More

    ಕೋಲಾರಕ್ಕೆ ಪಿಯುಸಿಯಲ್ಲಿ ಶೇ. 60.41 ಫಲಿತಾಂಶ; ವಿಜ್ಞಾನ, ವಾಣಿಜ್ಯದಲ್ಲಿ 593 ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳು, ಜಿಲ್ಲೆಗೆ 24ನೇ ಸ್ಥಾನ

    ಕೋಲಾರ: ದ್ವೀತಿಯ ಪಿಯುಸಿಯಲ್ಲಿ ಜಿಲ್ಲೆ ಶೇ.60.41 ಫಲಿತಾಂಶ ದಾಖಲಿಸಿದ್ದು ರಾಜ್ಯದಲ್ಲಿ 24ನೇ ಸ್ಥಾನ ಪಡೆದಿದೆ. ಪರೀಕ್ಷೆಗೆ ಕುಳಿತಿದ್ದ 14740 ವಿದ್ಯಾರ್ಥಿಗಳಲ್ಲಿ 8904 ಮಂದಿ ಉತ್ತೀರ್ಣರಾಗಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ ಮುಳಬಾಗಿಲು ಎಸ್​ಡಿಸಿ ಕಾಲೇಜಿನ ಫರ್ವೀನ್​ ಫಾತಿಮಾ 593 ಅಂಕ, ವಾಣಿಜ್ಯ ವಿಭಾಗದಲ್ಲಿ ಬಂಗಾರಪೇಟೆ ಎಸ್​ಡಿಸಿ ಕಾಲೇಜಿನ ಅದಿತಿ ಕಲ್ಗಟಗಿ 593 ಅಂಕ ಹಾಗೂ ಕಲಾ ವಿಭಾಗದಲ್ಲಿ ಕೋಲಾರದ ಬಾಲಕಿಯರ ಸರ್ಕಾರಿ ಜೂನಿಯರ್​ ಕಾಲೇಜಿನ ಆರ್​.ಇಂದು, ಬಿ.ಕೀರ್ತನಾ 567 ಅಂಕ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಮುಳಬಾಗಿಲು ಎಸ್​ಡಿಸಿ ಕಾಲೇಜಿನ ಆರ್​.ಸಂಧ್ಯಾ, ಕೋಲಾರದ ಮಹಿಳಾ ಸಮಾಜ ಕಾಲೇಜಿನ ಆರ್​.ಕಾರ್ತಿಕ 592 ಅಂಕಗಳೊಂದಿಗೆ ಜಿಲ್ಲೆಗೆ ದ್ವೀತಿಯ ಸ್ಥಾನ ಹಂಚಿಕೊಂಡಿದ್ದಾರೆ.

    ವಿಭಾಗವಾರು ಫಲಿತಾಂಶ ವಿವರ: ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ 5217 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 3377 ಮಂದಿ ಉತ್ತೀರ್ಣರಾಗುವ ಮೂಲಕ ಶೇ.69.2 ಫಲಿತಾಂಶ ಬಂದಿದ್ದು, ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ವಾಣಿಜ್ಯದಲ್ಲಿ 7766 ಮಂದಿ ಪರೀಕ್ಷೆ ಬರೆದಿದ್ದು, 4793 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 61.72 ಫಲಿತಾಂಶ ಲಭ್ಯವಾಗಿದೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 2094 ಮಂದಿಯಲ್ಲಿ ಕೇವಲ 734 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 35.05 ಫಲಿತಾಂಶ ಬಂದಿದೆ. ಇದು ಜಿಲ್ಲೆಯ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

    ನಗರ ವಿದ್ಯಾರ್ಥಿಗಳು ಮೇಲುಗೈ: ನಗರ ವ್ಯಾಪ್ತಿಯ ಕಾಲೇಜುಗಳಲ್ಲಿ 11277 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು. 7061 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.62.06 ಫಲಿತಾಂಶ ಬಂದಿದೆ. ಗ್ರಾಮೀಣ ಪ್ರದೇಶದ ಪಿಯು ಕಾಲೇಜುಗಳಿಂದ ಒಟ್ಟು 3363 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 1843 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 54.8 ಫಲಿತಾಂಶ ಬಂದಿದೆ.

    ಸಹ್ಯಾದ್ರಿ ಕಾಲೇಜಿಗೆ ಶೇ. 95 ಫಲಿತಾಂಶ: ಕೋಲಾರ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಪರೀಕ್ಷೆಗೆ ಕುಳಿತಿದ್ದ 399 ಮಂದಿಯಲ್ಲಿ 380 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನದಲ್ಲಿ ಎಂ.ಮನೋಹರ್​ 586 ಅಂಕ, ವಾಣಿಜ್ಯದಲ್ಲಿ ಇ.ಪಿ.ಜೀವಿತಾ 586 ಅಂಕ, ಎಸ್​.ದರ್ಶನ್​ಗೆ ಪಿಸಿಎಂಬಿ ವಿಷಯಗಳಲ್ಲಿ ಶೇ. 100 ಸಾಧನೆ ಮಾಡಿದ್ದು, 400ಕ್ಕೆ 400 ಅಂಕಗಳು ಬಂದಿದೆ ಎಂದು ಕಾಲೇಜಿನ ಆಡಳಿತಾಧಿಕಾರಿ ಉದಯಕುಮಾರ್​, ಪ್ರಾಂಶುಪಾಲ ಜಿ.ವಿ.ಕೃಷ್ಣಪ್ಪ ತಿಳಿಸಿದ್ದಾರೆ.

    ಸಾಯಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ಬೇತಮಂಗಲದ ಶ್ರೀಸಾಯಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದು, ಕಾಲೇಜಿನ ಕೆ.ವಿ.ದಿವ್ಯಶ್ರೀ 589 ಅಂಕಗಳೊಂದಿಗೆ ಕಾಲೇಜಿಗೆ ಮೊದಲಿಗರಾಗಿದ್ದಾರೆ. ಕೆ.ಎಸ್​.ಕಿರಣ್​ ಕುಮಾರ್​ 581 ಹಾಗೂ ಬಿ.ಎನ್​.ಭಾರ್ಗವಿ 580 ಅಂಕಗಳನ್ನು ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

    2 ವರ್ಷ ಕರೊನಾ ಕಾಡಿದ ಪರಿಣಾಮ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿಗಳನ್ನು ನಡೆಸಿ, ಕೈಗೆ ಮೊಬೈಲ್​ ನೀಡಿದ್ದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ರಾಜ್ಯದಲ್ಲಿ 596 ಅಂಕ ಪಡೆದ 5 ವಿದ್ಯಾರ್ಥಿಗಳು ಮೊದಲಿಗರಾಗಿದ್ದರೆ, ಜಿಲ್ಲೆಯಲ್ಲಿ ವಿಜ್ಞಾನ, ವಾಣಿಜ್ಯದಲ್ಲಿ 593 ಅಂಕ ಗಳಿಸುವ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಿ ಪೈಪೋಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಫಲಿತಾಂಶ ಉತ್ತಮಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
    |ರಾಮಚಂದ್ರಪ್ಪ, ಪ.ಪೂ.ಶಿಕ್ಷಣ ಉಪನಿರ್ದೇಶಕ, ಕೋಲಾರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts