More

    ಆಸ್ಪತ್ರೆ ನಾಮನಿರ್ದೇಶಿತ ಸದಸ್ಯರ ಆದೇಶ ರದ್ದು

    ಗಂಗಾವತಿ: ಶಾಸಕ ಗಾಲಿ ಜನಾರ್ದನರೆಡ್ಡಿ ಮೌಖಿಕ ಆದೇಶಕ್ಕೆ ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಈಶ್ವರ ಸವಡಿ ಪೇಚಿಗೆ ಸಿಲುಕಿದ್ದು, ಒಂದೇ ದಿನದಲ್ಲಿ ಆಸ್ಪತ್ರೆ ನಾಮನಿರ್ದೇಶಿತ ಸದಸ್ಯರ ಆದೇಶ ರದ್ದುಪಡಿಸಿದ ಪ್ರಸಂಗ ನಡೆದಿದೆ.

    ಆಸ್ಪತ್ರೆ ಆರೋಗ್ಯ ರಕ್ಷಾ ಸಾಮಾನ್ಯ ಸಮಿತಿ ನಾಮನಿರ್ದೇಶಿತ ಸದಸ್ಯರ ನೇಮಕ ಆದೇಶವನ್ನು ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಬೇಕಿದ್ದು, ಆದರೆ ಶಾಸಕ ಗಾಲಿ ಜನಾರ್ದನರೆಡ್ಡಿ ಮೌಖಿಕ ಆದೇಶದ ಹಿನ್ನೆಲೆಯಲ್ಲಿ 8 ಜನರನ್ನೊಳಗೊಂಡ ನಾಮನಿರ್ದೇಶಿತರನ್ನು ನೇಮಕ ಮಾಡಿದ ಆದೇಶವನ್ನು ಆಡಳಿತಾಧಿಕಾರಿ ಡಾ.ಈಶ್ವರ ಸವಡಿ ಜ.11ರಂದು ಹೊರಡಿಸಿದ್ದರು.

    ಗಾಲಿ ಜನಾರ್ದನರೆಡ್ಡಿ ಜನ್ಮದಿನಕ್ಕೆ ಖುಷಿ ಪಡಿಸಲು ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆನ್ನಲಾಗಿದ್ದು, ಅಂದೇ ಎಲ್ಲ ಸದಸ್ಯರಿಗೆ ನೇಮಕ ಪತ್ರ ವಿತರಿಸಲಾಗಿತ್ತು. ಜಿಲ್ಲಾ ಆರೋಗ್ಯ ಇಲಾಖೆ ಗಮನಕ್ಕೂ ತರದೇ ಆದೇಶ ಹೊರಡಿಸಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದ್ದು, ಆಡಳಿತಾಧಿಕಾರಿ ಸರ್ವಾಧಿಕಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

    ಕೆಂಡಾಮಂಡಲ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಸರ್ಕಾರದ ನಾಮನಿರ್ದೇಶಿತರ ನೇಮಕದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ ಸೂಚನೆ ಪಾಲಿಸುವಂತೆ ಹೈಕಮಾಂಡ್ ತಿಳಿಸಿದೆ. ಅನ್ಸಾರಿ ಗಮನಕ್ಕೆ ಬರದೇ ರೆಡ್ಡಿ ಬೆಂಬಲಿಗರನ್ನು ನೇಮಿಸಿದ್ದಕ್ಕೆ ಸವಡಿ ಮೇಲೆ ಕೆಂಡಾಮಂಡಲವಾಗಿದ್ದು, ರದ್ದತಿಗೆ ಸೂಚನೆ ನೀಡಿದ್ದರು. ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ನಾಮನಿರ್ದೇಶಿತರ ಆದೇಶವನ್ನು ರದ್ದುಪಡಿಸಿ ಹೊಸ ಆದೇಶವನ್ನು ಜ.12ರಂದು ಹೊರಡಿಸಲಾಗಿದೆ.

    ರೆಡ್ಡಿ ಮತ್ತು ಅನ್ಸಾರಿ ನಡುವಿನ ಮುನಿಸು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿದ್ದು, ಕಾರ್ಯಕರ್ತರಿಗೂ ಇರುಸುಮುರುಸಾಗುತ್ತಿದೆ. ರೆಡ್ಡಿ ಮೌಖಿಕ ಆದೇಶದಿಂದ ಪೇಚಿಗೊಳಗಾದವರಲ್ಲಿ ವೈದ್ಯ ಸವಡಿ ಎರಡನೇ ಅಧಿಕಾರಿ. ಸಣಾಪುರ ಜಲಾಶಯ ಹರಿಗೋಲು ಹಾಕುವ ವಿಚಾರದಲ್ಲಿ ವಲಯ ಅರಣ್ಯಾಧಿಕಾರಿ ಸುಭಾಸಚಂದ್ರ ಮೌಖಿಕ ಆದೇಶ ಪಾಲಿಸಿ, ಇಕ್ಕಟ್ಟಿಗೆ ಸಿಲುಕಿದ್ದಾರೆ. ನಾಮನಿರ್ದೇಶಿತರ ಪಟ್ಟಿ ರದ್ದತಿ ವಿಚಾರದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಮೌನಮುರಿದಿದ್ದು, ಸಮಯ ಬಂದಾಗ ಪ್ರತಿಕ್ರಿಯೆಸುವೆ ಎಂದು ಹೇಳಿ ಜಾರಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts