More

    ಖಾಸಗಿ ಆಸ್ಪತ್ರೆಗೆ ರೋಗಿಗಳ ರೆಫರ್

    ಚಿತ್ರದುರ್ಗ: ಪೂರಕ ಸೌಲಭ್ಯಗಳ ಕೊರತೆ ಹೊರತು ಪಡಿಸಿ, ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ರೆಫರ್ ಮಾಡಬಾರದು ಎಂದು ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಜಿಪಂ ಆಡಳಿತಾಧಿಕಾರಿ ಆಮ್ಲಾನ್‌ಆದಿತ್ಯ ಬಿಸ್ವಾಸ್ ಸೂಚಿಸಿದರು.
    ಗುರುವಾರ ಜಿಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ರೆಫರೆಲ್ ನಿಯಮಗಳನ್ನು ಕಡ್ಡಾಯ ಪಾಲಿಸಬೇಕು. ವಿನಾಕಾರಣ ಖಾಸಗಿ ಆಸ್ಪತ್ರೆಗಳಿಗೆ ಕಳಿಸಬಾರದು. ತಜ್ಞ ವೈದ್ಯರಿದ್ದರೂ, ಜಿಲ್ಲಾಸ್ಪತ್ರೆ ಅಂಧತ್ವ ನಿವಾರಣೆ ವಿಭಾಗದ ಪ್ರಗತಿ ಕುಂಟಿತವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕಣ್ಣಿನ ಪೊರೆ ಆಪರೇಷನ್‌ಗೆ 50 ಸಾವಿರ ರೂ. ಖರ್ಚಾಗತ್ತದೆ. ಸವಲತ್ತುಗಳಿದ್ದರೂ ಯಾಕೆ ಬಡ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತರಾಟೆಗೆ ತೆಗೆದುಕೊಂಡರು.
    ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಹೋಗದಂತೆ ಸರ್ಕಾರಿ ಆಸ್ಪತ್ರೆಗಳಲ್ಲೇ ಉತ್ತಮ ಆರೋಗ್ಯ ಸೇವೆ ನೀಡಬೇಕು. ಉತ್ತಮ ಲೆನ್ಸ್ ಅಳವಡಿಸಿ, ಆಯುಷ್ಮಾನ್ ಯೋಜನೆಯಡಿ ಶಸ್ತ್ರಚಿಕಿತ್ಸೆ ಖರ್ಚು ಭರಿಸುವಂತೆ ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಅವರಿಗೆ ಸೂಚಿಸಿದರು.
    ಜಲಜೀವನ್ ಮಿಷನ್ ಕಾಮಗಾರಿ ವಿಳಂಬ ಮಾಡಿದ ಗುತ್ತಿಗೆದಾರರಿಗೆ ನೋಟಿಸ್ ಕೊಡಿ, ಅವರಿಗೆ ದಂಡ ವಿಧಿಸಿ ಎಂದು ಗ್ರಾಮೀಣ ಕುಡಿವ ನೀರು ಪೂರೈಕೆ ಮತ್ತು ನೈರ್ಮಲ್ಯ ವಿಭಾಗದ ಇಇ ಬಸವನಗೌಡ ಮೇಟಿ ಪಾಟೀಲರಿಗೆ ತಿಳಿಸಿದರು.
    ಚಿತ್ರದುರ್ಗ ನಗರ ಸೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಜಲಜೀವನ್ ಮಿಷನ್ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದರು.
    ಶಿಕ್ಷಣ ಇಲಾಖೆಯಲ್ಲಿ ಒಂದು ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇರುವುದಕ್ಕೆ ಬಿಸ್ವಾಸ್ ಅಚ್ಚರಿ ವ್ಯಕ್ತಪಡಿಸಿದರು.
    ಪ್ರತಿಕ್ರಿಯಿಸಿದ ಡಿಡಿಪಿಐ ಕೆ.ರವಿಶಂಕರರೆಡ್ಡಿ, ಖಾಲಿ ಹುದ್ದೆಗಳ ಪೈಕಿ, 296 ಪ್ರಾಥಮಿಕ ಶಿಕ್ಷಕರ ಹುದ್ದೆಗಳ ಭರ್ತಿಯಾಗಿವೆ. 250 ಶಿಕ್ಷಕರಿಗೆ ಆರ್ಡರ್ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
    ವಿದ್ಯಾರ್ಥಿಗಳಿಗೆ ವಿತರಿಸುವ ಶೈಕ್ಷಣಿಕ ಉಪಕರಣಗಳ ಖರೀದಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ಕಳಪೆ ಉಪಕರಣಗಳ ಖರೀದಿ ಸಹಿಸುವುದಿಲ್ಲವೆಂದು ಬಿಸ್ವಾಸ್ ಹೇಳಿದರು.
    ಹೊರಗುತ್ತಿಗೆಯಡಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಖಾಲಿ ಹುದ್ದೆಗಳ ಭರ್ತಿಗೆ ಅವಕಾಶವಿದ್ದರೂ ಯಾಕೆ ಕ್ರಮ ತೆಗೆದುಕೊಂಡಿಲ್ಲವೆಂದು ಇಲಾಖೆ ಜಿಲ್ಲಾ ಅಧಿಕಾರಿ ಒ.ಪರಮೇಶ್ವರಪ್ಪ ಅವರನ್ನು ಪ್ರಶ್ನಿಸಿದರು.
    ಹೊರಗುತ್ತಿಗೆಯಡಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಡಿ ಗ್ರೂಪ್ ಹುದ್ದೆಗಳನ್ನು ಭರ್ತಿಗೆ ಸಿಇಒ ಎಸ್.ಜೆ. ಸೋಮಶೇಖರ್‌ಗೆ ನಿರ್ದೇಶಿಸಿದರು.
    ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ಕೊಡಬೇಕು. ಶಾಲೆ ಮತ್ತು ಅಂಗನವಾಡಿಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
    ಸಮಾಜ ಕಲ್ಯಾಣ ಇಲಾಖೆಯಲ್ಲಿ, ಕಲ್ಯಾಣ ಕಾರ‌್ಯಕ್ರಮಗಳ ಅನುಷ್ಠಾನ ಅಸಮರ್ಪಕವಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.
    ನಗರದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಕ್ರೀಡಾಂಗಣ ಮೇಲ್ದರ್ಜೆಗೇರಿಸಲು ಕೆಎಂಇಆರ್‌ಸಿ ಅನುದಾನದಡಿ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ಈಜುಕೊಳಕ್ಕೆ ತರಬೇತುದಾರರು, ಸಿಬ್ಬಂದಿಯನ್ನು ಹೊರಗುತ್ತಿಗೆಯಡಿ ನೇಮಿಸಿಕೊಳ್ಳುವಂತೆ ತಿಳಿಸಿದರು.
    ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ದೂರು ಪುಸ್ತಕ ಕಡ್ಡಾಯ. ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯಗಳ ನಿರ್ವಹಣೆ ಬಗ್ಗೆ ದೂರುಗಳಿವೆ. ಪ್ರತಿ ತಿಂಗಳು ನಿಲಯ ಪಾಲಕರು ದೂರು ಪುಸ್ತಕದಲ್ಲಿ ತಮ್ಮ ಸಹಿಯೊಂದಿಗೆ ತಾಪಂ ಇಒಗೆ ವರದಿ ಸಲ್ಲಿಸಬೇಕೆಂದರು.
    ಜಿಪಂ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ, ಮುಖ್ಯಯೋಜನಾಧಿಕಾರಿ ಸತೀಶ್‌ರೆಡ್ಡಿ ಸೇರಿ ಜಿಲ್ಲಾಮಟ್ಟದ ನಾನಾ ಅಧಿಕಾರಿಗಳಿದ್ದರು.

    ನಿರ್ಲಕ್ಷೃ ಸಹಿಸಲಾಗದು
    ಯಾವುದೇ ಅಧಿಕಾರಿಗಳು ಅರ್ಹರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ನಿರ್ಲಕ್ಷ್ಯ ತೋರುವುದನ್ನು ಸಹಿಸುವುದಿಲ್ಲವೆಂದು ಬಿಸ್ವಾಸ್ ಹೇಳಿದರು. ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ ಇರಬೇಕು. ಉತ್ತಮ ಕೆಲಸ ಮಾಡಿದ್ದರೇ, ಅದು ಸಂಬಳಕ್ಕೆ ತಕ್ಕ ನ್ಯಾಯ ಒದಗಿಸಿದ್ದೀರಿ ಎಂದರ್ಥ. ಇನ್ನು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಿದ್ದರೆ ಶ್ಲಾಘಿಸಬಹುದು. ಈ ಜಿಲ್ಲೆಯಲ್ಲಿ 4 ವರ್ಷ ಡಿಸಿಯಾಗಿ ಕೆಲಸ ಮಾಡಿದ್ದೇನೆ ಎಂಬುದರ ಅರಿವಿರಲಿ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts