More

    ಗಂಗೂಬಾಯಿ ಹಾನಗಲ್ ಸಂಗೀತ ಕ್ಷೇತ್ರದ ಹಿಮಾಲಯ : ಹಂಸಲೇಖ ಬಣ್ಣನೆ

    ಮೈಸೂರು: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಲೋಕದ ದಿಗ್ಗಜೆ ಗಂಗೂಬಾಯಿ ಹಾನಗಲ್ ಅವರು ಸಂಗೀತ ಕ್ಷೇತ್ರದ ಹಿಮಾಲಯ ಎಂದು ಸಂಗೀತ ನಿರ್ದೇಶಕ ಹಂಸಲೇಖ ಬಣ್ಣಿಸಿದರು.

    ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯ, ರಾಜ್ಯ ಸಂವಹನ ಮತ್ತು ಪತ್ರಿಕೋದ್ಯಮ ಶಿಕ್ಷಣ ಸಂಘದ ವತಿಯಿಂದ ವಿವಿಯ ಆವರಣದಲ್ಲಿ ಮಂಗಳವಾರ ‘ಪ್ರದರ್ಶಕ ಕಲೆ ಮತ್ತು ಮಾಧ್ಯಮ : ಸಾಂಸ್ಕೃತಿಕ ದೃಷ್ಟಿಕೋನಗಳು’ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಗಂಗೂಬಾಯಿ ಹಾನಗಲ್ ಮುಖ್ಯವಾಗಿ ದೇಸಿ ಪರಂಪರೆಯಲ್ಲಿ ಬೆಳೆದ ಪ್ರತಿಭೆ. ಆ ಹಿಮಾಲಯವನ್ನು ಏಕಾಏಕಿ ಒಟ್ಟಿಗೆ ಧಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ಹಿಮಾಲಯದ ಮಂಜು ಕರಗಿ ನೀರಾಗಿ, ಗಂಗೆಯಾಗಿ, ಗಂಗೂಬಾಯಿಯಾಗಿ ಮೈಸೂರಿನಲ್ಲಿ ಸಂಗೀತದ ರೂಪದಲ್ಲಿ ಹರಿಯುತ್ತಿದೆ ಎಂದು ಬಣ್ಣಿಸಿದರು.

    ಸಂಗೀತ ವಿಶ್ವವಿದ್ಯಾಲಯದಲ್ಲಿ ಸಂಗೀತದೊಂದಿಗೆ ಪ್ರದರ್ಶ ಕಲೆಗಳನ್ನು ಸಂಯೋಜಿಸಿರುವುದು ಅದ್ಭುತವಾದ ಪ್ರಯೋಗ. ಸಂಗೀತದೊಂದಿಗೆ ಪ್ರದರ್ಶ ಕ ಕಲೆಗಳ ಸಂಯೋಜನೆಯೇ ಸುಂದರ ಕಲ್ಪನೆ, ಇಂದು ಜನತಾಂತ್ರಿಕ ಪರಿಕಲ್ಪನೆಯೂ ಹೌದು. ಇಂತಹ ಸುಂದರ ಪರಿಕಲ್ಪನೆ ನೀಡಿದ ತಜ್ಞರಿಗೆ ನಾವೆಲ್ಲ ಧನ್ಯವಾದ ಹೇಳಬೇಕು ಎಂದರು.

    ಸಂಗೀತವೇ ಒಂದು ಮಾಧ್ಯಮ. ಪ್ರದರ್ಶಕ ಕಲೆಗಳು ಮತ್ತೊಂದು ಮಾಧ್ಯಮ. ಈ ಎರಡು ಮಾಧ್ಯಮಗಳು ಇಂದು ಮಾಧ್ಯಮಗಳ ಮುಂದೆ ಹೋಗುತ್ತಿವೆ. ಮಾಧ್ಯಮಗಳು ಪ್ರಸ್ತುತ ಎಲ್ಲ ಕಲೆಗಳನ್ನು ಕಬಳಿಸಿಕೊಂಡಿವೆ. ಸಂಗೀತ, ಸಂಸ್ಕೃತಿ, ಸಮಾಜದ ನೆಮ್ಮದಿ ಹಾಗೂ ಸಮತೆಯನ್ನು ಕಲೆಗಳ ಮೂಲಕ ಧೈರ್ಯವಾಗಿ ಪ್ರದರ್ಶಿಸುವ ಚೈತನ್ಯ ವಿಶ್ವ ವಿದ್ಯಾಲಯಕ್ಕೆ ದೊರೆಯಲಿ ಎಂದು ಹಾರೈಸಿದರು.

    ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ ಮಾತನಾಡಿ, ಮಾಧ್ಯಮಗಳು ಮಾಹಿತಿ ನೀಡುವ ಜತೆಗೆ ಮನರಂಜನೆಯನ್ನು ಸಹ ನೀಡುತ್ತಿವೆ. ದೇಶದ ಮಾಧ್ಯಮಗಳು ವಿಶ್ವದ ಎಲ್ಲ ಮಾಧ್ಯಮಗಳಿಗಿಂತ ಮುಂಚುಣಿಯಲ್ಲಿರುವುದಕ್ಕೆ ಪ್ರದರ್ಶಕ ಕಲೆಗಳು ಕಾರಣ. ಮಾಧ್ಯಮಗಳು ಜನರಿಗೆ ಮನರಂಜನೆ ನೀಡಲು ಪ್ರದರ್ಶಕ ಕಲೆಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಹೇಳಿದರು.

    ಪ್ರದರ್ಶಕ ಕಲೆಗಳು ಈ ಹಿಂದೆ ಕೆಲವೇ ಕೆಲವು ಜನರ ಸ್ವತ್ತಾಗಿತ್ತು. ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಸಮುದಾಯ ಈ ಹಿಂದೆ ಮಾಧ್ಯಮ ಪ್ರವೇಶಿಸುವುದು ಕಷ್ಟವಾಗಿತ್ತು. ಆದರೆ, ಪ್ರಸ್ತುತ ಎಲ್ಲರಿಗೂ ತಮ್ಮ ಪ್ರತಿಭೆ ತೋರ್ಪಡಿಸಲು ಅವಕಾಶ ದೊರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಪ್ರದರ್ಶಕ ಕಲೆಗಳು, ಸಂಗೀತ ಮತ್ತು ಜಾನಪದ ಕಲೆಗಳ ಮೂಲ ಪ್ರಾಕಾರವನ್ನು ಮಾಧ್ಯಮಗಳಲ್ಲಿ ಎಷ್ಟರ ಮಟ್ಟಿಗೆ ಉಳಿಸಿಕೊಂಡು ಹೋಗುತ್ತಿದೆ ಎಂಬುದು ಬಹಳ. ಈ ಮೂಲಕ ಪ್ರಾಕಾರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಮಾಧ್ಯಮ ಸೇರಿದಂತೆ ಪ್ರತಿಯೊಬ್ಬರ ಮೇಲಿದೆ. ಕಲೆಗಳ ಮೂಲ ಸ್ವರೂಪಕ್ಕೆ ಧಕ್ಕೆ ತಂದರೆ ಮುಂದಿನ ದಿನಗಳಲ್ಲಿ ಅಪಾಯ ನಿಶ್ಚಿತ. ಹಾಗಾಗಿ ಮಾಧ್ಯಮಗಳು ಕಲೆಗಳ ಮೂಲ ಸ್ವರೂಪ ಉಳಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

    ಅಮೆರಿಕದ ಬ್ರಾಂಡೀಸ್ ವಿಶ್ವ ವಿದ್ಯಾಲಯದ ಪ್ರೊ. ಗೌರಿ ವಿಜಯಕುಮಾರ್ ಮಾತನಾಡಿ, ನಾನು ದೇಶದೊಂದಿಗೆ ಸಂಪರ್ಕ ಇರಿಸಿಕೊಳ್ಳಲು ಭರತನಾಟ್ಯ ಕಾರಣ. ಪ್ರತಿ ವರ್ಷ ನಾನು ದೇಶಕ್ಕೆ ಆಗಮಿಸಿ ಭರತ ನಾಟ್ಯ ಕಲಿಯುತ್ತಿದ್ದೆ. ಕಲೆ, ಸಂಗೀತವು ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ಹೇಳಿದರು.

    ಸಂಗೀತ ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ಪ್ರದರ್ಶಕ ಕಲೆಗಳಲ್ಲಿ ಸಾಮಾಜಿಕ ನ್ಯಾಯ ತುಂಬಾ ಮುಖ್ಯ. ಅದನ್ನು ಅರಿತುಕೊಂಡು ನಾವು ಮುಂದೆ ಹೋಗಬೇಕು. ಸ್ವಾತಂತ್ರೃ ಲಭಿಸಿ ಏಳು ದಶಕಗಳು ಕಳೆದರೂ ಇನ್ನೂ ಸಾಮಾಜಿಕ ನ್ಯಾಯ ಎಲ್ಲರಿಗೂ ದೊರೆತ್ತಿಲ್ಲ ಎಂಬುದು ಬೇಸರದ ಸಂಗತಿ ಎಂದರು.

    ವೇದಿಕೆಯಲ್ಲಿ ಸಂಗೀತ ವಿಶ್ವ ವಿದ್ಯಾಲಯ ಕುಲಸಚಿವೆ ಕೆ.ಎಸ್. ರೇಖಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts