಿಗಳನ್ನು ಸಕಾಲದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತರುವ ಮೂಲಕ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದರು.

    ಗಣಿತ ಕಬ್ಬಿಣದ ಕಡಲೆ ಎಂದ ಸಚಿವರು: ಕಸ್ತೂರಬಾ ಪ್ರೌಢಶಾಲೆ ಪರೀಕ್ಷಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ನಾನು ಓದುತ್ತಿದ್ದಾಗ ಗಣಿತ ನನಗೆ ಕಬ್ಬಿಣದ ಕಡಲೆಯಾಗಿತ್ತು. ನಿಮಗೂ ಗಣಿತ ಕಷ್ಟನಾ? ಎಂದು ವಿದ್ಯಾರ್ಥಿನಿಯರೊಂದಿಗೆ ಚಟಾಕಿ ಹಾರಿಸಿದರು. ವಿದ್ಯಾರ್ಥಿನಿಯರಿಂದ ಗಣಿತ ಕಷ್ಟವಲ್ಲ ಎಂಬ ಉತ್ತರ ಬಂದ ಬಳಿಕ ನಗುತ್ತ ಪರೀಕ್ಷಾ ಕೇಂದ್ರದಿಂದ ಹೊರಬಂದ ಈಶ್ವರಪ್ಪ, ಪರ್ವಾಗಿಲ್ಲ ವಿದ್ಯಾರ್ಥಿನಿಯರು ಆತ್ಮವಿಶ್ವಾಸದಿಂದ ಇದ್ದಾರೆ ಎಂದು ಅಧಿಕಾರಿಗಳ ಬಳಿ ಸಂತಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts