More

    ಕ್ರಿಮಿನಾಶಕ ಸಿಂಪಡಣೆ ತೀವ್ರಗೊಳಿಸಿದ ಪಾಲಿಕೆ

    ಹುಬ್ಬಳ್ಳಿ: ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಮಹಾನಗರ ಪಾಲಿಕೆ ಕ್ರಿಮಿನಾಶಕ ಸಿಂಪರಣೆಯನ್ನು ತೀವ್ರಗೊಳಿಸಿದೆ.

    ಶನಿವಾರ ಆರಂಭಿಸಿದ್ದ ಸಿಂಪಡಣೆ ಕಾರ್ಯಾಚರಣೆಯನ್ನು ಭಾನುವಾರ ಹೆಚ್ಚು ಸ್ಥಳಗಳಿಗೆ ವಿಸ್ತರಿಸಲಾಯಿತು. ಕರೊನಾ ಸೋಂಕು ದೃಢಪಟ್ಟ ವ್ಯಕ್ತಿಯ ನಿವಾಸ ಧಾರವಾಡದ ಹೊಸ ಯಲ್ಲಾಪುರ ಪ್ರದೇಶದಲ್ಲಿ ದಿನವಿಡಿ ಕ್ರಿಮಿನಾಶಕ ಸಿಂಪಡಣೆ ನಡೆಸಿದೆ.ಹುಬ್ಬಳ್ಳಿ ಚನ್ನಮ್ಮ ವೃತ್ತ, ಜನತಾ ಬಜಾರ್, ಸಿಬಿಟಿ, ಗಣೇಶಪೇಟ, ನವನಗರ, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸೋಡಿಯಂ ಹೈಪೋಕ್ಲೋರೈಟ್ ಹಾಗೂ ಬ್ಲಿಚಿಂಗ್ ಪೌಂಡರ್ ಸಿಂಪಡಣೆ ಮಾಡಲಾಯಿತು.

    ಭಾನುವಾರ ಒಂದೇ ದಿನ ಸಾವಿರ ಲೀಟರ್ ಹೈಪೋಕ್ಲೋರೈಟ್ ಬಳಕೆ ಮಾಡಲಾಗಿದೆ. 12 ವಲಯ ಕಚೇರಿಯಿಂದ ಕಾರ್ಯಾಚರಣೆ ನಡೆಸಲಾಗಿದೆ. 5 ಟನ್ ಬ್ಲಿಚಿಂಗ್ ಪೌಡರ್​ನ್ನು ಉಣಕಲ್ ಹಾಗೂ ಧಾರವಾಡದಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ನಿರ್ದೇಶನದ ಮೇರೆಗೆ ಕಾರ್ಯನಿರ್ವಾಹಕ ಇಂಜಿನಿಯರ್ ಆರ್. ವಿಜಯಕುಮಾರ, ಆರೋಗ್ಯಾಧಿಕಾರಿ ಡಾ. ಪಿ. ಎನ್. ಬಿರಾದಾರ, ಪರಿಸರ ಇಂಜಿನಿಯರ್ ಶ್ರೀಧರ್ ಟಿ. ಎನ್. ಕಾರ್ಯಾಚರಣೆ ನಡೆಸಿದರು.

    ವಿದೇಶದಿಂದ ಬಂದ ನಾಲ್ವರ ತಪಾಸಣೆ

    ಹುಬ್ಬಳ್ಳಿ: ವಿದೇಶದಿಂದ ಆಗಮಿಸಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಭಾನುವಾರ ಬಂದಿಳಿದ ನಾಲ್ವರ ತಪಾಸಣೆ ನಡೆಸಿದ ತಾಲೂಕು ಆರೋಗ್ಯ ಸಿಬ್ಬಂದಿ ನಾಲ್ವರಿಗೂ ಗೃಹ ವಾಸದಲ್ಲಿರಲು ಸೂಚಿಸಿದ್ದಾರೆ. ವಿದೇಶದಿಂದ ಆಗಮಿಸಿದ್ದ ನಾಲ್ವರು ದೇಶದ ವಿವಿಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ವೈದ್ಯರು ತಪಾಸಣೆ ನಡೆಸಿದಾಗ ಅವರಲ್ಲಿ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ. ಆದರೂ ಸಹ ವಿದೇಶದಿಂದ ಬಂದಿರುವ ಕಾರಣ ಅವರು 15 ದಿನಗಳ ಕಾಲ ಗೃಹವಾಸದಲ್ಲಿರಬೇಕು. ಯಾವುದೇ ಕಾರಣಕ್ಕೂ ಹೊರಗೆ ಬರಬಾರದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ನಿರಂತರ ತಪಾಸಣೆ ನಡೆಸಿದ ನಂತರ ಮುಂದಿನ ಸೂಚನೆ ನೀಡಲಾಗುವುದು ಎಂದು ವೈದ್ಯರು ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಚರ್ಚ್, ಮಸೀದಿಗಳಲ್ಲೂ ಜಾಗೃತಿ

    ಹುಬ್ಬಳ್ಳಿ: ಕರೊನಾ ಹರಡುವುದನ್ನು ತಡೆಯಲು ಚರ್ಚ್, ಮಸೀದಿಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ.

    ಇಲ್ಲಿಯ ಹಳೇ ಬಸ್ ನಿಲ್ದಾಣ ಬಳಿಯ ಮೈಯರ್ ಮೆಮೊರಿಯಲ್ ಚರ್ಚ್​ನ ಹಿರಿಯ ಸಭಾ ಪಾಲಕ ರೆ. ಕ್ರಿಸ್ತಾನಂದ ಕೊಳಚಿ ಹಾಗೂ ಇತರರು ಜನತಾ ಕರ್ಫ್ಯೂ ಆಚರಣೆ ಕೊನೆಯಲ್ಲಿ ಭಾನುವಾರ ಸಂಜೆ ಚಪ್ಪಾಳೆ ಮೂಲಕ ವೈದ್ಯರು, ಸೈನಿಕರು ಸೇರಿ ವಿವಿಧ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು. ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕರೆ ನೀಡಿದರು. ಬಿಡ್ನಾಳ ಎಂ.ಡಿ. ಕಾಲನಿಯ ಅಲೀ ಮಸೀದಿ ಸೇರಿ ವಿವಿಧ ಪ್ರಾರ್ಥನಾ ಮಂದಿರಗಳಲ್ಲಿ ಭಾನುವಾರ ಸಂಜೆ ಮೌಲ್ವಿಗಳು ಕರೊನಾ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳು, ಸರ್ಕಾರದ ಸೂಚನೆ ಪಾಲಿಸುವ ಕುರಿತು ವಿವರವಾಗಿ ತಿಳಿಸಿದರು.

    ಅಂಜುಮನ್ ಮನವಿ: ಧಾರವಾಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಹುಬ್ಬಳ್ಳಿಯ 130 ಮೊಹಲ್ಲಾ ಮುಸ್ಲಿಂ ಸಮಾಜ ಬಾಂಧವರು ಸಾಹೇಬ ಎ ಮೆಹರಾಜ ಜಾಗರಣೆಯನ್ನು ತಮ್ಮ ಮನೆಗಳಲ್ಲೇ ಮಾಡಬೇಕು. ನಮಾಜ, ಪಾತ್ಯಾ, ಪ್ರಾರ್ಥನೆಯನ್ನು ಕಡಿಮೆ ಅವಧಿಯಲ್ಲಿ ಮಾಡಬೇಕು ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಮಹಮದ್ ಯುಸುಫ್ ಸವಣೂರು ಹಾಗೂ ಉಪಾಧ್ಯಕ್ಷ ಅಲ್ತಾಫ್ ನವಾಜ್ ಎಂ. ಕಿತ್ತೂರು ವಿನಂತಿಸಿಕೊಂಡಿದ್ದಾರೆ. ಎಲ್ಲ 130 ಮೊಹಲ್ಲಾ ಮುಖಂಡರಿಗೆ ದೂರವಾಣಿ ಮೂಲಕ ಸಂದೇಶ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಆತಂಕ ಪಡದೆ ಮುನ್ನೆಚ್ಚರಿಕೆ ವಹಿಸಿ

    ಹುಬ್ಬಳ್ಳಿ: ಧಾರವಾಡದಲ್ಲಿ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ರ್ಚಚಿಸಿ, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಸಾರ್ವಜನಿಕರು ಆತಂಕ ಪಡದೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಸ್ಪಂಧಿಸಿ ಜನತಾ ಕರ್ಫ್ಯ ಮತ್ತು ಕರೊನಾ ಸೋಂಕು ವಿರುದ್ಧದ ಹೋರಾಟದಲ್ಲಿ ಹಗಲಿರುಳು ಸೇವೆ ಸಲ್ಲಿಸಿದ ವಿವಿಧ ವರ್ಗದವರಿಗೆ ಧನ್ಯವಾದ ತಿಳಿಸಿದ್ದಾರೆ.

    ಆತಂಕ ಪಡದೆ ಮುನ್ನೆಚ್ಚರಿಕೆ ವಹಿಸಿ: ಧಾರವಾಡದಲ್ಲಿ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ರ್ಚಚಿಸಿ, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಸಾರ್ವಜನಿಕರು ಆತಂಕ ಪಡದೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಸ್ಪಂಧಿಸಿ ಜನತಾ ಕರ್ಫ್ಯ ಮತ್ತು ಕರೊನಾ ಸೋಂಕು ವಿರುದ್ಧದ ಹೋರಾಟದಲ್ಲಿ ಹಗಲಿರುಳು ಸೇವೆ ಸಲ್ಲಿಸಿದ ವಿವಿಧ ವರ್ಗದವರಿಗೆ ಧನ್ಯವಾದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts