More

    ಎಕ್ಸ್‌ಪ್ರೆಸ್ ಲಿಂಕ್ ನಾಲೆಗೆ ಮೂರು ಹಿಡಿ ಮಣ್ಣು !!

    ಗುಬ್ಬಿ: ರಾಮನಗರ ಮತ್ತು ಮಾಗಡಿಗೆ ಹೇಮೆ ನೀರು ಕೊಂಡೊಯ್ಯುವ ಮೂಲಕ ಜಿಲ್ಲೆಯ ರೈತರಿಗೆ ವಿಷ ಪ್ರಾಶನ ಮಾಡಿಸುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕಾಲುವೆಗೆ ಮೂರು ಹಿಡಿ ಮಣ್ಣು ಸುರಿಯುವ ಮೂಲಕ ಹೋರಾಟವನ್ನು ತೀವ್ರಗೊಳಿಸಲಾಯಿತು. ಇದೇ ವೇಳೆ ತುಮಕೂರು ನಗರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅಣಕು ಶವಯಾತ್ರೆ ನಡೆಸಿದ ಬಳಿಕ ಡಿ.ರಾಂಪುರ ಕಾಲುವೆಯಲ್ಲಿ ಶವಸಂಸ್ಕಾರ ಮಾಡಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

    ಗುಬ್ಬಿ ತಾಲೂಕು ಕಡಬ ಹೋಬಳಿ ಸಂಕಾಪುರ ಮಜರೆ ಗ್ರಾಮದ ಬಳಿ ನಮ್ಮ ನೀರು, ನಮ್ಮ ಹಕ್ಕು ಘೋಷಣೆಯೊಂದಿಗೆ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸ್ಥಗಿತಗೊಳಿಸುವಂತೆ ಕರೆ ನೀಡಿದ್ದ ಹೋರಾಟಕ್ಕೆ ಸಾಗರೋಪಾದಿಯಲ್ಲಿ ಜಮಾಯಿಸಿದ ರೈತರು, ಸಾರ್ವಜನಿಕರು ಗುರುವಾರ ಜಿಲ್ಲೆಯ ಅತಿ ದೊಡ್ಡ ನೀರಾವರಿ ಹೋರಾಟಕ್ಕೆ ಸಾಕ್ಷಿಯಾದರು.

    ತಾಲೂಕಿನ ಗಡಿ ಭಾಗದ ಡಿ.ರಾಂಪುರ ಬಳಿಯ ಎಕ್ಸ್‌ಪ್ರೆಸ್ ಕೆನಾಲ್ ಆರಂಭಿಕ ಸ್ಥಳದಲ್ಲಿ ನಾಲೆಗೆ ಎಲ್ಲಾ ರೈತರು, ಮಠಾಧೀಶರು, ಜನಪ್ರತಿನಿಧಿಗಳು ಮೂರು ಹಿಡಿ ಮಣ್ಣು ಹಾಕಿ ಯೋಜನೆಗೆ ಅಂತ್ಯ ಸಂಸ್ಕಾರ ಮಾಡಿದ್ದಲ್ಲದೆ, ರಕ್ತ ಕೊಟ್ಟೆವು ನೀರು ಕೊಡೆವು ಎಂಬ ಘೋಷಣೆ ಕೂಗಿ ಸರ್ಕಾರದ ವಿರುದ್ಧ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದರು. ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷ ವಾಕ್ಯದ ಹೋರಾಟವನ್ನು ಯೋಜನೆ ಕೈಬಿಡುವವರೆವಿಗೂ ನಡೆಸಲು ನಿರ್ಧರಿಸಿ ಸಾಂಕೇತಿಕ ಪ್ರತಿಭಟನಾ ಸಭೆ ಮೂಲಕ ನಡೆಸಿ ಸರ್ಕಾರಕ್ಕೆ ಮೊದಲ ಎಚ್ಚರಿಕೆ ಸಂದೇಶ ರವಾನಿಸಲಾಯಿತು.

    ಸಚಿವದ್ವಯರು ರಾಜೀನಾಮೆ ನೀಡಲಿ: ಜಿಲ್ಲೆಯ ಶಾಸಕರು ಪಕ್ಷಾತೀತವಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ನಾವು ರೈತರಿಂದ ಆಯ್ಕೆಯಾದವರು ರೈತರಿಗೆ ಅನ್ಯಾಯವಾಗುತ್ತಿದೆ ಅಂದಮೇಲೆ ನಮಗೇಕೆ ಶಾಸಕ ಸ್ಥಾನ. ಈಗಾಗಲೇ ಕೆಡಿಪಿ ಸಭೆಯಲ್ಲಿ ಈ ಯೋಜನೆಯನ್ನು ಕೈ ಬಿಡುವ ಸಂಬಂದ ನಿರ್ಣಯ ತೆಗೆದುಕೊಂಡಿದ್ದರು ಕಾಮಗಾರಿ ಆರಂಭಿಸಿರುವುದು ಕೇವಲ ಕಣ್ಣೊರೆಸುವ ತಂತ್ರವೇನೋ ಅನಿಸುತ್ತಿದೆ. ಇದಕ್ಕೆ ಮೊದಲು ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ರಾಜೀನಾಮೆ ನೀಡುವಂತೆ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಒತ್ತಾಯಿಸಿದರು.

    ನೀವೆಲ್ಲಾ ಆಯ್ಕೆ ಮಾಡಿರುವ ಸ್ಥಳೀಯ ಶಾಸಕ ಎಸ್.ಆರ್.ಶ್ರೀನಿವಾಸ್ ರೈತರಿಗೆ ಅನ್ಯಾಯವಾಗುತ್ತಿರುವುದನ್ನು ಕಂಡು ಹೋರಾಟದಲ್ಲಿ ಭಾಗವಹಿಸಬೇಕಿತ್ತು. ಅವರು ಮೌನ ತಾಳಿರುವುದು ನಿಜಕ್ಕೂ ದುರದೃಷ್ಟಕರ. ತುಮಕೂರು ಶಾಖಾ ನಾಲೆ ಆಧುನೀಕರಣಕ್ಕೆ ಬಿಜೆಪಿ ಸರ್ಕಾರವಿದ್ದಾಗ 600 ಕೋಟಿ ರೂ., ಅನುದಾನ ಮಂಜೂರು ಮಾಡಿ ನಾಲೆ ಅಗಲೀಕರಣ ಮಾಡಿ ಯೋಜನೆ ಕೊನೆಭಾಗಕ್ಕೆ ಸರಾಗವಾಗಿ ನೀರು ಹರಿಸಲು ಕ್ರಮವಹಿಸಿದ್ದರು ಈ ಯೋಜನೆಯ ಔಚಿತ್ಯವಾದರು ಏನು ಎಂದು ತರಾಟೆಗೆ ತೆಗೆದುಕೊಂಡರು.

    ಜನ ತೀರ್ಮಾನ ಮಾಡಿದರೆ ಸರ್ಕಾರವೇ ಉರುಳುತ್ತದೆ. ಈ ಅಕ್ರಮ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲವೇ. ಹಾಗಾಗಿ ಒಗ್ಗಟ್ಟು ಪ್ರದರ್ಶನ ಮಾಡಿ ನಾಲೆ ಮುಚ್ಚುವ ಕೆಲಸ ಮಾಡೋಣ. ಜೆಸಿಬಿ ಯಂತ್ರ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಹಾಗಾಗಿ ನಿರಂತರ ಹೋರಾಟ ನಡೆಸೋಣ. ಜೂನ್ 5 ರವರೆಗೆ ಗಡುವು ನೀಡಿ ಯೋಜನೆ ಕೈ ಬಿಡಲು ಎಚ್ಚರಿಸಲಾಗಿದೆ. ಈ ಮಧ್ಯೆ ಎಲ್ಲಿಯೇ ಕೆಲಸ ನಡೆದರೂ ಯಂತ್ರಗಳನ್ನು ತಡೆದು ಕೆಲಸ ನಿಲ್ಲಿಸಿ ನಾವು ನಿಮ್ಮ ಜತೆ ಇರುತ್ತೇವೆ ಎಂದು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಗುಡುಗಿದರು.

    ಹೋರಾಟಕ್ಕೆ ಮಠಾಧೀಶರ ಸಾಥ್
    ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧದ ಪ್ರತಿಭಟನೆಯಲ್ಲಿ ಗೋಡೆಕೆರೆ ಮಠದ ಮೃತ್ಯುಂಜಯ ಸ್ವಾಮೀಜಿ, ದೊಡ್ಡಗುಣಿ ಮಠದ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ, ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ನೀಲಕಂಠ ಆಚಾರಿ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಮಠದ ಕಾರದ ವೀರಬಸವ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ, ಬೆಟ್ಟದಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ,

    ಹಾಲಿ, ಮಾಜಿ ಶಾಸಕರು ಭಾಗಿ
    ಮಾಜಿ ಸಚಿವ ಸೊಗಡುಶಿವಣ್ಣ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕರಾದ ಮಸಾಲೆ ಜಯರಾಮ್, ಪಿ.ಆರ್.ಸುಧಾಕರ್ ಲಾಲ್, ಎಚ್.ನಿಂಗಪ್ಪ, ಮುಖಂಡರಾದ ಎಸ್.ಡಿ.ದಿಲೀಪ್‌ಕುಮಾರ್, ಬಿ.ಎಸ್.ನಾಗರಾಜು , ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ, ಎಚ್.ಟಿ ಭೈರಪ್ಪ, ವಿನಯ್ ಬಿದರೆ, ಜಿ.ಎನ್.ಬೆಟ್ಟಸ್ವಾಮಿ, ಲೋಕೇಶ್ವರ್, ಕೆ.ಟಿ.ಶಾಂತಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಬಿಜೆಪಿ ಖಜಾಂಜಿ ಡಾ.ಎಸ್.ಪರಮೇಶ್ ಸೇರಿದಂತೆ ಬಿಜೆಪಿ-ಜೆಡಿಎಸ್ ಹಾಗೂ ರೈತ ಸಂಘಟನೆ ಪದಾಧಿಕಾರಿಗಳು, ಹಲವು ಮುಖಂಡರು, ಕಾರ್ಯಕರ್ತರು, ಸಾವಿರಾರು ರೈತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts