More

    ಕ್ವಾರಂಟೈನ್​ಗೆ ಸಾಮಾನ್ಯ ದರ ನಿಗದಿ

    ಧಾರವಾಡ : ಹೊರ ರಾಜ್ಯಗಳಿಂದ ಆಗಮಿಸುವ ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಜತೆ ಅವರು ಇಚ್ಛಿಸಿದಲ್ಲಿ ಸ್ವಂತ ಖರ್ಚಿನಲ್ಲಿ ಹೋಟೆಲ್ ಕ್ವಾರಂಟೈನ್​ಗೆ ಅವಕಾಶವಾಗುವಂತೆ ಜಿಲ್ಲೆಯ ಹೊಟೇಲ್ ಮತ್ತು ಲಾಡ್ಜ್​ಗಳಿಗೆ ಅನ್ವಯವಾಗುವಂತೆ ಸಾಮಾನ್ಯ ದರ ನಿಗದಿಗೊಳಿಸುವ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೋಟೆಲ್ ಅಸೋಸಿಯೇಷನ್ ಸದಸ್ಯರೊಂದಿಗೆ ಸಭೆ ನಡೆಸಲಾಯಿತು.

    ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರನ್ನು ಕಡ್ಡಾಯ ಕ್ವಾರಂಟೈನ್​ಗೆ ಸರ್ಕಾರ ಆದೇಶಿಸಿದೆ. ಜಿಲ್ಲೆಯ ವಿವಿಧ ಹಾಸ್ಟೇಲ್, ವಸತಿ ನಿಲಯ, ವಸತಿಯುತ ಶಾಲೆಗಳಲ್ಲಿ ಜಿಲ್ಲಾಡಳಿತ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಿದೆ. ಸ್ವಂತ ಖರ್ಚು ಭರಿಸಿ ಹೋಟೆಲ್ ಕ್ವಾರಂಟೈನ್​ಗೆ ಒಳಪಡಲು ಅವಕಾಶ ಕಲ್ಪಿಸಿದ್ದು, ಜಿಲ್ಲೆಯ ಹೋಟೆಲ್, ಲಾಡ್ಜ್​ಗಳಿಗೆ ಸಾಮಾನ್ಯ ದರ ನಿಗದಿಗೊಳಿಸಲು ಜಿಲ್ಲಾಧಿಕಾರಿಗೆ ಸರ್ಕಾರ ಸೂಚಿಸಿದೆ. ಹೀಗಾಗಿ ಅಸೋಸಿಯೇಷನ್ ಸದಸ್ಯರೊಂದಿಗೆ ರ್ಚಚಿಸಿ ಕಡಿಮೆ ವೆಚ್ಚದ, ಮಧ್ಯಮ ಹಾಗೂ ಉನ್ನತ ದರ್ಜೆಯ ಮೂರು ಹಂತಗಳಲ್ಲಿ ಅನ್ವಯವಾಗುವಂತೆ ದರ ನಿಗದಿಗೊಳಿಸಲಾಗಿದ್ದು, ಇದನ್ನು ಜಿಲ್ಲಾಡಳಿತದಿಂದ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು.

    ಸಾಂಸ್ಥಿಕ ಹಾಗೂ ಹೋಟೆಲ್ ಕ್ವಾರಂಟೈನ್​ನಲ್ಲಿ ಇರುವವರಿಗೆ ಅವರ ಕುಟುಂಬ ಸದಸ್ಯರು, ಸಂಬಂಧಿಗಳು ಅಥವಾ ಬೇರೆ ಯಾರೂ ಭೇಟಿ ಮಾಡಲು, ಅಹಾರ ನೀಡಲು ಅವಕಾಶವಿಲ್ಲ. ನಿತ್ಯ ಹೋಟೆಲ್​ಗಳಿಗೆ ಬೀಟ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದರು.

    ಮೆಟ್ರೊಪೊಲೀಸ್ ಹೋಟೆಲ್ ಮಾಲೀಕ ಅಶ್ರಫ್ ಅಲಿ ಮಾತನಾಡಿ, ಜಿಲ್ಲಾಡಳಿತ ನಿಗದಿಗೊಳಿಸುವ ದರಕ್ಕೆ ಬಾಡಿಗೆ ನೀಡುವುದಾಗಿ ತಿಳಿಸಿದರು. ಹುಬ್ಬಳ್ಳಿಯ ಸುಧಾಕರ ಶೆಟ್ಟಿ ಮಾತನಾಡಿ, ಹೋಟೆಲ್​ಗಳ ಖರ್ಚುವೆಚ್ಚ ಪರಿಶೀಲಿಸಿ ಜಿಲ್ಲಾಡಳಿತ ದರ ನಿಗದಿಗೊಳಿಸಬೇಕು ಎಂದು ಕೋರಿದರು.

    ಧಾರವಾಡ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಮಹೇಶ್ ಶೆಟ್ಟಿ ಮಾತನಾಡಿ, ಹೋಟೆಲ್ ಮಾಲೀಕರು ಜಿಲ್ಲಾಡಳಿತದೊಂದಿಗೆ ಕೆಲಸ ಮಾಡಲು ಆಸಕ್ತರಿದ್ದು, ಕ್ವಾರಂಟೈನ್​ಗೆ ನಿಗದಿಗೊಳಿಸಿದ ದರದಲ್ಲಿ ಸೇವೆ ನೀಡಲು ಸಿದ್ಧವಿರುವುದಾಗಿ ತಿಳಿಸಿದರು.

    ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತಹಸೀಲ್ದಾರ್ ಸಂತೋಷ ಬಿರಾದಾರ, ಹುಬ್ಬಳ್ಳಿ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಸುಕುಮಾರ ಶೆಟ್ಟಿ, ರವಿ ಗಾಯತೊಂಡೆ, ಚಂದ್ರಶೇಖರ್ ಪುರಾಣಿಕ, ಸಂತೋಷ ಶೆಟ್ಟಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts