More

    ಖಾದಿ ಧ್ವಜಗಳ ಮೂಲ ಗರಗ ಗ್ರಾಮದಲ್ಲಿ ಹರ್​ಘರ್ ತಿರಂಗಾ ಬಹಿಷ್ಕಾರ

    ಡಿ.ವಿ. ಕಮ್ಮಾರ ಧಾರವಾಡ
    ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಈಗ 75 ವರ್ಷ. ಈ ಹಿನ್ನೆಲೆಯಲ್ಲಿ ಇಡೀ ದೇಶದ ತುಂಬ ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವ ಪಸರಿಸಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಪ್ರತಿ ಮನೆ ಮೇಲೂ ತ್ರಿವರ್ಣ ಧ್ವಜ ಹಾರಿಸಲು ಕರೆ ಕೊಟ್ಟಿದೆ. ಆದರೆ, ತ್ರಿವರ್ಣ ಧ್ವಜಗಳ ಮೂಲ ಊರಲ್ಲಿಯೇ ಕೇಂದ್ರ ಸರ್ಕಾರದ ಈ ಕರೆಯನ್ನು ಬಹಿಷ್ಕರಿಸಲಾಗುತ್ತಿದೆ.
    ಧಾರವಾಡ ತಾಲೂಕಿನ ಗರಗ ಗ್ರಾಮಸ್ಥರು ಹರ್ ಘರ್ ತಿರಂಗಾ ಅಭಿಯಾನ ಬಹಿಷ್ಕರಿಸಲು ಮುಂದಾಗಿದ್ದು, ಯಾವುದೇ ಬಗೆಯ ಧ್ವಜವನ್ನು ತಮ್ಮ ಗ್ರಾಮದ ಮನೆಯ ಮೇಲೆ ಹಾರಿಸದಿರಲು ನಿರ್ಧರಿಸಿದ್ದಾರೆ. ದೇಶದಲ್ಲಿರೊ ಖಾದಿ ಧ್ವಜಗಳ ಮೂಲ ಈ ಗರಗ ಗ್ರಾಮ. ಆದರೆ, ಕೇಂದ್ರ ಸರ್ಕಾರ ರಾಷ್ಟ್ರೀಯ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿರುವುದು ಇಲ್ಲಿನ ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ. ಇದೇ ಕಾರಣಕ್ಕೆ ಈ ಅಭಿಯಾನವನ್ನು ಗ್ರಾಮಸ್ಥರು ಬಹಿಷ್ಕರಿಸುತ್ತಿದ್ದಾರೆ.
    ಎಲ್ಲರಿಗೂ ಗೊತ್ತಿರುವಂತೆ ಇಡೀ ದೇಶದಲ್ಲಿ ಧ್ವಜ ತಯಾರಿಸುವ ಮಾನ್ಯತೆ ಪಡೆದ ಏಕೈಕ ಸಂಘ ಹುಬ್ಬಳ್ಳಿಯ ಬೇಂಗೇರಿಯ ಖಾದಿ ಸಂಘ. ಆದರೆ, ಇಲ್ಲಿ ತಯಾರಾಗುವ ಧ್ವಜಗಳಿಗೆ ಬಟ್ಟೆಗಳನ್ನು ಪೂರೈಸುವ ಮಾನ್ಯತೆ ಪಡೆದ ಏಕೈಕ ಕೇಂದ್ರ ಧಾರವಾಡ ತಾಲೂಕಿನ ಗರಗ ಗ್ರಾಮದ ಗರಗ ಕ್ಷೇತ್ರೀಯ ಸೇವಾ ಸಂಘ. ಹತ್ತಿಯ ನೂಲಿನಿಂದ ಧ್ವಜಕ್ಕೆ ಬೇಕಾದ ಕೇಸರಿ, ಬಿಳಿ, ಹಸಿರು ಬಟ್ಟೆಯನ್ನು ನೇಯ್ದು, ಬೆಂಗೇರಿ ಕೇಂದ್ರಕ್ಕೆ ಪೂರೈಸಲಾಗುತ್ತದೆ. ಆದರೆ, ಇತ್ತೀಚೆಗೆ ಕೇಂದ್ರ ಸರ್ಕಾರ ಪಾಲಿಸ್ಟರ್ ಸೇರಿದಂತೆ ಇತರೆ ಬಟ್ಟೆಗಳ ಧ್ವಜಕ್ಕೂ ಮಾನ್ಯತೆ ನೀಡಿದೆ. ಯಾರು ಬೇಕಾದರೂ ಧ್ವಜ ತಯಾರಿಸಬಹುದಾಗಿದೆ. ಹೀಗಾಗಿ ಗರಗ ಕೇಂದ್ರಕ್ಕೆ ಸಂಕಷ್ಟ ಎದುರಾಗಿದ್ದು, ಬೇಡಿಕೆ ಕುಂಠಿತವಾಗಿದೆ. ತಮ್ಮ ಗ್ರಾಮದ ಖಾದಿ ಕೇಂದ್ರವೇ ಇಡೀ ದೇಶದಲ್ಲಿರೋ ಎಲ್ಲ ಧ್ವಜದ ಮೂಲ ಎಂದು ಗ್ರಾಮಸ್ಥರು ಇಷ್ಟು ದಿನ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
    ಇಲ್ಲಿ ಧ್ವಜ ತಯಾರಿಕೆಗಾಗಿಯೇ ಪ್ರತಿವರ್ಷ ಸಾವಿರಾರು ಮೀಟರ್ ಖಾದಿ ಬಟ್ಟೆ ಸಿದ್ಧವಾಗುತ್ತದೆ. ಕೇಂದ್ರ ಸರ್ಕಾರ ಈ ಕೇಂದ್ರಕ್ಕೆ ಒಟ್ಟು 10 ಸಾವಿರ ಮೀಟರ್ ಬಟ್ಟೆ ತಯಾರಿಸಿ ಕೊಡಲು ಮೊದಲು ಆದೇಶ ನೀಡಿತ್ತಂತೆ. ಸರ್ಕಾರದ ಬೇಡಿಕೆಯಂತೆ ಇಲ್ಲಿನ ಕೇಂದ್ರದ ಸಿಬ್ಬಂದಿ ಬಟ್ಟೆ ಸಿದ್ಧಪಡಿಸಿ ಇಟ್ಟಿದ್ದಾರೆ. ಆದರೆ, ಇದೀಗ ಕೇಂದ್ರ ಸರ್ಕಾರ ಬಟ್ಟೆಯನ್ನೂ ಖರೀದಿಸಿಲ್ಲ.
    1954ರಲ್ಲಿ ಆರಂಭಗೊಂಡಿರೋ ಗರಗ ಖಾದಿ ಕೇಂದ್ರಕ್ಕೆ ವಿನೋಬಾ ಭಾವೆ ಅವರು ಭೇಟಿ ನೀಡಿರೋ ಹಿನ್ನೆಲೆ ಇದೆ. ಆ ಬಳಿಕ 1974ರಲ್ಲಿ ಈ ಕೇಂದ್ರದಲ್ಲಿ ಧ್ವಜದ ಬಟ್ಟೆ ತಯಾರಿಸಲು ಅಧಿಕೃತ ಅನುಮತಿ ದೊರೆತಿದೆ.
    ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಬಹಿಷ್ಕಾರ ಹಾಕುತ್ತಿರುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗ್ರಾಮಸ್ಥರು ಲಿಖಿತ ಮಾಹಿತಿಯನ್ನೂ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts