More

    ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಪರವಾನಗಿ ರದ್ದು

    ಹಾವೇರಿ: ದೇಶದಲ್ಲಿ ಕರೊನಾ ಸೋಂಕು ಈಗಾಗಲೇ 1 ಸಾವಿರದ ಗಡಿ ದಾಟಿದ್ದು, ಇನ್ನಷ್ಟು ಕಠಿಣ ನಿರ್ಧಾರಗಳಿಗೆ ಜನತೆ ಸಜ್ಜಾಗಬೇಕು. ಈ ಸಮಯದಲ್ಲಿ ಸರ್ಕಾರಿ ವೈದ್ಯರ ಮಾದರಿಯಲ್ಲಿ ಖಾಸಗಿ ವೈದ್ಯರು ಕ್ಲಿನಿಕ್​ಗಳನ್ನು ತೆರೆದು ಸಾರ್ವಜನಿಕರಿಗೆ ಸೇವೆ ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಹಾವೇರಿ ನಗರಸಭೆ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಕ್ಲಿನಿಕ್​ಗಳು ಹಾಗೂ ಮೆಡಿಕಲ್ ಶಾಪ್​ಗಳು ಜನರ ಸೇವೆಗೆ ತೆರೆದಿರಬೇಕು. ಒಂದೊಮ್ಮೆ ಖಾಸಗಿ ವೈದ್ಯರು ಕ್ಲಿನಿಕ್​ಗಳನ್ನು ತೆರೆದು ಸೇವೆಗೆ ಮುಂದಾಗದಿದ್ದರೆ ಅಂಥವರ ಮೇಲೆ ನಿಗಾ ವಹಿಸಲಾಗುವುದು. ನೋಟಿಸ್ ನೀಡಿ ಕ್ಲಿನಿಕ್​ಗಳಿಗೆ ನೀಡಿದ ಲೈಸನ್ಸ್ ರದ್ದುಪಡಿಸಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

    ಮಾಸ್ಕ್, ವೆಂಟಿಲೇಟರ್, ಹ್ಯಾಂಡ್​ಗ್ಲೌಸ್, ಸ್ಯಾನಿಟೈಸರ್ ಹಾಗೂ ಕರೊನಾ ವೈದ್ಯಕೀಯ ಕಿಟ್ ಸೇರಿ ಅಗತ್ಯ ಉಪಕರಣಗಳ ಖರೀದಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೂ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಈಗಾಗಲೇ ವಿದೇಶದಲ್ಲಿರುವ ಜಿಲ್ಲೆಯ ಜನರು ಬಂದಾಗಿದೆ. ಬೇರೆ ರಾಜ್ಯ ಮತ್ತು ವಿದೇಶದಿಂದ ಬಂದವರನ್ನು ತಪಾಸಣೆಗೆ ಒಳಪಡಿಸಿ ಹೋಮ್ ಕ್ವಾರಂಟೈನ್​ನಲ್ಲಿರಿಸಲಾಗಿದೆ. ನಿತ್ಯವೂ ಅವರ ಮೇಲೆ ನಿಗಾವಹಿಸಲಾಗಿದೆ ಎಂದರು.

    ಈಗ ಜಗತ್ತಿಗೆ ಸಂಕಷ್ಟ ಬಂದಿದೆ. ನಮ್ಮ ದೈನಂದಿನ ಚಟುವಟಿಕೆಗಳಿಗೂ ಸ್ವಲ್ಪ ಸಮಸ್ಯೆಯಾಗುವುದು ನಿಶ್ಚಿತ. ಆದರೆ, ಇದನ್ನು ಸಹಿಸಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಮನೆಯೊಳಗಿರಬೇಕು. ಸಾಮಾಜಿಕ ಅಂತರವೇ ಕರೊನಾ ನಿಮೂಲನೆಗೆ ಔಷಧವಾಗಿದೆ. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಹೋಟೆಲ್ ಮಾಲೀಕರನ್ನು ಕರೆಸಿ ಕೆಲವು ಹೋಟೆಲ್​ಗಳನ್ನು ಆರಂಭಿಸಿ ಪಾರ್ಸ್​ಲ್ ವ್ಯವಸ್ಥೆ ನೀಡಲು ಸೂಚನೆ ನೀಡಿ. ಇದೇ ಮಾದರಿಯಲ್ಲಿ ಈಗಾಗಲೇ ಸರ್ಕಾರ ಮಾರ್ಗದರ್ಶನ ನೀಡಿದಂತೆ ರಾಜ್ಯ ಹೆದ್ದಾರಿಗಳ ಡಾಬಾಗಳನ್ನು ಆರಂಭಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಅತ್ಯಂತ ಅಗತ್ಯ ಸಂದರ್ಭದಲ್ಲಿ ಹೊರಬನ್ನಿ. ಅನಗತ್ಯವಾಗಿ ಬೀದಿಯಲ್ಲಿ ಸುತ್ತಾಡಿದರೆ ಕಠಿಣ ಕ್ರಮ ಅನಿವಾರ್ಯವಾಗಲಿದೆ. ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡದಂತೆ ಶ್ರಮಿಸುತ್ತಿರುವ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅಧಿಕಾರಿಗಳು ಹಾಗೂ ಟಾಸ್ಕ್​ಪೋರ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.

    ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ.ಜಿ. ದೇವರಾಜ್, ಸಿಇಒ ರಮೇಶ ದೇಸಾಯಿ ಇದ್ದರು.

    ಅವಶ್ಯಕ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ವ್ಯವಸ್ಥೆ

    ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಕಟಾವು, ಒಕ್ಕಲುತನ, ಉಳುಮೆ, ಇತರ ಚಟುವಟಿಕೆ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ರೈತರು ಬೆಳೆದ ಹಣ್ಣು, ತರಕಾರಿ ಅಗತ್ಯ ಬೇಳೆಕಾಳುಗಳ ಮಾರಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಕೃಷಿ ಯಂತ್ರಗಳ ಬಳಕೆಗೆ ಬೇಕಾದ ಇಂಧನವನ್ನು ಪೂರೈಸಲು ಕ್ರಮವಹಿಸಲಾಗಿದೆ. ರೈತರೇ ಟ್ರಾ್ಯಕ್ಟರ್​ಗಳನ್ನು ತಂದು ಡಿಸೇಲ್ ಹಾಕಿಸಿಕೊಳ್ಳಬೇಕು. ಅದರ ಬದಲು ಡಬ್ಬಿಗೆ ತುಂಬಿ ಕೊಡುವುದಿಲ್ಲ. ಈ ಸಮಯದಲ್ಲಿ ಅವರು ಸಹಕರಿಸಬೇಕು. ಪ್ರತಿ ತಾಲೂಕಿನಲ್ಲಿ ಸಹಾಯಕ ಕೃಷಿ ನಿರ್ದೇಶಕರು, ತೋಟಗಾರಿಕಾ ಸಹಾಯಕ ನಿರ್ದೇಶಕರು, ಎಪಿಎಂಸಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಲು ಕ್ರಮವಹಿಸಲಾಗುವುದು ಎಂದು ಬಿ.ಸಿ. ಪಾಟೀಲ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts