More

    ಗಣಿಗಾರಿಕೆಗೆ ಅವಕಾಶ ನೀಡಲ್ಲ

    ಗದಗ: ಜಿಲ್ಲೆಯ ಜನರ ಜೀವನಾಡಿ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಅಂತಹ ಚಿಂತನೆ ನಡೆಸಿದ್ದರೆ ಕೂಡಲೇ ಕೈಬಿಡಬೇಕು. ನೈಸರ್ಗಿಕ ಸಂಪತ್ತು ನಾಶ ಮಾಡುವಂತಹ ಕೃತ್ಯಕ್ಕೆ ಮುಂದಾದರೆ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಬೇಕಾಗುತ್ತದೆ ಎಂದರು.

    ಅಪರೂಪದ ಸಸ್ಯರಾಶಿ, ಖನಿಜ ಸಂಪತ್ತಿನಿಂದ ಕೂಡಿರುವ ಕಪ್ಪತಗುಡ್ಡ ಈ ಭಾಗದ ಜನರ ಜೀವನಾಡಿಯಾಗಿದೆ. ಗುಡ್ಡದಿಂದಲೇ ಈ ಭಾಗದಲ್ಲಿ ಅಲ್ಪಸ್ವಲ್ಪ ಮಳೆ- ಬೆಳೆ ಕಾಣುತ್ತಿದ್ದೇವೆ. ಅದು ಇಲ್ಲವಾದರೆ ಈ ಭಾಗದ ಜನರಿಗೆ ಉಳಿಗಾಲವಿಲ್ಲ. ಜಿಲ್ಲೆ ಬರಡು ನೆಲೆಯಾಗಲಿದೆ. ಇದಕ್ಕೆ ಬಳ್ಳಾರಿ ಜಿಲ್ಲೆಯೇ ಉತ್ತಮ ಉದಾಹರಣೆ ಎಂದು ಹೇಳಿದರು.

    ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಪೋಸ್ಕೋ ಕಂಪನಿ ಆರಂಭಿಸಲು ಮುಂದಾಗಿದ್ದರು. ಲಿಂ.ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಬೃಹತ್ ಹೋರಾಟದಿಂದ ಪೋಸ್ಕೋ ಕಂಪನಿ ಆರಂಭಿಸುವ ಪ್ರಯತ್ನ ವಿಫಲವಾಯಿತು. ಇದೀಗ ಮತ್ತೆ ಯಡಿಯೂರಪ್ಪ ಅವರ ಅವಧಿಯಲ್ಲೇ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಆರಂಭಿಸುವ ಕುರಿತು ಮಾಹಿತಿ ಲಭ್ಯವಾಗುತ್ತಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಅದನ್ನು ತುಂಬಿಕೊಳ್ಳಲು ಸರ್ಕಾರ ಕಪ್ಪತಗುಡ್ಡಕ್ಕೆ ಕೈಹಾಕುತ್ತಿದೆ ಎಂಬ ವದಂತಿಗಳಿದ್ದು, ಇಂತಹ ಸಾಹಸಕ್ಕೆ ಸರ್ಕಾರ ಕೈಹಾಕಬಾರದು ಎಂದು ಅವರು ಹೇಳಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೊಷಿಸಲಾಯಿತು. ನಂತರ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ವನ್ಯಜೀವಿ ಧಾಮದ ಸ್ಥಾನಮಾನ ದೊರೆತಿದ್ದರಿಂದ ಜಿಲ್ಲೆಯ ಜನರು ಸಂತಸಪಟ್ಟರು. ಜನರ ನೆಮ್ಮದಿಯನ್ನು ಹಾಲಿ ಸರ್ಕಾರ ಕೆಡಿಸಬಾರದು. ಪ್ರಕೃತಿ ಮೇಲೆ ಅತ್ಯಾಚಾರ ನಡೆಸಬಾರದು ಎಂದು ಅವರು ಹೇಳಿದರು.

    ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಪರವಾನಗಿ ಕೊಡಿಸಲು ಕೆಲ ಚುನಾಯಿತ ಪ್ರತಿನಿಧಿಗಳು, ಉದ್ಯಮಿಗಳು ಸರ್ಕಾರದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ತಿಳಿದುಬಂದಿದೆ. ಜನಪ್ರತಿನಿಧಿಗಳು ಪ್ರಕೃತಿಯನ್ನು ಉಳಿಸಿ, ಸಂರಕ್ಷಿಸುವ ಕೆಲಸ ಮಾಡಬೇಕು ಎಂದರು.

    ಕಪ್ಪತಗುಡ್ಡದ ಸಂರಕ್ಷಣೆಗಾಗಿ ಜಿಲ್ಲೆಯ ಜನರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಕಪ್ಪತಗುಡ್ಡದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಸಲು ಬಿಡುವುದಿಲ್ಲ. ಇತ್ತೀಚೆಗೆ ಕಪ್ಪತಗುಡ್ಡ ವನ್ಯಜೀವಿ ಧಾಮ ಎಂದು ಘೊಷಣೆ ಮಾಡಿದರೂ ಗಣಿಗಾರಿಕೆಯ ಗುಮ್ಮ ಜನರನ್ನು ಕಾಡುತ್ತಿದೆ. ಗಣಿಗಾರಿಕೆ ಮಾಡುವವರು ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ನಡೆಸಿದ್ದಾರೆ.
    |ಎಸ್.ಆರ್. ಹಿರೇಮಠ ಸಾಮಾಜಿಕ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts