More

    ಕ್ರೀಡೆ ಮಾನಸಿಕ ಆರೋಗ್ಯ ವೃದ್ಧಿಗೂ ಸಹಕಾರಿ : ಡಾ. ಚಿಂತನಾ ಪಾಟ್ಕರ್

    ಮೈಸೂರು: ಕ್ರೀಡೆಯು ದೈಹಿಕ ಆರೋಗ್ಯ ಉತ್ತಮಗೊಳಿಸುವುದು ಮಾತ್ರವಲ್ಲದೆ ಮಾನಸಿಕ ಆರೋಗ್ಯ ವೃದ್ಧಿಗೂ ಸಹಕಾರಿಯಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗುವಂತೆ ಮಾಡಬೇಕು ಎಂದು ಅರವಳಿಕೆ ತಜ್ಞೆ, ಮ್ಯಾರಥಾನ್ ಪಟು ಡಾ. ಚಿಂತನಾ ಪಾಟ್ಕರ್ ಸಲಹೆ ನೀಡಿದರು.

    ನಗರದ ಓವಲ್ ಮೈದಾನದಲ್ಲಿ ಶನಿವಾರ ವಿದ್ಯಾವರ್ಧಕ ಪ್ರಥಮದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಬರಮಾಡಿಕೊಳ್ಳುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕ ಶಿಕ್ಷಣ ಪದ್ಧತಿಯು ಅಂಕಗಳಿಕೆಯ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ದಿನದ ಬಹುಪಾಲು ಸಮಯವನ್ನು ಓದಿನಲ್ಲಿ ಕಳೆಯುತ್ತಿದ್ದಾರೆ. ತರಗತಿ ಮುಗಿದ ನಂತರ ಟ್ಯೂಷನ್‌ಗೆ ತೆರಳುತ್ತಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಲು ಸಮಯ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಕ್ರೀಡಾ ಚಟುವಟಿಕೆಯಲ್ಲಿ ತೊಡಗುವುದರಿಂದ ಹಲವಾರು ಪ್ರಯೋಜನಗಳು ಇವೆ. ಕ್ರೀಡೆಯು ಪ್ರತಿಯೊಬ್ಬರನ್ನು ಸದೃಢರನ್ನಾಗಿಸುತ್ತದೆ. ಮಾನಸಿಕ ಒತ್ತಡ ನಿವಾರಿಸುವ ಶಕ್ತಿ ಕ್ರೀಡೆಗೆ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಪರೀಕ್ಷಾ ಒತ್ತಡದಿಂದ ಹೊರಬರಬಹುದು. ವಿದ್ಯಾರ್ಥಿಗಳ ಭವಿಷ್ಯ ಉತ್ತಮಗೊಳ್ಳಲು ಶಿಸ್ತು ತುಂಬಾ ಅವಶ್ಯಕವಾಗಿದ್ದು, ಕ್ರೀಡೆಯು ಶಿಸ್ತನ್ನು ಸಹ ಕಲಿಸುತ್ತದೆ. ಇಷ್ಟು ಮಾತ್ರವಲ್ಲದೆ, ಕ್ರೀಡೆಯು ಸಮಯದ ಮೌಲ್ಯ ತಿಳಿಸಿಕೊಡುತ್ತದೆ, ನಮ್ಮ ಭಾವನೆಗಳನ್ನು ನಿಯಂತ್ರಿಸಲು ಸಹ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

    ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್ ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರತಿನಿತ್ಯ ಕ್ರೀಡಾ ಚಟುವಟಿಕೆಯಲ್ಲಿ ತೊಡಗುವವರು ದಿನಪೂರ್ತಿ ಲವಲವಿಕೆಯಿಂದ ಇರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

    ವಿದ್ಯಾವರ್ಧಕ ಸಂಘದ ಖಜಾಂಚಿ ಶ್ರೀಶೈಲರಾಮಣ್ಣವರ್, ಪ್ರಾಂಶುಪಾಲ ಡಾ.ಎಸ್.ಮರೀಗೌಡ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ.ಎಸ್.ಪೂರ್ಣಿಮಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಹರಿಪ್ರಸಾದ್ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts