More

    ಕೋಡಿ ಹರಿದ ಕೋಲಾರಮ್ಮ ಕೆರೆ

    ಕೋಲಾರ: ನಿರೀಕ್ಷೆಯಂತೆಯೇ ಕೋಲಾರಮ್ಮ ಕೆರೆ ಗುರುವಾರ ಬೆಳಗಿನ ಜಾವ ಕೋಡಿ ಹರಿದಿದ್ದು, ಎರಡು ಕೋಡಿಗಳಲ್ಲೂ ಸ್ಥಳೀಯರು ಗಂಗಾಮಾತೆಗೆ ಪೂಜೆ ಸಲ್ಲಿಸುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. 789 ಎಕರೆ ವಿಸ್ತೀರ್ಣ ಹೊಂದಿ 659 ಎಕರೆ ಜಲವಿಸ್ತೀರ್ಣ ಹೊಂದಿರುವ ಕೋಲಾರಮ್ಮ ಕೆರೆಗೆ ಮೂರು ತಿಂಗಳಿಂದ ಕೆಸಿ ವ್ಯಾಲಿ ಯೋಜನೆಯಡಿ ತ್ಯಾಜ್ಯ ನೀರು ಸಂಸ್ಕರಿಸಿ ಹರಿಸಲಾಗುತ್ತಿದ್ದು, ಇದರೊಂದಿಗೆ ಇತ್ತೀಚೆಗೆ ಸುರಿಯುತ್ತಿರುವ ಮಳೆ ನೀರು ರಾಜಕಾಲುವೆ ಮೂಲಕ ಕೆರೆಗೆ ಹರಿದು ಬಂದಿದೆ.

    ಬುಧವಾರ ರಾತ್ರಿ ಉತ್ತಮ ಮಳೆಯಾಗಿದ್ದರಿಂದ ಗುರುವಾರ ಬೆಳಗ್ಗೆ 4 ಗಂಟೆ ವೇಳೆಗೆ ಪೂರ್ವ ದಿಕ್ಕಿನಲ್ಲಿರುವ ಕೆರೆ ಕೋಡಿ ಹರಿದಿದೆ. ವಿಷಯ ತಿಳಿದ ಸ್ಥಳೀಯರು ಗೃಹರಕ್ಷಕ ದಳದ ಕಚೇರಿ ಹಿಂಭಾಗದಲ್ಲಿನ ಕೆರೆ ಕೋಡಿಯಲ್ಲಿನ ದುಗಲಮ್ಮ ದೇವಿ ಮೂರ್ತಿಗೆ ಅರಶಿಣ-ಕುಂಕುಮ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇವಿ ಶಿರದ ಮೇಲೆ ಇಟ್ಟಿದ್ದ ಹೂವು ತಾನಾಗಿಯೇ ಬಿದ್ದಿದ್ದರಿಂದ ನೆರೆದಿದ್ದ ಸಾರ್ವಜನಿಕರು ಪುಳಕಗೊಂಡು ಶುಭ ಸೂಚನೆ ಎಂದು ಉದ್ಘರಿಸಿದರು.

    ಉದ್ದನೆಯ ಕೆರೆಕೋಡಿಯಿಂದ ನೀರು ಬಿಳಿ ಹಾನಿನ ನೊರೆಯಂತೆ ಧುಮ್ಮಿಕ್ಕುತ್ತಿರುವುದನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸಿದ್ದು, ದೃಶ್ಯ ಕಣ್ತುಂಬಿಕೊಳ್ಳುವ ಜತೆಗೆ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಂಭ್ರಮಿಸುತ್ತಿದ್ದಾರೆ.

    ಇತ್ತ ಹಳೇ ಮದ್ರಾಸ್ ರಸ್ತೆಯಲ್ಲಿನ ಕೋಲಾರಮ್ಮ ಕೆರೆ ಹಳೇ ಸೇತುವೆ ಬಳಿಯ ಕೆರೆ ಕೋಡಿಯ ಒಂದು ಭಾಗದಲ್ಲಷ್ಟೇ ಅಲ್ಪಪ್ರಮಾಣದಲ್ಲಿ ಕೋಡಿಹರಿದಿದೆ. ರಸ್ತೆ ಇಕ್ಕೆಲಗಳಲ್ಲಿ ಜನ ನಿಂತು ಕೋಡಿ ಹರಿಯುವುದನ್ನು ನೋಡುವ ದೃಶ್ಯ ಸಾಮಾನ್ಯವಾಗಿದೆ.
    ಎಂಬಿ ರಸ್ತೆಯಲ್ಲಿನ ಕೆರೆ ಕೋಡಿಯಿಂದ ಹಿಡಿದು ಕೆರೆಯ ಶೇ.60ಕ್ಕೂ ಅಧಿಕ ಭಾಗದಲ್ಲಿ ಬೆಳೆದಿರುವ ಜೊಂಡು ನೀರನ್ನು ಹೀರುತ್ತಿದೆ. ಡಿ.ಕೆ. ರವಿ ಜಿಲ್ಲಾಧಿಕಾರಿಯಾಗಿದ್ದಾಗ ಸ್ವಚ್ಛ ಮಾಡಿದ್ದ ರಾಜಕಾಲುವೆಯನ್ನು ನಂತರ ಸ್ವಚ್ಛಗೊಳಿಸದಿರುವುದರಿಂದ ಅಂತರಗಂಗೆ ಬೆಟ್ಟದಿಂದ ಕೋಲಾರಮ್ಮ ಕೆರೆಗೆ ನೀರು ಹರಿಯುವ ರಾಜಕಾಲುವೆಯಲ್ಲೂ ಜೊಂಡು ಬೆಳೆದಿದೆ. ಕಸ ಕಡ್ಡಿ, ತ್ಯಾಜ್ಯ ತುಂಬಿ ನೀರು ಕೆರೆಗೆ ಹರಿಯಲು ಸಾಧ್ಯವಾಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts