More

    ಗಂಡ-ಹೆಂಡಿರ ಜಗಳದಲ್ಲೂ ಇರಲಿ ಪ್ರೀತಿ

    ಚಿತ್ರದುರ್ಗ: ಸಂಸಾರವೆಂಬ ಸಾಗರದಲ್ಲಿ ಪ್ರೀತಿ ಬತ್ತಿ ಹೋಗಬಾರದು. ಸತಿಪತಿಗಳ ದೃಷ್ಟಿ ಒಂದೇ ಆಗಿರಬೇಕು ಎಂದು ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
    ನಗರದ ಮುರುಘ ರಾಜೇಂದ್ರ ಬೃಹನ್ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 34ನೇ ವರ್ಷದ 4ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದರು.
    ಎರಡು ಕಿವಿಗಳಿಗೆ ಕೇಳಿಸುವ ಶಬ್ಧ ಒಂದೇ ಎಂಬಂತೆ ಸತಿಪತಿಗಳ ಮನಸ್ಥಿತಿ ಕೂಡ ಒಂದೇ ಇರಬೇಕಾಗುತ್ತದೆ. ಸಂಸಾರದ ಜಗಳ ಪ್ರೀತಿಯದ್ದಾಗಿರಬೇಕು. ಅಲ್ಲಿ ದ್ವೇಷಾಸೂಯೆ ಇರಬಾರದು, ಸಾಮರಸ್ಯ ಇರಬೇಕು. ಗಂಡನಿಗೆ ಚಟ ಹಾಗೂ ಹೆಂಡತಿಗೆ ಹಠ ಇರಬಾರದು. ದುಶ್ಚಟಗಳಿಗೆ ದಾಸರಾಗಬಾರದು. ಏನೇ ಕಷ್ಟಗಳು ಬಂದರೂ ಅವುಗಳನ್ನು ಎದುರಿಸಿ ಜೀವನ ಸಾಗಿಸಬೇಕು ಎಂದರು.
    ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮದುವೆ ಆದವರು ಆದರ್ಶರಾಗುವುದಿಲ್ಲ. ಸರಳವಾಗಿ ವಿವಾಹವಾಗುವವರು ಆದರ್ಶ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.
    ಶ್ರೀಮಠವು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾವೈಕ್ಯ ಕಾಣಲು ಸಾಧ್ಯ. ಎಲ್ಲರೂ ತಪ್ಪದೆ ಮತದಾನ ಮಾಡಿರಿ ಎಂದು ಶ್ರೀಗಳು ಮನವಿ ಮಾಡಿದರು.
    ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ ನಡೆಯುವ ಕಲ್ಯಾಣ ಮಹೋತ್ಸವ ಐತಿಹಾಸಿಕವಾದದ್ದು. ಇಲ್ಲಿ ಸಾವಿರಾರು ಮದುವೆಗಳು ನಡೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
    ಮುಖ್ಯಅತಿಥಿ ನಿವೃತ್ತ ತಹಸೀಲ್ದಾರ್ ಗಿರಿಯಪ್ಪ ಮಾತನಾಡಿ, ಸಾಮೂಹಿಕ ಕಲ್ಯಾಣ ಮಹೋತ್ಸವದಿಂದ ಸಾಮಾಜಿಕ ಸಾಮರಸ್ಯ ಬೆಳೆಯುತ್ತದೆ. ನಾವು ಒಂದೇ ಎಂಬ ಭಾವನೆ ಬೇರೂರಿರುತ್ತದೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ 21 ಜೋಡಿಗಳ ವಿವಾಹ ನೆರವೇರಿತು. ಜಮುರಾ ಕಲಾವಿದರು ವಚನ ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts