More

    ಕ್ರಿಮ್್ಸ ಕೋವಿಡ್ ವಾರ್ಡ್ ಮತ್ತಷ್ಟು ಹೈಟೆಕ್

    ಕಾರವಾರ; ಇಲ್ಲಿನ ಕ್ರಿಮ್್ಸ ಆಸ್ಪತ್ರೆಯ ಕೋವಿಡ್-ವಾರ್ಡ್ ಇನ್ನಷ್ಟು ಹೈಟೆಕ್ ಆಗಿದೆ. ತೀವ್ರ ಉಸಿರಾಟದ ಸಮಸ್ಯೆ ಹಾಗೂ ಇತರ ತೊಂದರೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ವಾರ್ಡ್​ನಲ್ಲಿ ಸೌಲಭ್ಯಗಳನ್ನು ಉನ್ನತೀಕರಿಸಲಾಗಿದೆ ಎಂದು ನಿರ್ದೇಶಕ ಡಾ.ಗಜಾನನ ನಾಯಕ ತಿಳಿಸಿದ್ದಾರೆ.

    ವಾರ್ಡ್​ನಲ್ಲಿ ಒಟ್ಟು 35 ಐಸಿಯು ಹಾಸಿಗೆಗಳ ವ್ಯವಸ್ಥೆ ಇದ್ದು, 33 ವೆಂಟಿಲೇಟರ್ ಸೌಲಭ್ಯವಿದೆ. 9 ಹೈ-ಪ್ರೋ ಆಕ್ಸಿಜನ್ ಯಂತ್ರವನ್ನು ಹೊಸದಾಗಿ ಅಳವಡಿಸಲಾಗಿದೆ. ಇದಕ್ಕೆ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಬೇಕಾಗಿದ್ದು, ಅದನ್ನು ಶೀಘ್ರದಲ್ಲಿ ಅಳವಡಿಸಲಾಗುವುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಕುಡ್ತರಕರ್ ತಿಳಿಸಿದ್ದಾರೆ. ಅಲ್ಲದೆ, ಮೂತ್ರಪಿಂಡ ಸಮಸ್ಯೆ ಇರುವವರಿಗೆ ಕರೊನಾ ಸೋಂಕು ತಗುಲಿದಲ್ಲಿ ಚಿಕಿತ್ಸೆಗಾಗಿ ಕರೊನಾ ವಾರ್ಡ್​ನಲ್ಲೇ ಒಂದು ಡಯಾಲಿಸಿಸ್ ಯಂತ್ರವನ್ನೂ ಅಳವಡಿಸಲಾಗಿದೆ ಎಂದು ಅರಿವಳಿಕೆ ತಜ್ಞ ಡಾ.ಮಂಜುನಾಥ ಭಟ್ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಗುರುವಾರ ಕ್ರಿಮ್ಸ್​ನ ನವೀಕೃತ ಕೋವಿಡ್ ವಾರ್ಡ್ ಹಾಗೂ 70 ಹಾಸಿಗೆಗಳ ಲಕ್ಷಣ ರಹಿತ ಸೋಂಕಿತರ ವಾರ್ಡ್​ಗೆ ಭೇಟಿ ನೀಡಿ ಪರಿಶೀಲಿಸಿದರು. ವಾರ್ಡ್​ನಲ್ಲಿ ರೋಗಿಗಳು ಕಾಲ ಕಳೆಯುವ ಸಲುವಾಗಿ ಒಂದು ಟಿವಿ ಅಳವಡಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಆರ್​ಎಂಒ ಡಾ.ವೆಂಕಟೇಶ, ಪಿಜಿಷಿಯನ್ ಡಾ. ಅಮಿತ್ ಕಾಮತ್, ಡಾ. ಭರತಕುಮಾರ ಹೆಗ್ಡೆ, ಡಾ. ಮಹೀಧರ ಎಸ್.ಎನ್., ಡಾ. ಆರವಿಂದ, ಶುಶ್ರೂಷಕಿಯರಾದ ಎಮಿಲಿಯಾ ಹಾಗೂ ಸುಷ್ಮಾ ನಾಯ್ಕ ಇದ್ದರು.

    ಕೋವಿಡ್​ನಿಂದ 3 ಸಾವು ಗುರುವಾರ ಜಿಲ್ಲೆಯ 198 ಜನರಿಗೆ ಕರೊನಾ ಇರುವುದು ಖಚಿತವಾಗಿದೆ. 111 ಜನ ಗುಣ ಹೊಂದಿ ಬಿಡುಗಡೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಯಲ್ಲಾಪುರ ಹಾಗೂ ಕಾರವಾರದಲ್ಲಿ ತಲಾ 12, ಅಂಕೋಲಾದಲ್ಲಿ 14, ಕುಮಟಾ ಹಾಗೂ ಹೊನ್ನಾವರದಲ್ಲಿ ತಲಾ 18, ಶಿರಸಿಯಲ್ಲಿ 16, ಭಟ್ಕಳದಲ್ಲಿ 22, ಜೊಯಿಡಾದಲ್ಲಿ 11, ಮುಂಡಗೋಡಿನಲ್ಲಿ 5, ದಾಂಡೇಲಿ ಹಾಗೂ ಹಳಿಯಾಳ ಸೇರಿ 57 ಜನರಲ್ಲಿ ಕರೊನಾ ಸೋಂಕು ಇರುವುದು ಖಚಿತವಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 4517ಕ್ಕೆ ಏರಿಕೆಯಾಗಿದೆ. 1123 ಸಕ್ರಿಯ ಪ್ರಕರಣಗಳಿವೆ. ಕಾರವಾರದಲ್ಲಿ 30, ಶಿರಸಿಯಲ್ಲಿ 34, ಹಳಿಯಾಳ ಹಾಗೂ ದಾಂಡೇಲಿಯಲ್ಲಿ 25, ಸಿದ್ದಾಪುರದಲ್ಲಿ 15, ಹೊನ್ನಾವರದಲ್ಲಿ 1, ಅಂಕೋಲಾದಲ್ಲಿ 6 ಜನರು ಕರೊನಾ ಸೋಂಕಿನಿಂದ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಇದುವರೆಗೆ 3346 ಜನ ಕರೊನಾಮುಕ್ತರಾಗಿದ್ದಾರೆ.

    ಕಾರವಾರ, ಹಳಿಯಾಳ ಹಾಗೂ ಮುಂಡಗೋಡಿನಲ್ಲಿ ಕರೊನಾದಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಒಟ್ಟಾರೆ ಮೃತರ ಸಂಖ್ಯೆ 48 ಕ್ಕೇರಿದೆ.

    ಗೋವಾ ಮುಕ್ತ ಸಂಚಾರಕ್ಕೆ ಸೆಪ್ಟೆಂಬರ್ 1ರಿಂದ ಅವಕಾಶ? ಕಾರವಾರ: ಗೋವಾ- ಕಾರವಾರ ನಡುವೆ ಮುಕ್ತ ಸಂಚಾರಕ್ಕೆ ಸೆ.1ರಿಂದ ಅವಕಾಶ ನೀಡುವುದಾಗಿ ಗೋವಾ ಸಿಎಂ ಪ್ರಮೋದ ಸಾವಂತ ಭರವಸೆ ನೀಡಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ. ಗೋವಾ ಪ್ರವೇಶಕ್ಕೆ 2 ಸಾವಿರ ರೂ. ನೀಡಿ ಕೋವಿಡ್ ಪರೀಕ್ಷೆ ಇಲ್ಲವೇ ಕ್ವಾರಂಟೈನ್ ಕಡ್ಡಾಯ ಎಂಬ ಅಲ್ಲಿನ ಸರ್ಕಾರದ ನಿಯಮಾವಳಿಯಿಂದ ಕಾರವಾರದ ಉದ್ಯೋಗಿಗಳಿಗೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಮೋದ ಸಾವಂತ ಅವರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ವಿವರಿಸಲಾಯಿತು. ಸ್ಪಂದಿಸಿದ ಸಿಎಂ, ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿಯಮಾವಳಿ ಸಡಿಲಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂಬುದಾಗಿ ಭರವಸೆ ನೀಡಿದ್ದಾರೆ ಎಂದು ರೂಪಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts