More

    ಗಣನೀಯವಾಗಿ ಹೆಚ್ಚುತ್ತಿದೆ ಸೈಬರ್ ಕಳ್ಳಾಟ

    ಹುಬ್ಬಳ್ಳಿ: ಲಾಕ್​ಡೌನ್ ಮತ್ತಿತರ ಕಾರಣಗಳಿಂದ ಡಿಜಿಟಲ್ ವ್ಯವಹಾರಗಳತ್ತ ಹೆಚ್ಚು ಹೆಚ್ಚು ಜನರು ಒಲವು ತೋರುತ್ತಿರುವುದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು ಅಮಾಯಕ ಜನರಿಗೆ ವಂಚಿಸಿ ಲಕ್ಷಾಂತರ ರೂ. ದೋಚುತ್ತಿರುವ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿವೆ. ಹು-ಧಾ ಅವಳಿ ನಗರದಲ್ಲಿ ಎಂಟೂವರೆ ತಿಂಗಳಲ್ಲಿ ಸೈಬರ್ ಕ್ರೖೆಂ ಪ್ರಕರಣಗಳು ನೂರರ ದಡಿ ದಾಟಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ.

    ಕರೊನಾ ವೈರಸ್ ಹರಡುವ ಭೀತಿಯಿಂದ ದೇಶದೆಲ್ಲೆಡೆ ಲಾಕ್​ಡೌನ್ ಘೊಷಿಸಿದ್ದ ಸಂದರ್ಭ ಬಹುತೇಕ ಜನ ಆನ್​ಲೈನ್ ವ್ಯವಹಾರಕ್ಕೆ ಮಾರು ಹೋಗಿದ್ದರು. ಮನೆಯಲ್ಲೇ ಕುಳಿತು ಗೂಗಲ್ ಪ್ಲೇ, ಫೋನ್ ಪೇ, ಮತ್ತಿತರ ಆಪ್​ಗಳನ್ನು ಡೌನ್​ಲೋಡ್ ಮಾಡಿ ಬಳಸಲಾರಂಭಿಸಿದರು. ಇದು ಸೈಬರ್ ಕಳ್ಳರಿಗೆ ವರದಾನವಾಗಿ ಪರಿಣಮಿಸಿತು. ಆನ್​ಲೈನ್ ವಂಚನೆಗೆ ಸರಳ ಮಾರ್ಗವಾಗಿ ಪರಿಣಮಿಸಿತು.

    ಐಟಿ ಸಿಟಿ ಬೆಂಗಳೂರು ನಂತರದ ಹು-ಧಾ ಅವಳಿ ನಗರದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆ ಮೂಲಕ ಸೆಪ್ಟಂಬರ್ ಎರಡನೇ ವಾರದಲ್ಲೇ ಶತಕ ದಾಟಿದೆ. 2018ರಲ್ಲಿ ಸೈಬರ್ ಕ್ರೖೆಂ ಪೊಲೀಸ್ ಠಾಣೆ ಆರಂಭವಾಗಿದ್ದು, ಮೊದಲ ವರ್ಷ 17 ಪ್ರಕರಣಗಳು ದಾಖಲಾಗಿದ್ದವು. 2019ರಲ್ಲಿ 102 ಪ್ರಕರಣ ದಾಖಲಾಗಿದ್ದವು. ಇದೀಗ 2020ರಲ್ಲಿ ಎಂಟೂವರೆ ತಿಂಗಳಲ್ಲೇ 100 ಪ್ರಕರಣ ದಾಖಲಾಗಿವೆ. ಈವರೆಗೆ 12 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳು ತನಿಖಾ ಹಂತದಲ್ಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಹಲವು ರೀತಿಯಲ್ಲಿ ವಂಚನೆ: ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ನಿಮ್ಮ ನಿಮ್ಮ ಎಟಿಎಂ ಕಾರ್ಡ್ ನಿಷ್ಕ್ರಿಯವಾಗಿದೆ. ಅದನ್ನು ಸರಿಪಡಿಸುತ್ತೇವೆ ಎಂಬಿತ್ಯಾದಿ ಸುಳ್ಳು ಹೇಳಿ ಅಕೌಂಟ್ ಸಂಖ್ಯೆ, ಒಟಿಪಿ ಇತ್ಯಾದಿ ಮಾಹಿತಿ ಪಡೆದು ಲಕ್ಷ ಲಕ್ಷ ವಂಚಿಸುತ್ತಿದ್ದಾರೆ. ನೌಕರಿ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದಾರೆ. ಲಾಕ್​ಡೌನ್ ಸಲುವಾಗಿ ಪ್ರಧಾನಿ ಅಕೌಂಟ್​ನಿಂದ ನಿಮ್ಮ ಅಕೌಂಟ್​ಗೆ 5 ಸಾವಿರ ರೂ. ಹಾಕುತ್ತೇವೆ ಎಂದು ವಂಚಿಸುತ್ತಿದ್ದಾರೆ. ಒಎಲ್​ಎಕ್ಸ್​ನಲ್ಲಿ ಸೈನಿಕರ ಹೆಸರಲ್ಲಿ ವಂಚಿಸುತ್ತಿದ್ದಾರೆ. ಹೀಗೆ ಹತ್ತಾರು ಅನ್ಯ ಮಾರ್ಗಗಳ ಮೂಲಕ ಸೈಬರ್ ಕಳ್ಳರು ಜನರಿಗೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ.

    ಫೇಸ್​ಬುಕ್, ಟ್ವಿಟರ್​ನಲ್ಲಿ ಗಣ್ಯ ವ್ಯಕ್ತಿಗಳ ಫೇಕ್ ಅಕೌಂಟ್ ಸೃಷ್ಟಿಸಿ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆನ್​ಲೈನ್ ವ್ಯವಹಾರ ಹೆಚ್ಚಾದ ಕಾರಣ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು.
    | ಪಿ. ಕೃಷ್ಣಕಾಂತ ಡಿಸಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts