More

    ಬರಗೇರಮ್ಮ ದೇವಿಯ ಕುಂಭಾಭಿಷೇಕ ಸಂಪನ್ನ

    ಚಿತ್ರದುರ್ಗ: ಕೋಟೆನಗರಿಯ ಶಕ್ತಿದೇವತೆ ಬರಗೇರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಐತಿಹಾಸಿಕ ಚಂದ್ರವಳ್ಳಿ ಕೆರೆಯಲ್ಲಿ ಗಂಗಾ ಪೂಜೆ, ಕುಂಭಾಭಿಷೇಕ ಮಹೋತ್ಸವವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಅದ್ದೂರಿಯಾಗಿ ನೆರವೇರಿತು.

    ಪೂಜಾ ಕೈಂಕರ್ಯ ಜರುಗಿದ ಬಳಿಕ ನೆರೆದಿದ್ದ ಭಕ್ತರಿಗೆ ತೀರ್ಥ ಪ್ರೋಕ್ಷಿಸಲಾಯಿತು. ನಂತರ ದೇಗುಲದವರೆಗೂ 1 ಕಿ.ಮೀ. ಮಾರ್ಗದುದ್ದಕ್ಕೂ ಮಡಿ ಹಾಸಿನೊಂದಿಗೆ ಉತ್ಸವ ಮೂರ್ತಿಗಳನ್ನು ಕರೆತರಲಾಯಿತು.

    ದೇವಿಯ ತವರು ಕರಿಯಟ್ಟಿಯಲ್ಲಿ ಭಕ್ತರು ಮಡಿಲಕ್ಕಿ, ಮೀಸಲು ಸಮರ್ಪಿಸಿದರು. ಉತ್ಸವ ಮೂರ್ತಿಯನ್ನು ವಿವಿಧ ಬಗೆಯ ಪುಷ್ಪಗಳಿಂದ ಕಣ್ಮನ ಸೆಳೆಯುವಂತೆ ಅಲಂಕರಿಸಿದ ನಂತರ ಚಂದ್ರವಳ್ಳಿಗೆ ಕರೆತರಲಾಯಿತು.

    ಜಾತ್ರೆಯ ಸಂಪ್ರದಾಯದಂತೆ ಜಲ್ದಿ ಪೂಜೆ ನಡೆದ ವೇಳೆ ಭಕ್ತರ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಉಧೋ ಉಧೋ ಎಂದು ಜಯಘೋಷ ಮೊಳಗಿಸಿದರು. ಉರುಮೆ, ತಮಟೆ, ಕಹಳೆ ಸೇರಿ ಮಂಗಳವಾದ್ಯಗಳು ಮೆರುಗು ನೀಡಿದವು.

    ನಂತರ ದೇಗುಲ ಮುಂಭಾಗ ಭಕ್ತರಿಗಾಗಿ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಪ್ರಸಾದ ಸ್ವೀಕರಿಸಿದರು. ನಗರ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಪ್ರತಿ ವರ್ಷ ಪೂಜೆ ಸ್ವೀಕರಿಸುವ ದೇವಿಗೆ ಭಕ್ತರ ಮನೆಗಳೆ ತವರು ಮನೆ ಎಂಬ ನಂಬಿಕೆ ಇದ್ದು, ಆ ಸಂಪ್ರದಾಯ ಈಗಲೂ ಪ್ರಚಲಿತದಲ್ಲಿದೆ. ಅದರಂತೆ ರಾತ್ರಿ ಈರಜ್ಜನಹಟ್ಟಿ ಹಾಗೂ ನಾಯಕರ ಸೊಲ್ಲಾಪುರದಲ್ಲಿ ಭಕ್ತರಿಂದ ಪೂಜೆ ಸ್ವೀಕರಿಸಿ ದೇಗುಲಕ್ಕೆ ಕರೆತರಲಾಯಿತು.

    ರಾಜಬೀದಿಗಳಲ್ಲಿ ಮೆರವಣಿಗೆ ಇಂದು: ಅಧಿದೇವತೆ ಏಕನಾಥೇಶ್ವರಿ, ಬರಗೇರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಅಲಂಕೃತ ಉತ್ಸವ ಮೂರ್ತಿಗಳ ಭವ್ಯ ರಥೋತ್ಸವ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೇ 3ರಂದು ಜರುಗಲಿದೆ. ಬೆಳಗ್ಗೆ 10ಕ್ಕೆ ಆರಂಭವಾಗಿ, ರಾತ್ರಿ 8ಕ್ಕೆ ಮುಕ್ತಾಯವಾಗಲಿದೆ.

    ತಿಪ್ಪಿನಘಟ್ಟಮ್ಮ ದೇವಿಗೆ ಜಲ್ದಿ ಪೂಜೆ: ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಯ ಜಾತ್ರೆ ಅಂಗವಾಗಿ ಮಜ್ಜನ ಬಾವಿಯಲ್ಲಿ ಬುಧವಾರ ಜಲ್ದಿ ಪೂಜೆ ಮತ್ತು ಬಿಲ್ವಾರ್ಚನೆ ಸೇವೆ ನೆರವೇರಿತು. ನಂತರ ದೇಗುಲಕ್ಕೆ ಕರೆತರಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts