More

    ಕೋಲಾರದಿಂದ ಸ್ಪರ್ಧೆಗೆ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ: ಮಾಜಿ ಸ್ಪೀಕರ್​ ಕೆ.ಆರ್​. ರಮೇಶ್​ಕುಮಾರ್​ ಸಾರಥ್ಯದಲ್ಲಿ ಮಾತುಕತೆ

    ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ.
    ಮಾಜಿ ಸ್ಪೀಕರ್​ ಕೆ.ಆರ್​. ರಮೇಶ್​ಕುಮಾರ್​ ನೇತೃತ್ವದ ಕಾಂಗ್ರೆಸ್​ ಮುಖಂಡರ ನಿಯೋಗ ಬೆಂಗಳೂರಿನಲ್ಲಿ ಮಂಗಳವಾರ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಕೋಲಾರದಿಂದ ಸ್ಪರ್ಧಿಸುವಂತೆ ಮನವೊಲಿಸಲು ಪ್ರಯತ್ನಿಸಿದರು. ಎಲ್ಲರ ಮಾತುಗಳನ್ನು ತಾಳ್ಮೆಯಿಂದ ಆಲಿಸಿದ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದ ಮತದಾರರ ಸಭೆ ಕರೆದು, ಚರ್ಚಿಸಿ ತೀಮಾರ್ನ ಪ್ರಕಟಿಸುವುದಾಗಿ ಹೇಳಿದ್ದಾಗಿ ತಿಳಿದುಬಂದಿದೆ.


    ಸ್ವಕ್ಷೇತ್ರ ಚಾಮುಂಡಿಯಲ್ಲಿ ನನ್ನನ್ನು ಸೋಲಿಸಿದಾಗ ದೂರದ ಬಾದಾಮಿ ಕ್ಷೇತ್ರದ ಮತದಾರರು ಕೈಹಿಡಿದರು. ಕ್ಷೇತ್ರ ಬಿಡಬಾರದು ಎಂದು ಬಾದಾಮಿ ಜನರ ನನ್ನನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಬಾದಾಮಿ ದೂರದಲ್ಲಿರುವುದರಿಂದ ಅಗತ್ಯಬಿದ್ದಾಗ ಹೋಗಿ ಬರಲು ಇತ್ತೀಚೆಗೆ ಸ್ವಲ್ಪಮಟ್ಟಿಗೆ ತೊಂದರೆಯಾಗುತ್ತಿರುವುದು ಸತ್ಯ. ಬಾದಾಮಿ ಮತದಾರರು, ಮುಖಂಡರ ಸಭೆ ಕರೆದು ವಸ್ತುಸ್ಥಿತಿ ವಿವರಿಸುತ್ತೇನೆ. ಆ ಕ್ಷೇತ್ರದಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಯನ್ನು ಆರಿಸಿಕೊಳ್ಳಬೇಕಿದೆ. ಅದಾದ ನಂತರ ಕೋಲಾರದಿಂದ ಸ್ಪರ್ಧಿಸುವ ತೀಮಾರ್ನ ಪ್ರಕಟಿಸುತ್ತೇನೆ ಎಂದು ಮುಖಂಡರಿಗೆ ಭರವಸೆ ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.


    ಮೊದಲಿಗೆ ಮಾಜಿ ಸ್ಪೀಕರ್​ ಕೆ.ಆರ್​. ರಮೇಶ್​ ಕುಮಾರ್​ ವಿಷಯ ಪ್ರಸ್ತಾಪಿಸಿದ್ದು, ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದರಿಂದ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮೇಲೆ ಪ್ರಭಾವ ಉಂಟಾಗುತ್ತದೆ. ಕಾಂಗ್ರೆಸ್​ ಬಹುತೇಕ ಕಡೆ ಗೆಲುವು ಸಾಧಿಸುತ್ತದೆ. ಎಲ್ಲರೂ ಒಗ್ಗಟ್ಟಾಗಿದ್ದು, ನಿಮ್ಮ ಸ್ಪರ್ಧೆ ಅಪೇಕ್ಷಿಸುತ್ತಿದ್ದಾರೆ ಎಂದು ಮನವಿ ಮಾಡಿದರು.


    ಮಾಜಿ ಸಚಿವ, ಶಾಸಕ ಕೃಷ್ಣಬೈರೇಗೌಡ ಮಾತನಾಡಿ, ನಿಮ್ಮ ಸ್ಪರ್ಧೆಯಿಂದ ಕೋಲಾರ ಮತ್ತು ಸುತ್ತಲಿನ ಜಿಲ್ಲೆಗಳ ಅಭಿವೃದ್ಧಿಯಾಗುತ್ತದೆ. ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಮನದಿಚ್ಛೆ ಇದೇ ಆಗಿದೆ. ಎಲ್ಲ ಮುಖಂಡರು ಒಗ್ಗಟ್ಟಾಗಿದ್ದು, ಸ್ಪರ್ಧೆಗೆ ಒಲವು ತೋರಬೇಕು ಎಂದರು.


    ಮಾಜಿ ಸಚಿವರಾದ ಎಚ್​.ಸಿ. ಮಹದೇವಪ್ಪ, ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ, ಶಾಸಕರಾದ ಕೋಲಾರದ ಕೆ. ಶ್ರೀನಿವಾಸಗೌಡ, ಶಿಡ್ಲಘಟ್ಟದ ವಿ. ಮುನಿಯಪ್ಪ, ಗೌರಿಬಿದನೂರಿನ ಎನ್​.ಎಚ್​. ಶಿವಶಂಕರ ರೆಡ್ಡಿ, ಬಂಗಾರಪೇಟೆಯ ಎಸ್​.ಎನ್​. ನಾರಾಯಣ್ವಾಮಿ, ಬಾಗೇಪಲ್ಲಿಯ ಸುಬ್ಬಾರೆಡ್ಡಿ ಮಾಲೂರಿನ ಕೆ.ವೈ. ನಂಜೇಗೌಡ, ಹೊಸಕೋಟೆಯ ಶರತ್​ ಬಚ್ಚೇಗೌಡ, ವಿಧಾನಪರಿಷತ್​ ಸದಸ್ಯರಾದ ನಸೀರ್​ ಅಹಮದ್​, ಎಂ.ಎಲ್​. ಅನಿಲ್​ ಕುಮಾರ್​, ಮಾಜಿ ಶಾಸಕರಾದ ಚಿಂತಾಮಣಿಯ ಡಾ. ಎಂ.ಸಿ. ಸುಧಾಕರರೆಡ್ಡಿ, ಮುಳಬಾಗಿಲಿನ ಕೊತ್ತೂರು ಜಿ. ಮಂಜುನಾಥ್​, ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜಿಪಂ ಮಾಜಿ ಅಧ್ಯಕ್ಷರಾದ ಜನಘಟ್ಟ ವೆಂಕಟಮುನಿಯಪ್ಪ, ಶ್ರೀನಿವಾಸಪುರ ಎಂ. ಶ್ರೀನಿವಾಸನ್​, ಶಿಡ್ಲಘಟ್ಟದ ಸುಬ್ರಮಣಿ, ದಲಿತ ಮುಖಂಡರಾದ ಸಿ.ಎಂ.ಮುನಿಯಪ್ಪ, ಎನ್​.ಮುನಿಸ್ವಾಮಿ, ಮು.ತಿಮ್ಮಯ್ಯ, ಗೊಲ್ಲಹಳ್ಳಿ ಶಿವಪ್ರಸಾದ್​, ವಕ್ಕಲೇರಿ ರಾಜಪ್ಪ, ಕೋಲಾರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಂಬರೀಶ್​ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts