More

    ಕ್ರೆಡೈ ಬಹುತೇಕ ಬೇಡಿಕೆಗಳಿಗೆ ಅಸ್ತು

    ಹುಬ್ಬಳ್ಳಿ: ಹು-ಧಾ ಅವಳಿ ನಗರದಲ್ಲಿ ಕಟ್ಟಡಗಳ ಎತ್ತರ 15 ಮೀಟರ್​ಗೆ ಹೆಚ್ಚಿಸುವುದು, ಲೇಔಟ್ ಒಳರಸ್ತೆಗಳ ಅಗಲ 9 ಮೀಟರ್​ಗೆ ಇಳಿಸುವುದು, 20 ಹೆಕ್ಟೇರ್​ನಲ್ಲೂ ಟೌನ್​ಶಿಪ್ ನಿರ್ವಣಕ್ಕೆ ಅನುಮತಿ ನೀಡುವುದು ಸೇರಿ ಕ್ರೆಡೈನ ಬಹುತೇಕ ಕೋರಿಕೆಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ಅಸ್ತು ಎಂದಿದೆ.

    ನವನಗರದ ಹುಡಾ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ನಾಗೇಶ ಕಲಬುರ್ಗಿ, ಕಾನ್ಪಿಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಶನ್ (ಕ್ರೆಡೈ) ನವರು ಬೆಳಗಾವಿಯಲ್ಲಿ ಕಟ್ಟಡಗಳ ಎತ್ತರ ಮಿತಿ 15 ಮೀಟರ್ ಇದೆ. ಅಲ್ಲದೆ, ಬಡಾವಣೆ ಒಳರಸ್ತೆ ಜೋನ್ ‘ಎ’ದಲ್ಲಿ 9 ಮೀಟರ್, ಹೊರಭಾಗ ಜೋನ್ ‘ಬಿ’ಯಲ್ಲಿ 12 ಮೀಟರ್ ನಿಗದಿ ಪಡಿಸಲಾಗಿದೆ. ಹುಬ್ಬಳ್ಳಿ- ಧಾರವಾಡದಲ್ಲೂ ಅದೇ ರೀತಿ ವಲಯ ನಿಯಮಾವಳಿ ಬದಲಾಯಿಸಿ ಎಂದು ಮನವಿ ಮಾಡಿದ್ದರು. ಈ ಬಗ್ಗೆ ಸಭೆಯಲ್ಲಿ ರ್ಚಚಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಗಿದೆ ಎಂದರು.

    ಸಿಎ ನಿವೇಶನಗಳ ಹಂಚಿಕೆ ಜವಾಬ್ದಾರಿ ಹುಡಾಕ್ಕಿದ್ದು, ಅದನ್ನು ಬದಲಿಸಲು ಕೇಳಲಾಗಿತ್ತು. ಆದರೆ, ಸಂಘ- ಸಂಸ್ಥೆಗಳು, ವಿವಿಧ ಕಾರ್ಯಚಟುವಟಿಕೆ ಅಭಿವೃದ್ಧಿ ದೃಷ್ಟಿಯಿಂದ ಈ ಅಧಿಕಾರವನ್ನು ಹುಡಾ ಬಳಿಯಲ್ಲಿಯೇ ಇಟ್ಟುಕೊಳ್ಳಲು ತೀರ್ವನಿಸಲಾಗಿದೆ ಎಂದರು.

    ದುರ್ಬಳಕೆ ತಡೆಗೆ ಕ್ರಮ: ಅವಳಿ ನಗರದಲ್ಲಿ ಸುಮಾರು 350 ಸಿಎ ನಿವೇಶನಗಳನ್ನು ಇದುವರೆಗೆ ಬೇರೆಬೇರೆ ಸಂಘ- ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಕೆಲವರು ಅವುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಇದ್ದು, ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಒಂದು ವೇಳೆ ಕೊಟ್ಟ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ ಎಂದಾದರೆ ಹಾಗೂ ನಿವೇಶನ ಪಡೆದು ಈವರೆಗೆ ಖಾಲಿ ಬಿಟ್ಟಿದ್ದರೆ ಅವುಗಳನ್ನು ವಾಪಸ್ ಪಡೆಯಲಾಗುವುದು ಎಂದು ನಾಗೇಶ ಎಚ್ಚರಿಸಿದರು.

    ಸಿಡಿಪಿಗೆ ಈಗಾಗಲೇ ಸರ್ಕಾರದ ಅನುಮತಿ ಸಿಕ್ಕಿದೆ. ಅದರ ಪರಿಷ್ಕರಣೆಗೆ ಟೆಂಡರ್ ಕರೆಯಲಾಗಿದ್ದು, ಪರಿಷ್ಕರಣೆ ತಂಡ ಬದಲಾವಣೆಗಳನ್ನು ಸೂಚಿಸಿದರೆ ಇನ್ನಾರು ತಿಂಗಳಲ್ಲಿ ಪರಿಷ್ಕೃತ ಸಿಡಿಪಿಗೆ ಅನುಮೋದನೆ ಪಡೆದು ಜಾರಿ ಮಾಡಲಾಗುವುದು ಎಂದರು.

    ಗಾರ್ಡನ್ ಜಾಗ ಒಂದೇ ಕಡೆ: ಹೊಸ ಲೇಔಟ್​ಗಳಲ್ಲಿ ಬೇಕಾಬಿಟ್ಟಿಯಾಗಿ ಎರಡು, ಮೂರು ಕಡೆಗಳಲ್ಲಿ ಗಾರ್ಡನ್ ಜಾಗ ಬಿಡುವುದಕ್ಕೆ ಇನ್ನು ಅವಕಾಶ ಇಲ್ಲ. ಏನಿದ್ದರೂ ಒಂದೇ ಕಡೆ ನಿಯಮಾವಳಿಯಂತೆ ಜಾಗ ಬಿಡಬೇಕು. ಅದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಲೇಔಟ್ ನಿರ್ವಪಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

    ಲೇಔಟ್​ಗೆ ಪರವಾನಗಿ: ಖಾಸಗಿಯವರು ಸಲ್ಲಿಸಿದ್ದ ಒಟ್ಟು 115 ಎಕರೆಯಲ್ಲಿ ನಿರ್ವಿುಸಲಾಗುವ ವಿವಿಧ ಹೊಸ ಲೇಔಟ್​ಗಳಿಗೆ ಪರವಾನಗಿ ನೀಡಲಾಗಿದೆ. ಅನಧಿಕೃತ ಲೇಔಟ್ ವಿರುದ್ಧ ಕಾರ್ಯಾಚರಣೆ ಜು. 7ರಿಂದ ಧಾರವಾಡದಲ್ಲಿ ನಡೆಯಲಿದೆ. ಈ ಮೊದಲು 57 ಅಕ್ರಮ ಲೇಔಟ್ ಗುರುತಿಸಲಾಗಿತ್ತು. ಸಮೀಕ್ಷೆ ಕಾರ್ಯ ಮುಂದುವರಿದಿದ್ದು, ಇನ್ನೂ 100ಕ್ಕೂ ಹೆಚ್ಚು ಅನಧಿಕೃತ ಲೇಔಟ್ ಪತ್ತೆಯಾಗುವ ಸಾಧ್ಯತೆ ಇದೆ. ಪ್ರಭಾವಿಗಳು, ಗೂಂಡಾ ವರ್ತನೆ ತೋರುವವರಿಗೆ ಸೊಪ್ಪು ಹಾಕದೇ ಅನಧಿಕೃತ ಲೇಔಟ್ ವಿರುದ್ಧ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ ಎಂದು ಕಲಬುರ್ಗಿ ಪುನರುಚ್ಚರಿಸಿದರು.

    ಅತಿಕ್ರಮಣ ತೆರವಿಗೆ ಕ್ರಮ: ಅವಳಿ ನಗರದಲ್ಲಿ ರಸ್ತೆ ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ನೂತನ ಜಿಲ್ಲಾಧಿಕಾರಿ ನಿತೇಶ ಪಾಟೀಲರಿಗೆ ಒತ್ತುವರಿ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರ ಕಾರ್ಯಾಚರಣೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು. ಪಿಬಿ ರಸ್ತೆ, ಒಳರಸ್ತೆಗಳು ಸೇರಿ ಎಲ್ಲೆಲ್ಲಿ ಅತಿಕ್ರಮಣವಾಗಿದೆ ಎಂಬುದನ್ನು ಗುರುತಿಸಿ ಆದಷ್ಟು ಬೇಗ ಕ್ರಮ ಜರುಗಿಸಲಾಗುವುದು. ರೈತರು ಜಮೀನು ನೀಡಲು ಮುಂದೆ ಬಂದರೆ ಹೊಸ ವಸತಿ ಬಡಾವಣೆ ನಿರ್ವಿುಸಲಾಗುವುದು. ಈ ವರೆಗೆ ಯಾವುದೇ ರೈತರು ಬಂದಿಲ್ಲ. ಹುಡಾಕ್ಕೆ ಜಮೀನು ನೀಡಲು ರೈತರು ಮುಂದೆ ಬರಬೇಕು ಎಂದರು.

    ಉಚಿತ ನಿವೇಶನ: ಹುತಾತ್ಮ ಯೋಧರಾದ ಹಸನ್​ಸಾಬ್ ಖುದಾಬಂದ್ ಹಾಗೂ ಬಸಪ್ಪ ಭಜಂತ್ರಿ ಅವರ ಕುಟುಂಬಕ್ಕೆ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಲಕಮನಹಳ್ಳಿಯಲ್ಲಿ ಉಚಿತ ನಿವೇಶನ ನೀಡಲಾಗಿದೆ. ಹಸನ್​ಸಾಬ್ ಹಾಗೂ ಬಸಪ್ಪ ಅವರ ಕುಟುಂಬ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ನಿವೇಶನ ಪತ್ರ ವಿತರಿಸಿದರು.

    ಅನಧಿಕೃತ ಲೇಔಟ್ ತೆರವಿಗೆ ಜಿಲ್ಲೆ ಜನಪ್ರತಿನಿಧಿಗಳ ಬೆಂಬಲ: ಹುಬ್ಬಳ್ಳಿ- ಧಾರವಾಡವನ್ನು ಸುವ್ಯವಸ್ಥಿತ ನಗರಗಳಾಗಿ ಪರಿವರ್ತಿಸಲು ಮುಂದಾಗಿರುವ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅನಧಿಕೃತ ಲೇಔಟ್​ಗಳ ವಿರುದ್ಧ ಸಾರಿರುವ ಸಮರಕ್ಕೆ ಧಾರವಾಡ ಜಿಲ್ಲೆಯ ಜನಪ್ರತಿನಿಧಿಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಇಲ್ಲಿಯ ನವನಗರದ ಹುಡಾ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಾಮಾನ್ಯ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಈಗಾಗಲೇ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ ಆರಂಭವಾಗಿದೆ. ಇದು ಬರೀ ಆರಂಭಶೂರತ್ವ ಅಲ್ಲ. ನಿರಂತರವಾಗಿ ನಡೆಯಲಿದೆ. ಅಚ್ಚುಕಟ್ಟು, ನಿಯಮಬದ್ಧ ನಗರ ನಿರ್ವಣಕ್ಕೆ ಸರ್ಕಾರ ಬದ್ಧವಾಗಿದ್ದು, ಜನರಲ್ಲಿ ಜಾಗೃತಿ ಸಹ ಮೂಡಿಸಲಾಗುತ್ತಿದೆ. ಹುಡಾ ಕಾರ್ಯಕ್ಕೆ ಸಭೆಯಲ್ಲಿ ಪಾಲ್ಗೊಂಡ ಎಲ್ಲ ಜನಪ್ರತಿನಿಧಿಗಳು ಸಹ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

    ಶಾಸಕರಾದ ಸಿ.ಎಂ. ನಿಂಬಣ್ಣವರ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಹುಡಾ ಆಯುಕ್ತ ಎನ್.ಎಚ್. ಕುಮ್ಮಣ್ಣವರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts