More

    ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಜಿಲ್ಲಾಧಿಕಾರಿ

    ಬೆಳಗಾವಿ: ನಿರಂತರ ಮಳೆಯಿಂದಾಗಿ ಹಾನಿಗೀಡಾದ ನಗರದ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೋಮವಾರ ಭೇಟಿ ನೀಡಿ, ಹಾನಿ ಪರಿಶೀಲಿಸಿದರು. ಅಲ್ಲದೇ, ಹಾನಿಗೀಡಾದ ಜನತೆಗೆ 24 ಗಂಟೆಯೊಳಗಾಗಿ ತಲಾ 10 ಸಾವಿರ ರೂ.ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಹಳೆಯ ಮನೆಗಳು ಕುಸಿಯುವ ಸಂಭವವಿದ್ದರೆ ಅಂತಹ ಮನೆಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಜನರನ್ನು ಸ್ಥಳಾಂತರಿಸಬೇಕು. ಯಾವುದೇ ಕಾರಣಕ್ಕೂ ಪರಿಹಾರ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಹಸೀಲಾರ್ ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು. ಅನಗೋಳದ ರಘುನಾಥ ಪೇಟ, ಭಾರತ ನಗರ, ಯಳ್ಳೂರ ರಸ್ತೆಯ ಕೇಶವ ನಗರ ಹಾಗೂ ವಡ್ಗಗಾವಿಯ ಅನ್ನಪೂರ್ಣೇಶ್ವರಿ ಮಂಗಲ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರ ಸ್ಥಾಪನೆ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು. ಭಾರತ ನಗರದಲ್ಲಿನ ಹಲವು ಅಕ್ಕಪಕ್ಕದ ಮನೆಗಳ ಗೋಡೆ ಕುಸಿದಿರುವುದರಿಂದ ಯಾವುದೇ ಕ್ಷಣ ಮನೆಗಳು ಕುಸಿಯುವ ಸಾಧ್ಯತೆ ಇರುವುದರಿಂದ ಕೂಡಲೇ ಪರಿಹಾರ ನೀಡಬೇಕು. ಜತೆಗೆ ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಹಲವು ಕುಟುಂಬಸ್ಥರು ಜಿಲ್ಲಾಧಿಕಾರಿ ಪಾಟೀಲ ಅವರನ್ನು ಒತ್ತಾಯಿಸಿದರು. ಮನೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ವಾಹನ ಸಂಪೂರ್ಣ ಜಖಂ ಗೊಂಡಿರುವುದರಿಂದ ಪರಿಹಾರ ನೀಡಲು ವಾಹನದ ಮಾಲೀಕರು ಮನವಿ ಮಾಡಿದರು. ಸ್ಪಂದಿಸಿದ ಜಿಲ್ಲಾಧಿಕಾರಿ, ಮನೆ ಹಾಗೂ ವಾಹನದ ಹಾನಿ ಪ್ರಮಾಣ, ದಾಖಲೆ ಪರಿಶೀಲಿಸಿ ನಿಯಮಾವಳಿ ಪ್ರಕಾರ ತಕ್ಷಣವೇ ಆರ್‌ಟಿಜಿಎಸ್ ಮೂಲಕ ಪರಿಹಾರ ವಿತರಿಸುವಂತೆ ತಹಸೀಲ್ದಾರ್‌ಗೆ ನಿರ್ದೇಶನ ನೀಡಿದರು. ಅಲ್ಲದೆ, ನಗರದಲ್ಲಿ 10ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, 4 ಮನೆಗಳು ಸಂಪೂರ್ಣವಾಗಿ ಕುಸಿದಿವೆ. ತ್ವರಿತವಾಗಿ ಸಮೀಕ್ಷೆ ಪೂರ್ಣಗೊಳಿಸಿ, ದಾಖಲೆಗಳನ್ನು ಆಧರಿಸಿ 48 ಗಂಟೆಗಳಲ್ಲಿ ಪರಿಹಾರ ನೀಡಲಾಗುವುದು ಎಂದು ಜನರಿಗೆ ಅಭಯ ನೀಡಿದರು.

    ಬಳ್ಳಾರಿ ನಾಲಾದಿಂದ ನಗರದಲ್ಲಿ ಪ್ರತಿವರ್ಷ ಸಮಸ್ಯೆ ಎದುರಾಗುತ್ತಿರುವುದರಿಂದ ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರವೇ ಸಭೆ ನಡೆಸಲಾಗುತ್ತಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಸಮಸ್ಯೆ ನಿವಾರಿಸಲು ಐದು ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ನಡೆಸಲಾಗುವುದು. ಬಳ್ಳಾರಿ ನಾಲಾ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಯೋಜನಾ ವರದಿ ಸಿದ್ಧಪಡಿಸಲಾಗುವುದು ಎಂದರು. ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ತಹಸೀಲ್ದಾರ್ ಆರ್.ಕೆ.ಕುಲಕರ್ಣಿ, ಪಾಲಿಕೆಯ ಉಪ ಆಯುಕ್ತರಾದ ಭಾಗಶ್ರೀ ಹುಗ್ಗಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇತರರು ಇದ್ದರು.

    ಬರಿಗಾಲಿನಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ: ಯಳ್ಳೂರ ರಸ್ತೆಯ ಕೇಶವ ನಗರದಲ್ಲಿ ಮಳೆಯಿಂದ ಆಗಿರುವ ಹಾನಿ ಪರಿಶೀಲಿಸಲು ಕೆಲವೆಡೆ ಬರಿಗಾಲಿನಲ್ಲೆ ತೆರಳಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಗಟಾರ ಸಮಸ್ಯೆ ಪರಿಶೀಲಿಸಿದರು. ಕೆಲವು ಕಡೆಗಳಲ್ಲಿ ಕಸದ ರಾಶಿ ಹಾಗೂ ಗಟಾರಗಳನ್ನು ಲೆಕ್ಕಿಸದೆ ಬರಿಗಾಲಿನಲ್ಲಿಯೇ ಸಂಚರಿಸಿದ ಜಿಲ್ಲಾಧಿಕಾರಿಗಳು, ಮನೆ ಶಿಥಿಲಗೊಂಡಿದ್ದರೆ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಗೊಳ್ಳಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದರು.

    ಬೆಳೆಹಾನಿಗೆ ಶೀಘ್ರ ಪರಿಹಾರ: ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಕೃಷ್ಣಾ ಹಾಗೂ ಮಲಪ್ರಭಾ ನದಿಪಾತ್ರದಲ್ಲಿ ಸದ್ಯಕ್ಕೆ ಪ್ರವಾಹ ಪರಿಸ್ಥಿತಿ ಇಲ್ಲ. ಅತವೃಷ್ಟಿಯಿಂದ ಕೆಲವು ಕಡೆಗಳಲ್ಲಿ ಬೆಳೆಹಾನಿಯಾಗಿದ್ದು, ಆದಷ್ಟು ಬೇಗ ಸಮೀಕ್ಷೆ ಕೈಗೊಂಡು ಪರಿಹಾರ ನೀಡಲಾಗುವುದು ಎಂದರು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ 388 ಕಾಳಜಿ ಕೇಂದ್ರ ಸ್ಥಾಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯಕ್ಕೆ ಒಂದು ಕಾಳಜಿ ಕೇಂದ್ರ ಗುರುತಿಸಲಾಗಿದ್ದು, ಪರಿಸ್ಥಿತಿ ಆಧರಿಸಿ ಹೆಚ್ಚುವರಿ ಕೇಂದ್ರ ಸ್ಥಾಪನೆ ಮಾಡಲಾಗುವುದು.

    ಜತೆಗೆ ಪರಿಸ್ಥಿತಿ ಆಧರಿಸಿ ಬುಧವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts