More

    ಗಜೇಂದ್ರಗಡ ತಾಲೂಕಿನಲ್ಲಿ ರೋಗದಿಂದ ನರಳುತ್ತಿವೆ ಕುರಿಗಳು

    ಗಜೇಂದ್ರಗಡ: ತಾಲೂಕಿನಲ್ಲಿ ಕುರಿಗಳು ಕಾಲುಬಾಯಿ, ಗಂಟಲು ಬೇನೆಯಿಂದ ನರಳುತ್ತಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಕೆಲವೆಡೆ ಕುರಿಗಳು ಸಾವಿಗೀಡಾಗುತ್ತಿವೆ. ಹೀಗಾಗಿ ಕುರಿಗಾರರ ಸಮುದಾಯ ಕಂಗೆಟ್ಟಿದೆ. ಪರಿಣಾಮ ಕುರಿ ಉದ್ಯಮ ಸಂಕಷ್ಟಕ್ಕೆ ಸಿಲುಕುವ ಭೀತಿ ಉಂಟಾಗಿದೆ.

    ಜಿಲ್ಲೆಯಲ್ಲಿ ಹೆಚ್ಚು ಕುರಿಗಳನ್ನು ಹೊಂದಿರುವ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಜೇಂದ್ರಗಡ ತಾಲೂಕಿನಲ್ಲಿ ಶೇ. 30ಕ್ಕೂ ಅಧಿಕ ಕುಟುಂಬಗಳು ಇದೇ ವೃತ್ತಿಯನ್ನು ಅವಲಂಬಿಸಿವೆ. ಕುರಿಗಳಿಗೆ ಗಂಟಲು ಬೇನೆ, ನೆಗಡಿ, ಜ್ವರ, ಕಾಲು ಹುಣ್ಣು ಸೇರಿದಂತೆ ಹಲವಾರು ಬಗೆಯ ರೋಗಗಳು ಕಾಣಿಸುತ್ತಿವೆ. ಚಿಕಿತ್ಸೆ ನೀಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಹೀಗಾಗಿ ಕುರಿಗಾಹಿಗಳು ತೊಂದರೆ ಅನುಭವಿಸುವಂತಾಗಿದೆ.

    ಪ್ರಕೃತಿ ವಿಕೋಪ ಅಥವಾ ನೈಸರ್ಗಿಕ ಕಾಯಿಲೆಗಳಿಂದ ಮರಣ ಹೊಂದಿದರೆ ಕುರಿಯೊಂದಕ್ಕೆ ಸರ್ಕಾರ 1650 ರೂ.ಗಳ ಪರಿಹಾರ ನೀಡುತ್ತದೆ. ಆದರೆ, ಒಂದು ಕುರಿಯ ಬೆಲೆ ಕನಿಷ್ಠ 5-6 ಸಾವಿರ ರೂ. ಆಗಿದೆ. ಪರಿಹಾರ ನೀಡುವಲ್ಲಿಯೂ ಸರ್ಕಾರ ತಾರತಮ್ಯ ಮಾಡುತ್ತಿದೆ ಎನ್ನುವುದು ಕುರಿಗಾರರ ಆರೋಪವಾಗಿದೆ. ತಾಲೂಕಿನ ಬಹುತೇಕ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಸಮಯಕ್ಕೆ ಸರಿಯಾಗಿ ಔಷಧಗಳ ಪೂರೈಕೆಯಾಗುತ್ತಿಲ್ಲ. ಕುರಿಗಳು ಇರುವ ಸ್ಥಳಗಳಿಗೆ ವೈದ್ಯರು ಬರುವುದಿಲ್ಲ. ಹೀಗಾಗಿ ಕುರಿಗಳು ಸಾವಿಗೀಡಾಗುತ್ತಿವೆ ಎಂದು ಕುರಿಗಾರರು ಅಳಲು ತೋಡಿಕೊಳ್ಳುತ್ತಾರೆ.

    ಕುರಿಗಳಲ್ಲಿ ಬ್ಲೂ ಟಂಗ್ ರೋಗ ಕಾಣಿಸುತ್ತಿದೆ. ಮಳೆ ಹಾಗೂ ಕೆಸರಿನಲ್ಲಿ ನಡೆದಾಡುವುದರಿಂದ ಈ ರೋಗ ಬರುತ್ತದೆ. ಕುರಿ, ಮೇಕೆ ವಾಸಿಸುವ ಸ್ಥಳದಲ್ಲಿ ಸಂಜೆ ಹೊಗೆ ಹಾಕಬೇಕು. ಸೂಕ್ತ ಚಿಕಿತ್ಸೆ ಕೊಡಿಸಲು ಪಶು ವೈದ್ಯರನ್ನು ಸಂರ್ಪಸಬೇಕು.

    | ಡಾ. ಜಯಶ್ರೀ ಪಾಟೀಲ ಪಶು ವೈದ್ಯಾಧಿಕಾರಿ ಗಜೇಂದ್ರಗಡ

    ಕುರಿ, ಆಡುಗಳಿಗೆ ಕಾಲುಬಾಯಿ ಬೇನೆ ಬಂದು ನರಳುತ್ತಿವೆ. ವೈದ್ಯರು ಸಮರ್ಪಕ ಔಷಧ ಕೊಡುತ್ತಿಲ್ಲ. ಕೇಳಿದರೆ ಪಶು ಚಿಕಿತ್ಸೆ ಕೇಂದ್ರಗಳಿಗೆ ಕುರಿ, ಮೇಕೆ ತರುವಂತೆ ಹೇಳುತ್ತಾರೆ. ಇಷ್ಟೊಂದು ಹಿಂಡು ತೆಗೆದುಕೊಂಡು ಹೋಗಲು ಕಷ್ಟವಾಗುತ್ತದೆ.

    | ದೇವಪ್ಪ ಮಾಳೊತ್ತರ ಕುರಿಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts