More

    ಖಾಸಗಿ ವೈದ್ಯರಿಗೆ ನೋಟಿಸ್

    ಹಾವೇರಿ: ಸರ್ಕಾರಿ ಆಸ್ಪತ್ರೆಗೆ ಬಂದು ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದಾಗಿ ಘೊಷಿಸಿದ್ದ ಖಾಸಗಿ ವೈದ್ಯರು ಇದೀಗ ಮಾತು ತಪ್ಪಿದ್ದು, ಅಂತಹ ವೈದ್ಯರಿಗೆ ಆರೋಗ್ಯ ಇಲಾಖೆ ಇದೀಗ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

    ತಮ್ಮ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಿಕೊಳ್ಳುವ ಬದಲು ಸರ್ಕಾರಿ ಆಸ್ಪತ್ರೆಗಳಿಗೆ ಬಂದು ಕರೊನಾ ಸೋಂಕಿತರಿಗೆ ಸರದಿ ಮೇಲೆ ಬಂದು ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಜಿಲ್ಲೆಯ ಖಾಸಗಿ ವೈದ್ಯರು ಘೊಷಿಸಿದ್ದರು. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವರಿಂದ ಶಹಬ್ಬಾಸ್​ಗಿರಿಯನ್ನು ಪಡೆದಿದ್ದರು. ಇದೀಗ ಖಾಸಗಿ ವೈದ್ಯರು ತಮ್ಮ ಮಾತಿನಂತೆ ನಡೆದುಕೊಳ್ಳದೆ ಉಲ್ಟಾ ಹೊಡೆದಿದ್ದಾರೆ.

    ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಪ್ರತಿದಿನ ನೂರಕ್ಕೂ ಅಧಿಕ ಕರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲು ವೈದ್ಯರ ಕೊರತೆ ಎದುರಾಗಿದೆ. ಹೀಗಾಗಿ ಕೊಟ್ಟ ಭರವಸೆಯಂತೆ ಸೇವೆಗೆ ಹಾಜರಾಗದ ಖಾಸಗಿ ವೈದ್ಯರಿಗೆ ನೋಟಿಸ್ ಜಾರಿ ಮಾಡಲಾಗಿದೆ.

    ಕೋವಿಡ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸರ್ಕಾರಿ ವೈದ್ಯರಲ್ಲಿ ಅನೇಕರಿಗೆ ಪಾಸಿಟಿವ್ ಬಂದು ಅವರ ಸೇವೆಯೂ ಅಲಭ್ಯವಾಗಿದೆ. ಸದ್ಯ ಜಿಲ್ಲೆಯಲ್ಲಿ 4 ಸಾವಿರದ ಸನಿಹಕ್ಕೆ ಕರೊನಾ ಕೇಸ್​ಗಳು ಬಂದಿವೆ. ಇದರಲ್ಲಿ 1297 ಸಕ್ರಿಯ ಕೇಸ್​ಗಳಿವೆ. ಇವರಿಗೆ ಸಮರ್ಪಕ ಸೇವೆ ಒದಗಿಸಲು ಖಾಸಗಿ ವೈದ್ಯರ ಸೇವೆ ಈ ಸಮಯದಲ್ಲಿ ಅಗತ್ಯವಾಗಿದೆ. ಸೇವೆಗೆ ಬರದೇ ಇರುವ ಖಾಸಗಿ ವೈದ್ಯರ ನಡೆ ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ.

    13 ವೈದ್ಯರಿಗೆ ನೋಟಿಸ್: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೇವೆಗೆ ಅರ್ಧದಷ್ಟು ಬೆಡ್ ಮೀಸಲಿಡಬೇಕು ಎಂದು ಸರ್ಕಾರ ಆದೇಶಿಸಿದೆ. ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೇವೆಗೆ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿದಷ್ಟು ಶುಲ್ಕ ಪಡೆಯಬಹುದಾಗಿದೆ. ಈ ಕುರಿತು ತಿಂಗಳ ಹಿಂದೆ ಜಿಲ್ಲಾಡಳಿತ ಖಾಸಗಿ ವೈದ್ಯರಿಗೆ ರೋಗಿಗಳ ಸಂಖ್ಯೆ ಹೆಚ್ಚಾದರೆ ಬೆಡ್ ನೀಡುವಂತೆ ಸೂಚಿಸಲು ಸಭೆ ಕರೆದಿತ್ತು. ಆ ಸಭೆಯಲ್ಲಿ ಜಿಲ್ಲೆಯಲ್ಲಿರುವ ಎಂಬಿಬಿಎಸ್, ಆಯುಷ್ ಸೇರಿ ಕೆಪಿಎಂಎ ಕಾಯ್ದೆಯಡಿ ನೋಂದಾಯಿಸಿಕೊಂಡಿರುವ 570 ವೈದ್ಯರು, ತಮ್ಮ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಬದಲು ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲೇ ತಾವು ಉಚಿತ ಸೇವೆ ನೀಡುವುದಾಗಿ ಭರವಸೆ ನೀಡಿದ್ದರು. ಈ ಭರವಸೆ ನಂಬಿ ಜಿಲ್ಲಾಡಳಿತವೂ ಸರದಿ ಪ್ರಕಾರ ಖಾಸಗಿ ವೈದ್ಯರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡುವಂತೆ ಸೂಚಿಸಿತ್ತು. ಇದಕ್ಕೆ ಒಪ್ಪಿ ಕೆಲ ವೈದ್ಯರು 2 ವಾರಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿನ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೆಲ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.

    ಐಎಂಎ ಸಂಘಟನೆಯಿಂದ ಜಿಲ್ಲಾಡಳಿತಕ್ಕೆ ನೀಡಿದ್ದ ಖಾಸಗಿ ವೈದ್ಯರ ಪಟ್ಟಿಯ ಪ್ರಕಾರ ಉಚಿತ ಸೇವೆಗೆ ಬರದ 13 ಖಾಸಗಿ ವೈದ್ಯರಿಗೆ ಇದೀಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಒಂದು ವೇಳೆ ಕೋವಿಡ್ ಸೇವೆಗೆ ಬರಲು ಒಪ್ಪದಿದ್ದರೆ, ನಿಮ್ಮ ಆಸ್ಪತ್ರೆ ವಶಕ್ಕೆ ಪಡೆಯುವುದಾಗಿಯೂ ಎಚ್ಚರಿಸಿದ್ದಾರೆ.

    ಕರ್ತವ್ಯಕ್ಕೆ ಬಂದವರಿಗೆ ಸೋಂಕು

    ಹಾವೇರಿ ತಾಲೂಕಿನ ಐಎಂಎ ಘಟಕದ ವೈದ್ಯರು ಕಳೆದ ಮೂರು ವಾರಗಳಿಂದ ಜಿಲ್ಲಾಸ್ಪತ್ರೆಗೆ ಸರದಿ ಪ್ರಕಾರ ಹೋಗಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಹೀಗೆ ಹೋದ ಇಬ್ಬರು ವೈದ್ಯರಿಗೆ ಕರೊನಾ ಸೋಂಕು ತಗುಲಿದೆ. ಹೀಗಾಗಿ ಇದು ಬೇರೆ ತಾಲೂಕಿನ ವೈದ್ಯರಿಗೆ ಸ್ವಲ್ಪ ಮಟ್ಟಿಗೆ ಆತಂಕ ಮೂಡಿಸಿದೆ. ಈ ಕಾರಣದಿಂದಲೂ ಕೆಲವರು ಸೇವೆಗೆ ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲ ತಾಲೂಕು ಘಟಕಗಳನ್ನು ಆರೋಗ್ಯ ಇಲಾಖೆ ನೇರವಾಗಿ ಸಂಪರ್ಕವನ್ನು ಮಾಡಿಲ್ಲ ಎನ್ನಲಾಗುತ್ತಿದೆ.

    ಕೆಪಿಎಂಎ ಕಾಯ್ದೆಯಡಿ ನೋಂದಾಯಿಸಿಕೊಂಡಿರುವ ಎಂಬಿಎಂಎಸ್ ಹಾಗೂ ಆಯುಷ್ ವೈದ್ಯರು ಸೇರಿ 570ಕ್ಕೂ ಹೆಚ್ಚು ಖಾಸಗಿ ವೈದ್ಯರು ಕೋವಿಡ್ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದರು. ಅದರಲ್ಲಿ ಕೆಲವು ವೈದ್ಯರು ಈಗಾಗಲೇ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ, ಕೆಲವು ದಿನಗಳಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಖಾಸಗಿ ವೈದ್ಯರು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ 13 ಖಾಸಗಿ ವೈದ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಕೋವಿಡ್ ಸೇವೆಗೆ ಬರದಿದ್ದರೆ ಸರ್ಕಾರದ ನಿಯಮದ ಪ್ರಕಾರ ನಿಮ್ಮ ಖಾಸಗಿ ಆಸ್ಪತ್ರೆ ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದ್ದೇವೆ. ಇದಕ್ಕೆ ಕೆಲವರು ಇನ್ನುಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.
    | ಡಾ. ರಾಜೇಂದ್ರ ದೊಡ್ಡಮನಿ
    ಡಿಎಚ್​ಒ ಹಾವೇರಿ


    ಹಾವೇರಿ ತಾಲೂಕಿನ ವೈದ್ಯರು ಭರವಸೆ ನೀಡಿದಂತೆ ಸೇವೆ ಸಲ್ಲಿಸುತ್ತಾ ಬರುತ್ತಿದ್ದೇವೆ. ಬೇರೆ ತಾಲೂಕಿನ ವೈದ್ಯರ ವಿಚಾರ ನಮಗೆ ಗೊತ್ತಿಲ್ಲ. ನಮ್ಮ ತಾಲೂಕಿನ ಯಾವ ಖಾಸಗಿ ವೈದ್ಯರಿಗೆ ನೋಟಿಸ್ ಬಂದಿಲ್ಲ.
    | ಡಾ. ಮೃತ್ಯುಂಜಯ ತುರಕಾಣಿ ಐಎಂಎ ಘಟಕದ ಹಾವೇರಿ ತಾಲೂಕು ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts