More

    ಖಾಸಗಿ ಆಸ್ಪತ್ರೆಯ 21 ರೋಗಿಗಳಿಗೆ ಬಿಮ್ಸ್‌ನಿಂದ ಆಮ್ಲಜನಕ

    ಬೆಳಗಾವಿ: ನಗರದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ನೆರವಿಗೆ ಧಾವಿಸಿದ ಬಿಮ್ಸ್ ವೈದ್ಯರು, ಸೋಮವಾರ ಮಧ್ಯರಾತ್ರಿ 21 ಜನರಿಗೆ ಆಮ್ಲಜನಕ ಒದಗಿಸಿ ತುರ್ತು ಚಿಕಿತ್ಸೆ ನೀಡುವ ಮೂಲಕ ಜೀವ ರಕ್ಷಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸೋಮವಾರ ಮಧ್ಯರಾತ್ರಿ ಆಕ್ಸಿಜನ್ ಕೊರತೆ ಕಂಡುಬಂದಿತ್ತು. ಆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಲಭ್ಯವಿಲ್ಲದ್ದರಿಂದ ಅಲ್ಲಿನ ವೈದ್ಯರು ಬಿಮ್ಸ್ ವೈದ್ಯರ ನೆರವು ಕೇಳಿದ್ದರು. ಅದಕ್ಕೆ ತಕ್ಷಣವೇ ಸ್ಪಂದಿಸಿದ ಬಿಮ್ಸ್, 21 ರೋಗಿಗಳನ್ನು ಸ್ಥಳಾಂತರಿಸಿಕೊಂಡು ಆಕ್ಸಿಜನ್ ಒದಗಿಸುವ ಜತೆಗೆ ಅಗತ್ಯ ಚಿಕಿತ್ಸೆ ನೀಡುವ ಮೂಲಕ ತನ್ನ ಜವಾಬ್ದಾರಿ ನಿಭಾಯಿಸಿದೆ. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಆದರೂ ಕೆಲವೊಮ್ಮೆ ಇಂತಹ ಸನ್ನಿವೇಶಗಳು ಎದುರಾದಾಗ ರೋಗಿಗಳ ಜೀವ ರಕ್ಷಣೆಗಾಗಿ ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಬಿಮ್ಸ್ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ. ಬಿಮ್ಸ್‌ನಲ್ಲಿ 300 ಹಾಸಿಗೆಗಳ ಒಂದು ಬ್ಲಾಕ್ ಅನ್ನು ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಮಂಗಳವಾರ ಮಧ್ಯಾಹ್ನದವರೆಗೆ ಒಟ್ಟಾರೆ 287 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆ ವೇಳೆಗೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಜಿಲ್ಲಾಧಿಕಾರಿ ಅನುಮೋದನೆ ಪಡೆದು ಆಸ್ಪತ್ರೆಯ ಇನ್ನೊಂದು ಬ್ಲಾಕ್ ಕೂಡ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಒದಗಿಸಲಾಗುವುದು ಎಂದು ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts