More

    ಕ್ರಷರ್‌ಗಳಿಂದ ಕಮಿಷನ್ ಪಡೆಯುತ್ತಿಲ್ಲವೆಂದು ಪ್ರಮಾಣ ಮಾಡಲಿ

    ನಾಗಮಂಗಲ: ತಾಲೂಕಿನಲ್ಲಿ ಅಕ್ರಮ ಕ್ರಷರ್‌ಗಳಿಂದ ಶಾಸಕ ಸುರೇಶ್‌ಗೌಡ ಕಮಿಷನ್ ಪಡೆಯುತ್ತಿಲ್ಲವೆಂದು ಹುಳ್ಳೇನಹಳ್ಳಿ ಮಾಯಮ್ಮ ದೇವಾಲಯಕ್ಕೆ ಬಂದು ಆಣೆ-ಪ್ರಮಾಣ ಮಾಡಲಿ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬಹಿರಂಗ ಸವಾಲು ಹಾಕಿದರು.

    ತಾಲೂಕಿನ ಕರಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಜಿಲ್ಲಾ ಮಟ್ಟದ ಸಭೆಗಳಲ್ಲಿ ಅಕ್ರಮ ಕ್ರಷರ್‌ಗಳ ಬಗ್ಗೆ ಧ್ವನಿ ಎತ್ತುವ ಸುರೇಶ್‌ಗೌಡ, ಶಾಸಕರಾಗಿ ಅಧಿಕಾರ ಹೊಂದಿದ್ದರೂ ಏಕೆ ಅಕ್ರಮಕ್ಕೆ ಕಡಿವಾಣ ಹಾಕುತ್ತಿಲ್ಲ. ತಾಲೂಕಿನಲ್ಲಿ 40ಕ್ಕೂ ಹೆಚ್ಚು ಅಕ್ರಮ ಕ್ರಷರ್‌ಗಳಿವೆ. ಇವುಗಳಿಂದ ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಗಣಿ ಮಾಲೀಕರಿಂದ ತಿಂಗಳಿಗೆ ಇಂತಿಷ್ಟು ಹಣವೆಂದು ನಿಗದಿ ಮಾಡಿಕೊಂಡು ಬೋಗಸ್ ಕ್ರಷರ್‌ಗಳು ನಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆಪಾದಿಸಿದರು.

    ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಂಪೂರ್ಣವಾಗಿ ಸತ್ತುಹೋಗಿದೆ. ಸಂಸದೆ ಸುಮಲತಾ ಅಂಬರೀಷ್ ಅಕ್ರಮ ಕ್ರಷರ್‌ಗಳ ಬಗ್ಗೆ ಧ್ವನಿ ಎತ್ತದಿದ್ದರೆ ಇನ್ನೆಷ್ಟರ ಮಟ್ಟಿಗೆ ನಡೆಯುತ್ತಿತ್ತೋ ಗೊತ್ತಿಲ್ಲ. ಸಂಸದೆ ಧ್ವನಿ ಎತ್ತಿದ ನಂತರ ಸ್ವಲ್ಪ ಹತೋಟಿಗೆ ಬಂದಿದೆ ಎಂದರು.

    ನನ್ನ ಬಳಿ ಗುದ್ದಲಿ, ಹಾರೆಕೋಲು ಹೊರತುಪಡಿಸಿ ಉಳಿದೆಲ್ಲವೂ ಇದೆ. ಮಾಜಿ ಸಂಸದ, ಮಾಜಿ ಶಾಸಕನೆಂಬ ಅಧಿಕಾರವಿಟ್ಟುಕೊಂಡು ಜನರ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತೇನೆ. ರಾಹುಲ್‌ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯಲ್ಲಿ ನಾನು ಪಾಲ್ಗೊಳ್ಳಬೇಕೆಂದು ಸಿದ್ಧನಾಗಿದ್ದೆ. ಆದರೆ ನನ್ನ ಕಾರ್ಯಕರ್ತರು ಪಾಲ್ಗೊಳ್ಳುವುದು ಬೇಡವೆಂದು ತಡೆದರು. ಆದರೆ ನನ್ನ ಕಾರ್ಯಕರ್ತರಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸೂಚಿಸಿದ್ದೆ ಎಂದರು.

    ತಾಲೂಕಿನಲ್ಲಿ ಜೆಡಿಎಸ್ ಪಕ್ಷದವರು ಅವರ ವರಿಷ್ಠರನ್ನು ಕರೆಸಿ ಬೃಹತ್ ಸಭೆ ನಡೆಸಿದ್ದಾರೆ. ಕಾಂಗ್ರೆಸ್‌ನವರು ರಾಹುಲ್‌ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಆದರೆ ನನಗೆ ದೇವೇಗೌಡರು, ರಾಹುಲ್‌ಗಾಂಧಿ ರೀತಿ ಯಾರೂ ವರಿಷ್ಠರಿಲ್ಲ. ನನಗೆ ಕಾರ್ಯಕರ್ತರೇ ವರಿಷ್ಠರಾಗಿದ್ದು, ಅವರೆಲ್ಲರನ್ನೂ ಒಗ್ಗೂಡಿಸಿ ಬೃಹತ್ ಸಮಾವೇಶ ಮಾಡುವ ಜತೆಗೆ 101 ಜೋಡಿಗಳಿಗೆ ಉಚಿತವಾಗಿ ಮದುವೆ ಮಾಡಿಸುತ್ತೇನೆ ಎಂದರು.

    ಬಗರ್‌ಹುಕುಂ ಓಟ್ ಗಿಮಿಕಷ್ಟೇ: ವೀರಾವೇಷದಿಂದ ಹಾಲ್ತಿಯಲ್ಲಿ ಜನರ ಮುಂದೆ ಅರಣ್ಯ ಇಲಾಖೆ ವಿರುದ್ಧ ಗುಡುಗಿದ್ದ ಶಾಸಕ ಏನು ಮಾಡಿದರು. ಕೇಸ್ ಹಾಕಿಸಿಕೊಂಡು ಸುಮ್ಮನಾಗಿದ್ದಾರೆ. ಚುನಾವಣೆ ಸಮೀಪಿಸುವವರೆಗೂ ನಾನು ಜಮೀನು ಮಾಡಿಕೊಡುತ್ತೇನೆಂದು ಬೋಗಸ್ ಹೇಳಿಕೆ ನೀಡುತ್ತಾ ಕಾಲಹರಣ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಶಾಸಕ ಸುರೇಶ್‌ಗೌಡ ಯಾರೊಬ್ಬರಿಗೂ ಜಮೀನು ಮಂಜೂರು ಮಾಡುವುದಿಲ್ಲ. ಬಗರ್ ಹುಕುಂ ಹೆಸರಿನಲ್ಲಿ ಎಕರೆಗೆ ಇಂತಿಷ್ಟು ಹಣವೆಂದು ನಿಗದಿ ಮಾಡಿ ಮಂಜೂರು ಮಾಡಿಕೊಡುತ್ತೇನೆಂದು ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೇಮರಾಜ್, ಮುಖಂಡರಾದ ಟಿ.ಕೃಷ್ಣಪ್ಪ, ಪಾಳ್ಯ ರಘು, ಸೋಮೇಶ್, ಮಂಜೇಗೌಡ, ಮನುಕೆಂಚೇಗೌಡ, ವಿಜಯ್‌ಕುಮಾರ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts